ತುಮಕೂರು: ಕಾನ್ವೆಂಟ್ ಶಾಲೆಗಳ ಅಬ್ಬರದಲ್ಲಿ ಸರಕಾರಿ ಶಾಲೆ ಒಂದೊಂದಾಗಿ ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲಿ ಮುಚ್ಚುವ ಹಂತದಲ್ಲಿದ್ದ ಸರಕಾರಿ ಶಾಲೆಯನ್ನು ವಿದ್ಯಾರ್ಥಿಗಳ ಹೋರಾಟದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಉನ್ನತ್ತಿಕರಣಗೊಳಿಸುವ ಕಥಾ ಹಂದವರನ್ನು ಹೊಂದಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಚಿತ್ರದ ಚಿತ್ರೀಕರಣ ಮೇ.10 ರಿಂದ ಆರಂಭವಾಗಲಿದೆ ಎಂದು ಚಿತ್ರದ ನಿರ್ದೇಶಕ ರಾಜಶೇಖರ್ ತಿಳಿಸಿದ್ದಾರೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು,ಸ್ಕೈ ಆರ್ಟ್ ಮಿಡಿಯಾದವರು ನಿರ್ಮಿಸುತ್ತಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಚಿತ್ರ ಇದಾಗಿದೆ.ಮಾತೃಭಾಷೆಯ ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಹಲವಾರು ನ್ಯಾಯಾಲಯದ ತೀರ್ಪುಗಳೇ ಸ್ಪಷ್ಟಪಡಿಸಿದ್ದರು, ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಹಳ್ಳಿಗಳನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಕಾನ್ವೆಂಟ್ ಶಿಕ್ಷಣದ ಪರಿಣಾಮ, ಸರಕಾರಿ ಶಾಲೆಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತಿವೆ.ಸಾಲ, ಸೋಲ ಮಾಡಿಯಾದರೂ ನಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಲ್ಲಿ ಓದಿಸಬೇಕೆಂಬ ತಂದೆ ತಾಯಿಗಳ ಮನದಾಸೆಗೆ ಹತ್ತಾರು ವರ್ಷಗಳ ಕಾಲ ಸಾವಿರಾರು ಮಕ್ಕಳಿಗೆ ಅಕ್ಷರ ನೀಡಿದ ಸರಕಾರಿ ಶಾಲೆಗಳ ಶವ ಪೆಟ್ಟಿಗೆಗೆ ಕೊನೆ ಮಳೆ ಹೊಡೆಯುವ ಪ್ರಯತ್ನದ ವಿರುದ್ದ ಸಿಡಿದೇಳುವ ಮಕ್ಕಳು, ತಮ್ಮ ಹೋರಾಟದ ಮೂಲಕ ಸರಕಾರ, ಜನಪ್ರತಿನಿಧಿಗಳ ಗಮನ ಸೆಳೆದು, ಮುಚ್ಚುವ ಹಂತದ ಶಾಲೆಯೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮೇಲ್ದರ್ಜೆಗೆರಿಸುವ, ಅತ್ಯಂತ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಚಿತ್ರ ಇದಾಗಿದೆ ಎಂದರು.

ಚಿತ್ರಕ್ಕೆ ಶ್ರೀಮತಿ ಭಾಗ್ಯ ಶೇಖರ್ ನಿರ್ಮಾಪಕರಾಗಿದ್ದು, ರಚನೆ ಮತ್ತು ನಿರ್ದೇಶನ ರಾಜಶೇಖರ್ ಅವರದ್ದಾಗಿದೆ.ಸಂಭಾಷಣೆ ಮತ್ತು ಸಹ ನಿರ್ದೇಶಕರಾಗಿ ಮಂಜುನಾಥ್ ಕೋಟೆಕೆರೆ ಅವರು ಕೆಲಸ ಮಾಡುತಿದ್ದು,ಅನಂತ ಆರ್ಯನ್ ಸಂಗೀತ,ಶಿವರಾಜ್ ಗುಬ್ಬಿ ಅವರ ಸಾಹಿತ್ಯ, ವೀನಸ್ ಮೂರ್ತಿ ಅವರ ಛಾಯಗ್ರಾಹಣ, ಮೇಕಪ್ ಮೆನ್ ಆಗಿ ದಯಾನಂದ್, ನಿರ್ದೇಶಕನ ತಂಡದಲ್ಲಿ ಕೇಶವ್, ಚಿಕ್ಕಿ(ಮಧು), ಕೃಷ್ಣ ಸಕಲೇಶಪುರ, ಪ್ರತಾಪ್ ಅವರುಗಳು ಇರಲಿದ್ದಾರೆ ಎಂದರು.

ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಕಲಾಶ್ರೀ ಡಾ.ಲಕ್ಷ್ಮಣದಾಸ್ ಇದ್ದು, ಇವರೊಂದಿಗೆ ಉಗಮ ಶ್ರೀನಿವಾಸ್, ಟೈಗರ್ ನಾಗ್, ಬೇಬಿ ಜಾನ್ನವಿ,ಬೇಬಿ ಸಂಧ್ಯ, ಮಾಸ್ಟರ್ ಚರಣ್, ಮಾಸ್ಟರ್ ಗೌತಮ್, ಮಾಸ್ಟರ್ ಪೋಷಿತ್, ರಾಜಣ್ಣ, ವೈಷ್ಣವಿರಾಜ್, ಇಂದ್ರಕುಮಾರ್ ಮತ್ತಿತರರು ಪಾತ್ರ ನಿರ್ವಹಿಸಿದ್ದಾರೆ.ಮೇ.೧೦ ರಿಂದ ಚಿತ್ರೀಕರಣ ತುಮಕೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದ್ದು, ೨೦ ದಿನಗಳ ಒಂದೇ ಷಡ್ಯೂಲ್ನಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ೨೦೨೬ರ ಸೆಪ್ಟಂಬರ್ ಅಥವಾ ಅಕ್ಟೋಬರ್ನಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ನಿರ್ದೇಶಕ ರಾಜಶೇಖರ್ ತಿಳಿಸಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಚಿತ್ರದ ಪ್ರಧಾನ ಭೂಮಿಯಲ್ಲಿರುವ ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಸ್ತುತ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಂತಿದೆ.ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದ ಫಲವಾಗಿ ಹತ್ತಾರು ವರ್ಷಗಳ ಕಾಲ ಸಾವಿರಾರು ಮಕ್ಕಳಿಗೆ ಅಕ್ಷರ ಕಲಿಸಿದ ಶಾಲೆಗಳು ಮುಚ್ಚುತ್ತಿರುವುದನ್ನು ನೋಡಿದಾಗ ಬಹಳ ನೋವಾಗುತ್ತದೆ. ಇದರ ಬಗ್ಗೆ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಚಿತ್ರ ಯಶಸ್ವಿಯಾಗಲಿದೆ ಎಂಬ ನಂಬಿಕೆ ನನಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಚಿತ್ರದ ನಿರ್ಮಾಪಕರಾದ ಶ್ರೀಮತಿ ಭಾಗ್ಯ ಶೇಖರ್, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ನರಸಿಂಹಮೂರ್ತಿ,ಕೀರ್ತಿ,ಸಾಹಿತಿ ಶಿವರಾಜ ಗುಬ್ಬಿ,ಕಲಾವಿದರಾದ ಬೇಬಿ ಜಾನ್ನವಿ,ಬೇಬಿ ಸಂಧ್ಯ, ಮಾಸ್ಟರ್ ಚರಣ್, ಮಾಸ್ಟರ್ ಗೌತಮ್, ಮಾಸ್ಟರ್ ಪೋಷಿತ್, ರಾಜಣ್ಣ, ವೈಷ್ಣವಿರಾಜ್, ಇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
