ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕನ್ನಡಿಗನ ಸಾಧನೆ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆ ಗ್ರಾಮದ ಹೆಮ್ಮೆಯ ಪುತ್ರರಾದ ಶ್ರೀ ಶ್ರೀನಿವಾಸ ಬಿ. ಅವರು ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕನ್ನಡ ನಾಡಿನ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ್ದಾರೆ. ಪ್ರಸ್ತುತ ಅವರು ತಿಪಟೂರಿನ ಕಲ್ಪತರು ವಿದ್ಯಾ ಸಂಸ್ಥೆ (ರಿ.)ಯ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೌತ್ ಇಂಡಿಯಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಆಯ್ಕೆಯಾಗಿದ್ದ ಶ್ರೀನಿವಾಸ ಅವರು, 2026ರ ಜೂನ್ 5ರಿಂದ 7ರವರೆಗೆ ಮಲೇಷಿಯಾದ ಕೌಲಾಲಂಪುರ್ ನಗರದ ಯು.ಪಿ.ಎಂ. ಕ್ರೀಡಾಂಗಣದಲ್ಲಿ ನಡೆದ 38ನೇ ಮಲೇಷಿಯಾ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಗೌರವಕ್ಕೆ ಪಾತ್ರರಾದರು. ಸುಮಾರು 28 ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಅವರು 100 ಮೀಟರ್ ಓಟ, 200 ಮೀಟರ್ ಓಟ, 400 ಮೀಟರ್ ಓಟ ಹಾಗೂ ತ್ರಿವಿಧ ಜಿಗಿತ ವಿಭಾಗಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.

 

 

 

athletic

ಅವರ ನಿರಂತರ ಪರಿಶ್ರಮ, ಕಠಿಣ ಅಭ್ಯಾಸ ಮತ್ತು ಕ್ರೀಡಾ ಶಿಸ್ತಿನ ಫಲವಾಗಿ ನಾಲ್ಕು ವಿಭಾಗಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ 4 ಕಂಚಿನ ಪದಕಗಳನ್ನು ಗೆದ್ದು ಭಾರತ ದೇಶ, ಕರ್ನಾಟಕ ರಾಜ್ಯ ಹಾಗೂ ತಮ್ಮ ಹುಟ್ಟೂರಿನ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದಾರೆ. ಈ ಸಾಧನೆಯು ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿಯೂ ಅಸಾಧಾರಣ ಪ್ರತಿಭೆಗಳು ಅಡಗಿವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಶ್ರೀನಿವಾಸ ಅವರ ಈ ಅಪೂರ್ವ ಸಾಧನೆಗೆ ಕಲ್ಪತರು ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಸಹೋದ್ಯೋಗಿಗಳು, ವೃತ್ತಿಬಾಂಧವರು, ಕ್ರೀಡಾ ಪ್ರೇಮಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಾಧನೆಗಳನ್ನು ಮಾಡಿ ನಾಡಿನ ಕೀರ್ತಿಯನ್ನು ಹೆಚ್ಚಿಸಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

Leave a Reply

Your email address will not be published. Required fields are marked *