ಡಾ.ಎನ್ ನರಸಿಂಹಮೂರ್ತಿ ಅವರು ಸದ್ಯ ರಿಯಲ್ ಎಸ್ಟೇಟ್ ನಲ್ಲಿ ದೊಡ್ಡ ಸಾಧನೆಯನ್ನ ಮಾಡಿದ್ದಾರೆ. ಇದೀಗ ನಿರ್ಮಾಪಕನಾಗಿ ಕಾಮನ್ ಮ್ಯಾನ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ನಟನೆಯನ್ನು ಮಾಡಿದ್ದಾರೆ. ಹಾಗಂತ ನಟನೆಯನ್ನೇನು ನರಸಿಂಹಮೂರ್ತಿ ಅವರು ಪ್ಯಾಷನ್ ಗೋಸ್ಕರ ಮಾಡಿರೋದಲ್ಲ, ಚಿಕ್ಕ ವಯಸ್ಸಿನಿಂದಾನೇ ರಂಗಭೂಮಿ ಕಲಾವಿದರಾಗಿದ್ದವರು. ಒಂದಷ್ಟು ಜವಾಬ್ದಾರಿಗಳ ಮೂಟೆಯನ್ನೊತ್ತು, ನಟನಾ ಬದುಕಿನಿಂದ ಕೊಂಚ ದೂರವೇ ಉಳಿದಿದ್ದರು. ಈಗ ಮತ್ತೆ ಕನಸು ಚಿಗುರಿದೆ, ಕನಸಿಗೆ ಕಾಮನ್ ಮ್ಯಾನ್ ಸಿನಿಮಾದಿಂದ ರೆಕ್ಕೆ ಪುಕ್ಕ ಕಟ್ಟಿದಂತಾಗಿದೆ.

ಕನಸುಗಳೇ ಹಾಗೇ ದೊಡ್ಡಮಟ್ಟಕ್ಕೆ ಬೆಳೆದು ಬಿಡುತ್ತವೆ. ಆದರೆ ಅದರ ಗುರಿ ತಲುಪುವುದಕ್ಕೆ ಹೆಗಲಾಗುವವರು ಸಿಗುವುದಿಲ್ಲ. ನರಸಿಂಹ ಮೂರ್ತಿಯವರು ಆರಂಭದಲ್ಲಿ ಬಿಎಸ್ಎನ್ ಎಲ್ ನಲ್ಲಿ ಸರ್ಕಾರಿ ನೌಕರಿ ಪಡೆದಿದ್ದವರು. ಹಲವಾರು ವಿಭಾಗದಲ್ಲಿ ಒಳ್ಳೆಯ ಹುದ್ದೆಯನ್ನು ನಿಭಾಯಿಸಿದವರು. 2017ರಲ್ಲಿ ಟೆಲಿಕಾಮ್ ಎಂಪ್ಲಾಯ್ಸ್ ಅಂಡ್ ಅದರ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ಶುರು ಮಾಡಿದರು. ಆ ಮೂಲಕ ಬೆಂಗಳೂರು, ತುಮಕೂರು, ಮೈಸೂರು ಭಾಗದಲ್ಲಿ 6 ಬ್ರಾಂಚ್ ಗಳನ್ನ ತೆರೆದು ಸಾಕಷ್ಟು ಜನ ಜೀವನಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಇದರ ಜೊತೆಗೆ ಟೆಲಿಕಾಮ್ ಜನಸೇವಾ ಚಾರಿಟಬಲ್ ಟ್ರಸ್ಟ್ ಕೂಡ ಮಾಡಿದ್ದು, ಅದರಲ್ಲಿ ಅಗತ್ಯ ಇರುವಂಥವರಿಗೆ ಉಚಿತವಾಗಿ ತರಬೇತಿಗಳನ್ನು ನೀಡಲಾಗುತ್ತಿದೆ. ಬಡ ಮಕ್ಕಳಿಗೆ ಪುಸ್ತಕಗಳ ವಿತರಣೆ, ಅನಾಥಶ್ರಮಕ್ಕೆ ಸಹಾಯ, ದೇವಸ್ಥಾನಗಳಿಗೆ ದೇಣಿಗೆ, ವಿದ್ಯಾರ್ಥಿಗಳಿಗೆ ದೇಣಿಗೆ ನೀಡುವ ಮೂಲಕ ಜನಸೇವೆಯನ್ನು ಮಾಡ್ತಾ ಇದ್ದಾರೆ. ನರಸಿಂಹಮೂರ್ತಿ ಅವರು ಮೂಲತಃ ಬೆಂಗಳೂರಿನವರೇ. ಸರ್ಕಾರಿ ಶಾಲೆಯಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ಚಿಕ್ಕ ಮನೆಯಲ್ಲಿದ್ದಾಗ ದೊಡ್ಡಮನೆಯಲ್ಲಿರುವವರನ್ನು ನೋಡಿ ಬೇಸರ ಮಾಡಿಕೊಳ್ಳುತ್ತಿದ್ದರಂತೆ. ನಾವ್ಯಾಕೆ ಹೀಗಿದ್ದೀವಿ ಅಂತ. ಅಂದು ಹುಟ್ಟಿದ ಹಠ ಇಂದು ನೂರಾರು ಜನಕ್ಕೆ ಆಸರೆಯಾಗಿದ್ದಾರೆ.
ಹೀಗೆ ಜನಸೇವೆಯನ್ನು ಮಾಡುತ್ತಾ ಇರುವ ನರಸಿಂಹಮೂರ್ತಿ ಅವರಿಗೆ ನಟನಾ ಬದುಕು, ಕಥೆಗಳನ್ನು ಬರೆಯುವ ಗುಂಗು ಹೆಚ್ಚು. ಇದು ಇಂದಿನ ಅಭ್ಯಾಸವಲ್ಲ. ರಂಗಭೂಮಿಯಲ್ಲಿದ್ದಾಗಿನಿಂದಲೂ ಕಥೆಗಳನ್ನು ಬರೆಯುವ ಆಸಕ್ತಿ ಕೊಂಚ ಜಾಸ್ತಿನೇ. ಕಾಮನ್ ಮ್ಯಾನ್ ಜೊತೆಗೆ ಲವ್ ಈಸ್ ಬ್ಲೈಂಡ್, ಲಾಸ್ಟ್ ಕಾಲ್ ಕಥೆಯನ್ನು ಸಿದ್ಧ ಮಾಡಿಕೊಂಡಿದ್ದಾರೆ. ಕಾಮನ್ ಮ್ಯಾನ್ ಸಿನಿಮಾ ರಿಲೀಸ್ ಬಳಿಕ ಈ ಎರಡು ಸಿನಿಮಾಗಳು ರಿಲೀಸ್ ಆಗಲಿವೆ. ಇನ್ನು ಕಾಮನ್ ಮ್ಯಾನ್ ನಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ನರಸಿಂಹ ಮೂರ್ತಿ ಅವರ ಮಗ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿಯಲ್ ನಲ್ಲೂ ಅಪ್ಪ ಮಗ . ರೀಲ್ ನಲ್ಲೂ ಅಪ್ಪ ಮಗ. ಕಾಮನ್ ಮ್ಯಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ರಂಗಭೂಮಿಯಲ್ಲಿ ಅಬ್ಬರಿಸಿದ್ದ ಪ್ರತಿಭೆ ಬೆಳ್ಳಿತೆರೆ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ನಾಯಕನ ಪಾತ್ರದಲ್ಲಿ ಕೆರೆಬೇಟೆ ಹೀರೋ ಗೌರಿಶಂಕರ್ ಕಾಣಿಸಿಕೊಂಡಿದ್ದಾರೆ. ಗೌರಿ ಶಂಕರ್ ಹಾಗೂ ನರಸಿಂಹ ಮೂರ್ತಿ ಅವರ ಜುಗಲ್ ಬಂಧಿ ಹೇಗಿರಲಿದೆ ಅನ್ನೋದನ್ನ ತೆರೆಮೇಲೆ ನೋಡಬೇಕಿದೆ.
