ಐಎಎಸ್ ಅಧಿಕಾರಿ ಪ್ರಭುಗೆ ಒಕ್ಕಲಿಗ ಸಂಘಟನೆಗಳ ಅಭಿನಂದನೆ

ತುಮಕೂರು: ಸರ್ಕಾರಿ ಅಧಿಕಾರಿಯಾದವರು ಸಮಾಜಕ್ಕೆ, ಸರ್ಕಾರಕ್ಕೆ ಋಣಿಯಾಗಿ ಕೆಲಸ ಮಾಡಬೇಕು. ಅಧಿಕಾರಿ ವರ್ಗವಾಗಿ ಹೋದರೂ ಅವರು ಮಾಡಿರುವ ಕೆಲಸಗಳ ಮೂಲಕ ಜನರು ಅಧಿಕಾರಿಯನ್ನು ಸ್ಮರಿಸುವಂತೆ ಕೆಲಸ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು. ಶನಿವಾರ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಒಕ್ಕಲಿಗರ ಒಕ್ಕೂಟ, ಜಿಲ್ಲಾ ಒಕ್ಕಲಿಗರ ಸಂಘಸಂಸ್ಥೆಗಳು, ಚಿಂತಾದ್ರಿ ಮಹಿಳಾ ಪ್ರತಿಷ್ಠಾನ ಹಾಗೂ ನಾಗರೀಕ ವೇದಿಕೆ ಆಶ್ರಯದಲ್ಲಿ ತುಮಕೂರು ಜಿ.ಪ. ಸಿಇಓ ಆಗಿ ಸೇವೆ ಸಲ್ಲಿಸಿ ಈಗ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿರುವ ಪ್ರಭು ಜಿ. ಅವರ ಅಭಿನಂದನಾ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿ, ಅಧಿಕಾರ ಸೇವೆ ಮಾಡಲು ಸಿಕ್ಕ ಅವಕಾಶ ಎಂದುಕೊಳ್ಳಬೇಕು, ಸಮಾಜಮುಖಿ ಹಂಬಲದಿಂದ ಕೆಲಸ ಮಾಡಬೇಕು ಎಂದರು.

 

 

ಅಧಿಕಾರ ನೆತ್ತಿಗೇರಿದರೆ ಅಧಿಕಾರಿಯು ತಾನೂ ನಾಶವಾಗಿ, ಸಮಾಜವನ್ನೂ ನಾಶ ಮಾಡುವುದಲ್ಲದೆ ತನ್ನ ಸ್ಥಾನವನ್ನೂ ಅಗೌರವಗೊಳಿಸಿಬಿಡುತ್ತಾನೆ. ಅಧಿಕಾರವನ್ನು ಹೃದಯಕ್ಕೆ ಹಾಕಿಕೊಂಡು, ಹೃದಯಸ್ಪರ್ಶಿ ಕೆಲಸ ಮಾಡಿದರೆ ಸಮಾಜ ಗುರುತಿಸಿ ಗೌರವಿಸುತ್ತದೆ. ಜಿ. ಪ್ರಭು ಅವರು ಅಂತಹ ಉತ್ತಮ ಅಧಿಕಾರಿ ಎಂದರು. ತಾವು ಪೂರ್ವಾಶ್ರಮದಲ್ಲಿ ತಹಶೀಲ್ದಾರ್ ಆಗಿದ್ದಾಗ ಪ್ರಭು ಉಪವಿಭಾಗಾಧಿಯಾಗಿದ್ದರು. ಕೆಲಸದಲ್ಲಿ ಇವರಿಗಿರುವ ಬದ್ಧತೆ, ಚಿಂತನೆ, ಶ್ರಮವನ್ನು ಹತ್ತಿರದಿಂದ ಗಮನಿಸಿದ್ದೇವೆ. ಕೆಲಸ ಮಾಡಿದ ಎಲ್ಲಾ ಕಡೆ ತಮ್ಮ ಸಾಧನೆಯ ಗುರುತು ಬಿಟ್ಟಿದ್ದಾರೆ. ಒಳ್ಳೆಯ ಅಧಿಕಾರಿಯಾಗಲು ಉನ್ನತವಾದ ಚಿಂತನೆ, ಒಳ್ಳೆಯ ಆತ್ಮ, ಒಳ್ಳೆಯ ಮನಸ್ಸು, ಮಿಡಿಯುವ ಹೃದಯ ಹೊಂದಿರಬೇಕು. ಪ್ರಭು ಅವರಿಗೆ ಈ ಎಲ್ಲಾ ಗುಣಗಳಿವೆ ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

 

 

 

 

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭು ಜಿ. ಅವರು, ತುಮಕೂರಿಗೆ ಬಂದರೆ ತಮಗೆ ತವರು ಮನೆಗೆ ಬಂದಷ್ಟೇ ಆನಂದವಾಗುತ್ತದೆ. ತಾವು ಇಲ್ಲಿನ ಜಿಲ್ಲಾ ಪಂಚಾಯ್ತಿ ಸಿಇಓ ಆಗಿದ್ದಾಗ ನಿರ್ವಹಿಸಿದ ಅನೇಕ ಕಾರ್ಯಗಳು ರಾಷ್ಟ್ರೀಯ ಯೋಜನೆಗಳಾಗಿವೆ. ನರೇಗಾ ಯೋಜನೆಯ ನಿರ್ವಹಣೆಗೆ ತುಮಕೂರು ಜಿಲ್ಲಾ ಪಂಚಾಯ್ತಿಗೆ ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿ ದೊರಕಿರುವುದು ಎಲ್ಲರ ಸಹಕಾರದಿಂದ ಎಂದು ಸ್ಮರಿಸಿದರು.
ಅಧಿಕಾರವನ್ನು ಸೇವೆಯ ಜವಾಬ್ದಾರಿ ಎಂದುಕೊಳ್ಳಬೇಕು. ಸಮಾಜದಲ್ಲಿ ಎಲ್ಲರಿಗೂ ಜವಾಬ್ದಾರಿ ಇರುತ್ತದೆ. ಹಾಗಾಗಿ ಎಲ್ಲರನ್ನೂ ಗೌರವದಿಂದಲೇ ಕಾಣಬೇಕು. ನಾವು ಮಾಡುವ ಕೆಲಸ ನಮಗೆ ಎಷ್ಟು ಉತ್ತರದಾಯಕವಾಗಿರುವುದೊ ಅಷ್ಟು ಸಮಾಜ ಸದೃಢವಾಗುತ್ತದೆ. ನಮ್ಮ ಕೆಲಸದಲ್ಲಿ ಪರಿಶ್ರಮ, ಬದ್ಧತೆ, ಉತ್ತಮ ಆಲೋಚನೆಗಳನ್ನು ಹೊಂದಿದ್ದರೆ ವಿಶ್ವವೇ ನಮ್ಮನ್ನು ಜಯಶಾಲಿಯನ್ನಾಗಿ ಮಾಡುತ್ತದೆ. ಯಾವ ದೇಶದಲ್ಲಿ ಮಾನವಸಂಪನ್ಮೂಲವನ್ನು ಶಕ್ತಿಯುತವಾಗಿ ಬೆಳೆಸುವುದೋ ಆ ದೇಶ ಸದೃಢವಾಗಿರುತ್ತದೆ. ಸಮಾಜದಲ್ಲಿ ಅನೇಕ ಸಾಧಕ ವ್ಯಕ್ತಿಗಳು ಈಗ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿದ ಕೆಲಸ, ಸಾಧನೆಗಳು ನಮ್ಮೊಂದಿಗಿವೆ. ಆ ಕೆಲಸಗಳ ಮೂಲಕ ವ್ಯಕ್ತಿ ಸದಾ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಜಿ. ಪ್ರಭು ಹೇಳಿದರು.

 

 

 

ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಆರ್. ಕಾಮರಾಜ್ ಮಾತನಾಡಿ, ಕೆಲವರು ಅಧಿಕಾರ ಸಿಕ್ಕ ನಂತರ ದರ್ಪದಿಂದ ನಡೆದುಕೊಳ್ಳುತ್ತಾರೆ. ಆದರೆ ಪ್ರಭು ಅವರು ಯಾವತ್ತೂ ದರ್ಪ ಮಾಡದೆ, ಬಡವರ, ರೈತರ ಕಲ್ಯಾಣಕ್ಕೆ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಚಿಂತನೆ ಮಾಡುತ್ತಾ ಅವುಗಳನ್ನು ಅನುಷ್ಠಾನಗೊಳಿಸುವತ್ತ ಗಮನಹರಿಸಿದರು. ಗ್ರಾಮ ಪಂಚಾಯ್ತಿಗಳ ಮೂಲಕ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ದೇಶದ ಗಮನ ಸೆಳೆದ ಬದ್ಧತೆಯ ಅಧಿಕಾರಿ ಪ್ರಭು ಅವರು. ಇಂತಹ ಮಾದರಿ ಅಧಿಕಾರಿ ಯುವಜನರಿಗೆ ಸ್ಫೂರ್ತಿ ಆಗಬೇಕು ಎಂದು ಹೇಳಿದರು.

 

 

ಈ ವೇಳೆ ಐಎಎಸ್ ಅಧಿಕಾರಿ ಜಿ. ಪ್ರಭು ಅವರ ಪತ್ನಿ ರಜನಿ ಪ್ರಭು ಅವರು ನಗರದ ಜೀವಾ ಡಯೋಗ್ನಿಸ್ಟಿಕ್‌ನ ಸ್ತನ ಕ್ಯಾನ್ಸರ್ ಉಚಿತ ತಪಾಸಣೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇವೆಗೆ ಚಾಲನೆ ನೀಡಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನಿರ್ದೇಶಕ ಹನುಮಂತರಾಯಪ್ಪ, ಮಾಜಿ ನಿರ್ದೇಶಕ ಯಲಚವಾಡಿ ನಾಗರಾಜು, ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಡಾ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಭೈರವ ಗಿರೀಶ್, ಅಮೋಘ ಟಿವಿ ಸಂಪಾದಕ ರಾಕ್‌ಲೈನ್ ರವಿಕುಮಾರ್, ಮುಖಂಡರಾದ ಬೆಳ್ಳಿ ಲೋಕೇಶ್, ಉಪ್ಪಾರಹಳ್ಳಿ ಕುಮಾರ್, ಕೃಷ್ಣಯ್ಯ, ಲಕ್ಕೇಗೌಡ, ನಿರ್ಮಿತಿ ರಾಜಶೇಖರ್, ಕೇಶವಮೂರ್ತಿ, ಅಶ್ವತ್ಥ್ ಕಾರ್ಮೊಬೈಲ್, ರಂಗಪ್ಪ, ಯಶೋಧ ವೀರಪ್ಪ, ಸುಜಾತ ನಂಜೇಗೌಡ, ಮಂಜುಳಕ್ಕ, ರಂಗಮಣಿ ಕಾಮೇಶ್, ಮಮತಾ, ಲೀಲಾವತಿ ಸೇರಿದಂತೆ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸಲಾಯಿತು.

Leave a Reply

Your email address will not be published. Required fields are marked *