ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಭಾಜನರಾದ ಶ್ರೀಮತಿ. ಶುಭ ಕಲ್ಯಾಣ್ ಐ.ಎ.ಎಸ್

ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ಅತ್ಯಂತ ವೇಗವಾಗಿ, ಪಾರದರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ಪೂರ್ಣಗೊಳಿಸಿದ ಸಾಧನೆಗಾಗಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಪ್ರತಿಷ್ಠಿತ International Infracon National Award (IINA) ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
Infrastructure Skill Development Academy (ISDA) 3, India Habitate Center, ನವದೆಹಲಿ ಇಲ್ಲಿ ದಿನಾಂಕ 05.06.2026 ರಂದು ಆಯೋಜಿಸಲಾದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ತುಮಕೂರು ಜಿಲ್ಲೆಯಲ್ಲಿ ನೀರಾವರಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ಸುಮಾರು 3000 ಎಕರೆಗೂ ಹೆಚ್ಚು ಭೂಮಿಯನ್ನು ತ್ವರಿತವಾಗಿ ಸ್ವಾಧೀನಪಡಿಸಿಕೊಳ್ಳುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸುವುದರೊಂದಿಗೆ, ಸಂಬಂಧಿತ ರೈತರಿಗೆ ಕಾನೂನುಬದ್ಧ ಪರಿಹಾರವನ್ನು ಶೀಘ್ರವಾಗಿ ವಿತರಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾಡಳಿತವು ವೇಗ ನೀಡಿದೆ.
ಜಿಲ್ಲಾಡಳಿತದ ಈ ಕಾರ್ಯಕ್ಷಮತೆಯನ್ನು ಗುರುತಿಸಿ, ಈ ಹಿಂದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜಿಲ್ಲಾಧಿಕಾರಿಗಳಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿತ್ತು. ಇದೀಗ ISDA-IINA ವತಿಯಿಂದ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ದೊರೆತಿರುವುದು ತುಮಕೂರು ಜಿಲ್ಲೆಗೆ ಮತ್ತೊಂದು ಹೆಮ್ಮೆಯ ವಿಷಯವಾಗಿದೆ.
ತುಮಕೂರು ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಪರಿಣಾಮಕಾರಿ ಕ್ರಮಗಳು ರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಪ್ರಶಸ್ತಿ ಜಿಲ್ಲಾಡಳಿತದ ಸಮರ್ಪಿತ ಹಾಗೂ ದಕ್ಷ ಕಾರ್ಯವೈಖರಿಗೆ ದೊರೆತ ಮಹತ್ವದ ಮಾನ್ಯತೆಯಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉತ್ತರಪ್ರದೇಶ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಹಾಲಿ ರಾಜ್ಯಸಭಾ ಸದಸ್ಯರಾದ ಶ್ರೀ ದಿನೇಶ್ ಶರ್ಮ, ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, NBCC india Ltd ನ ವಾಣಿಜ್ಯ ನಿರ್ದೇಶಕರಾದ ಡಾ. ಸುಮನ್ ಕುಮಾರ್, Signature India Global Ltd ನ CEO ಸಂಜಯ್ ಕುಮಾರ್ ವರ್ಷನಿ, ISDAನ ಅಧಿಕಾರಿಗಳು ಹಾಗೂ ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳಾದ ಆನಂದ್, ಸುರೇಶ್ ಮೇಟಿ, ಮುರುಳಿಧರ್, ಸುರೇಶ್ ಕುಮಾರ್, ಸುರೇಶ್ ಮತ್ತು ಪ್ರಕಾಶ್ ಇವರು ಉಪಸ್ಥಿತರಿದ್ದರು.
ಕೃಪೆ : ಜಿಲ್ಲಾಧಿಕಾರಿಗಳ ಅಧಿಕೃತ ಫೇಸ್ಬುಕ್‌ ಖಾತೆಯಿಂದ

Leave a Reply

Your email address will not be published. Required fields are marked *