ವಕೀಲರ ಮೇಲಿನ ಹಲ್ಲೆ ಖಂಡಿಸಿ ವಕೀಲರ ಪ್ರತಿಭಟನೆ ; ನ್ಯಾಯಾಲಯ ಕಲಾಪದಿಂದ ಹೊರಗುಳಿದ ವಕೀಲರು

ತುಮಕೂರು: ನಗರದ ನ್ಯಾಯಾಲಯ ಆವರಣದಲ್ಲಿ ಸೋಮವಾರ ಹಿರಿಯ ವಕೀಲರಾದ ಎಂ.ಸಿ. ರವೀಶ್ ಅವರ ಮೇಲೆ ಬಿ.ಎ. ನಿರಂಜನ್ ಎಂಬುವವರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಮಂಗಳವಾರ ಪ್ರತಿಭಟನೆ ನಡೆಸಿ ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸದೆ ಕಲಾಪಗಳಿಂದ ದೂರ ಉಳಿದರು.

 

 


ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್, ಕರ್ತವ್ಯದ ಮೇಲಿದ್ದ ವಕೀಲರ ಮೇಲೆ ನ್ಯಾಯಾಲಯದ ಆವರಣದಲ್ಲಿ ಹಲ್ಲೆ ನಡೆಸಿರುವುದು ಖಂಡನೀಯ. ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ವಕೀಲರ ಮೇಲೆ ಹಲ್ಲೆ ನಡೆಸಿದ ನಿರಂಜನ್ ಪರವಾಗಿ ಯಾವ ವಕೀಲರೂ ವಕಾಲತ್ತು ವಹಿಸಬಾರದು ಎಂದು ಸಂಘದಲ್ಲಿ ನಿರ್ಣಯ ಮಾಡಲಾಗಿದೆ ಎಂದು ಹೇಳಿದ ಹಿರೇಹಳ್ಳಿ ಮಹೇಶ್, ವಕೀಲರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಿ ವಕೀಲರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.

 

 

ಇದೇ ೬ರಂದು ಸೋಮವಾರ ಮಧ್ಯಾಹ್ನ 2:02 ರ ಸಮಯದಲ್ಲಿ ನಗರದ ೨ನೇ ಅಧಿಕ ಸಿವಿಲ್ ನ್ಯಾಯಾಲಯ ಹಿರಿಯ ಶ್ರೇಣಿ ನ್ಯಾಯಾಲಯದ ಒಳಗಿನಿಂದ ಕಲಾಪಗಳನ್ನು ಮುಗಿಸಿಕೊಂಡು ಹೊರಬಂದಂತಹ ಸಂದರ್ಭದಲ್ಲಿ ವಕೀಲ ಎಂ.ಸಿ. ರವೀಶ್ ಅವರ ಮೇಲೆ ಓ.ಎಸ್.359/2015ರ ಪ್ರಕರಣದ 2ನೇ ಪ್ರತಿವಾದಿ ತುಮಕೂರು ತಾಲ್ಲೂಕು ಕೋರಾ ಹೋಬಳಿ ಬ್ರಹ್ಮಸಂದ್ರದ ಬಿ.ಎ. ನಿರಂಜನ್ ಎಂಬಾತ ತನ್ನ ಎದುರಿಗೆ ಏಕೆ ಕೇಸನ್ನು ತೆಗೆದುಕೊಂಡಿದ್ದೀಯಾ ಎಂದು ವಕೀಲರಾದ ಎಂ.ಸಿ. ರವೀಶ್ ಅವರನ್ನು ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ಬೈದು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಎಡ ಮುಖ ತುಟಿ, ಕೆನ್ನೆಮೇಲೆ ರಕ್ತಗಾಯಗಳಾಗುವಂತೆ ಕೈಯಲ್ಲಿ ಹಿಡಿದುಕೊಂಡಿದ್ದ ಕಲ್ಲಿನಿಂದ ಜಜ್ಜಿರುತ್ತಾನೆ. ಕಾಲಿನಿಂದ ಒದ್ದು ಕುತ್ತಿಗೆ ಮೇಲೆ ಕಾಲಿಟ್ಟು ಸಾಯಿಸಲು ಪ್ರಯತ್ನಿಸಿರುತ್ತಾನೆ. ಈ ಸಮಯದಲ್ಲಿ ಇತರೆ ವಕೀಲರು ಬಿಡಿಸಿರುತ್ತಾರೆ. ತಕ್ಷಣ ಆತನು ಸ್ಥಳದಿಂದ ಪರಾರಿಯಾಗಿರುತ್ತಾನೆ. ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಹಿರೇಹಳ್ಳಿ ಮಹೇಶ್ ಒತ್ತಾಯಿಸಿದರು.

 

 


ಹಲ್ಲೆ ಸಂಬಂಧ ವಕೀಲ ಎಂ.ಸಿ. ರವೀಶ್ ಅವರು ನಗರ ಠಾಣೆಗೆ ದೂರು ನೀಡಿ, ಹಲ್ಲೆ ಮಾಡಿದ ನಿರಂಜನ್‌ನಿಂದ ನನಗೆ ಪ್ರಾಣ ಭೀತಿ ಇರುತ್ತದೆ. ನನಗೆ ಜೀವ ಬೆದರಿಕೆ ಹಾಕಿ, ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆತನ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ರಕ್ಷಣೆ ನೀಡಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ರವಿಗೌಡ, ಖಜಾಂಚಿ ಸಿಂಧೂ, ಕಾರ್ಯಕಾರಿ ಮಂಡಳಿ ಸದಸ್ಯರಾದ ಡಿ.ಎ. ಜಗದೀಶ್, ಸುರೇಶ್, ಕೆ.ವಿ. ಶ್ರೀನಿವಾಸಮೂರ್ತಿ, ವಿ.ಕೆ. ಶ್ರೀನಿವಾಸಮೂರ್ತಿ, ಪದ್ಮಶ್ರೀ, ಸೇವಾಪ್ರಿಯ ಹಾಗೂ ನೂರಾರು ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *