ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ತಾಲೂಕು ಕಚೇರಿಯ ಆವರಣ, ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಹಾಗೂ ತೋಟಗಾರಿಕೆ ಇಲಾಖೆಯ ಪಕ್ಕದಲ್ಲಿದ್ದ ಬೃಹದಾಕಾರದ ಮರಗಳನ್ನು ಕಡಿದುರುಳಿಸಿರುವ ಘಟನೆ ಸ್ಥಳೀಯ ಸಾರ್ವಜನಿಕರಲ್ಲಿ ಮತ್ತು ಪರಿಸರ ಪ್ರೇಮಿಗಳಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿದೆ.
ಗ್ರಾಮೀಣ ಭಾಗಗಳಿಂದ ವಿವಿಧ ಕೆಲಸ-ಕಾರ್ಯಗಳಿಗಾಗಿ ತಾಲೂಕು ಕಚೇರಿಗೆ ಬರುವ ಜನಸಾಮಾನ್ಯರಿಗೆ, ರೈತರಿಗೆ ಹಾಗೂ ವೃದ್ಧರಿಗೆ ಆಸರೆಯಾಗಿದ್ದ, ತಂಪಾದ ನೆರಳು ನೀಡುತ್ತಿದ್ದ ಸುಮಾರು ಮೂರು ದಶಕಗಳ ಹಳೆಯದಾದ ಹೆಮ್ಮರಗಳು ಇಂದು ಧರೆಗುರುಳಿವೆ. ಮರಗಿಡಗಳನ್ನು ಸಂರಕ್ಷಿಸಿ ಪೋಷಿಸಬೇಕಾದ ಅರಣ್ಯ ಇಲಾಖೆಯ ಕಚೇರಿಯ ಎದುರಲ್ಲೇ ಈ ಮರಗಳ ಮಾರಣಹೋಮ ನಡೆದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ನೆರಳಿನ ಆಸರೆ ಕಳೆದುಕೊಂಡ ಗ್ರಾಮೀಣ ಜನರು ತಾಲೂಕು ಕಚೇರಿಯಲ್ಲಿ ವಿವಿಧ ದಾಖಲೆಗಳು, ಪಿಂಚಣಿ, ಪಹಣಿ ಸೇರಿದಂತೆ ಇತರ ಕೆಲಸಗಳಿಗಾಗಿ ನಿತ್ಯ ನೂರಾರು ಮಂದಿ ಹಳ್ಳಿಗಳಿಂದ ಬರುತ್ತಾರೆ. ಕಚೇರಿಗಳಲ್ಲಿ ಕೆಲಸ ಮುಗಿಯುವವರೆಗೆ ಗಂಟೆಗಟ್ಟಲೆ ಕಾದು ಸುಸ್ತಾಗುವ ರೈತರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಈ ಮರಗಳ ಕೆಳಗೆ ಕುಳಿತು ದಣಿವು ಆರಿಸಿಕೊಳ್ಳುತ್ತಿದ್ದರು. ಯಾವುದೇ ಸಾರ್ವಜನಿಕರಿಗೆ ಅಥವಾ ರಸ್ತೆ ಸಂಚಾರಕ್ಕೆ ಅಡ್ಡಿಯಾಗದಿದ್ದ ಈ ಬೃಹತ್ ಮರಗಳನ್ನು ಅಭಿವೃದ್ಧಿ ಹಾಗೂ ಕಾಂಕ್ರೀಟೀಕರಣದ ನೆಪವೊಡ್ಡಿ ಕಡಿದು ಹಾಕಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರಸ್ತುತ ಬೇಸಿಗೆ ಸಮೀಪಿಸುತ್ತಿದ್ದು, ವಿಶ್ರಾಂತಿಗೆ ನೆರಳೇ ಇಲ್ಲದಂತಾಗಿ ಸಾರ್ವಜನಿಕರು ಬಿಸಿಲಿನಲ್ಲಿ ಪರದಾಡುವ ದುಸ್ಥಿತಿ ಎದುರಾಗಿದೆ.
ಪ್ರಮುಖರ ಹಾಗೂ ಪರಿಸರ ಹೋರಾಟಗಾರರ ತೀವ್ರ ಆಕ್ರೋಶ

* ಅರುಣ್ ಕುಮಾರ್ (ಸಾಮಾಜಿಕ ಹೋರಾಟಗಾರರು): “ಇಂದಿನ ವೈಜ್ಞಾನಿಕ ಯುಗದಲ್ಲಿ ಮಹಾನಗರಗಳಲ್ಲೇ ಮರ ಉಳಿಸಿ ರಸ್ತೆ ಮಾಡುತ್ತಿರುವಾಗ, ವಾಹನ ದಟ್ಟಣೆಯೇ ಇಲ್ಲದ ಕಚೇರಿ ಆವರಣದಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಕಾಂಕ್ರೀಟೀಕರಣದ ಹೆಸರಿನಲ್ಲಿ ಹೆಮ್ಮರವನ್ನು ಬಲಿ ಪಡೆದಿರುವುದು ಅಕ್ಷಮ್ಯ. ಭೀಕರ ಬರಗಾಲದಲ್ಲಿ ಪಕ್ಷಿಗಳಿಗೆ, ಜನರಿಗೆ ಆಸರೆಯಾಗಿದ್ದ ಮರ ಕಡಿದು ಅಧಿಕಾರಿಗಳು ದರ್ಪ ತೋರಿದ್ದಾರೆ. ಇದಕ್ಕೆ ಕಾರಣರಾದ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಿ ತನಿಖೆ ನಡೆಸಬೇಕು ಹಾಗೂ ಶಿಕ್ಷೆಯ ರೂಪದಲ್ಲಿ ಅವರಿಂದಲೇ ನೂರು ಮರಗಳನ್ನು ನೆಡಿಸಬೇಕು”.

* ಸಿದ್ದರಾಜು (ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷರು ಹಾಗೂ ಪ್ರಗತಿಪರ ಹೋರಾಟಗಾರರು): “ಪರಿಸರ ರಕ್ಷಿಸಬೇಕಾದ ಸರ್ಕಾರಿ ಅಧಿಕಾರಿಗಳೇ ತಮ್ಮ ಕಚೇರಿ ಮುಂದೆ ನಿಂತಿದ್ದ ಮರಗಳನ್ನು ನಾಶ ಮಾಡಿರುವುದು ನಾಡಿಗೆ ಬಗೆದ ಘೋರ ದ್ರೋಹ. ಮಳೆ-ಬೆಳೆ ಇಲ್ಲದೆ ಜನ ಕಂಗಾಲಾಗಿರುವಾಗ ನೆರಳು ನೀಡುತ್ತಿದ್ದ ಮರ ಕಡಿಯಲು ಇವರಿಗೆ ಆದೇಶ ಕೊಟ್ಟವರು ಯಾರು? ಹಳ್ಳಿಗಳಿಂದ ಬರುವ ರೈತರ ನೆರಳನ್ನೇ ಕಸಿದುಕೊಂಡು ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ವರ್ತಿಸಿರುವ ಅಧಿಕಾರಿಗಳ ಮೇಲೆ ಸರ್ಕಾರ ತಕ್ಷಣ ಇಲಾಖಾ ಮಟ್ಟದ ಕಠಿಣ ಶಿಸ್ತುಕ್ರಮ ಜರುಗಿಸಬೇಕು”.

* ನವೀನ್ ಕುಮಾರ್ (ವಕೀಲರು, ಪರಿಸರವಾದಿಗಳು ಹಾಗೂ ಸಾಮಾಜಿಕ ಹೋರಾಟಗಾರರು): “ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಸುವುದು ಕಾನೂನುಬಾಹಿರ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ. ಮರ ಉಳಿಸಿಕೊಂಡೇ ಕಾಮಗಾರಿ ಮಾಡಲು ಅವಕಾಶವಿದ್ದರೂ ಕಟಾವು ಮಾಡುವುದನ್ನೇ ದಂಧೆ ಮಾಡಿಕೊಂಡಿರುವುದು ಸಂಶಯಕ್ಕೆ ಎಡೆಮಾಡಿದೆ. ರೈತರ ಜಮೀನುಗಳ ಮರಗಳಿಗೂ ಇವರ ಅವಧಿಯಲ್ಲಿ ಬೇಕಾಬಿಟ್ಟಿ ಕೊಡಲಿ ಇಡಲಾಗುತ್ತಿದೆ. ಪ್ರಕೃತಿ ವಿರೋಧಿಯಾಗಿ ವರ್ತಿಸುತ್ತಿರುವ ಕೊರಟಗೆರೆ ಆರ್ಎಫ್ಒ ಅವರನ್ನು ಕೂಡಲೇ ಈ ಭಾಗದಿಂದ ಎತ್ತಂಗಡಿ ಮಾಡಿ, ಪರಿಸರ ಕಾಳಜಿಯುಳ್ಳ ದಕ್ಷ ಅಧಿಕಾರಿಯನ್ನು ನಿಯೋಜಿಸಬೇಕು”.

* ಜೆಟ್ಟಿ ಅಗ್ರಹಾರ ನಾಗರಾಜು (ಸಾಮಾಜಿಕ ಹೋರಾಟಗಾರರು ಹಾಗೂ ಪರಿಸರ ಪ್ರೇಮಿ): “ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಯಲು ಅಧಿಕಾರಿಗಳಿಗೆ ಸಮಯವಿಲ್ಲ, ಆದರೆ ಸಾವಿರಾರು ಜನರಿಗೆ ನೆರಳು ನೀಡುತ್ತಿದ್ದ ಮರ ಕಡಿಯಲು ಟೆಂಡರ್ ಮಾಡಲು ಸಮಯವಿದೆ! ಸಾರ್ವಜನಿಕರಿಗೆ ಕಿಂಚಿತ್ತೂ ಅಡ್ಡಿಯಾಗದ ಮರವನ್ನು ಕಡಿದಿರುವ ದುರುದ್ದೇಶದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಎಕೋ ಸೆನ್ಸಿಟಿವ್ ಜೋನ್ (ESZ) ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ನಡೆಯುತ್ತಿರುವ ಶಾಮಿಲ್ಗಳ ಅನುಮತಿಯನ್ನು ರದ್ದುಗೊಳಿಸಬೇಕು ಹಾಗೂ ರೈತರಿಂದ ಅಕ್ರಮವಾಗಿ ಮರ ಕಡಿದು ಸಾಗಿಸುತ್ತಿರುವ ಶಾಮಿಲ್ ದಂಧೆಕೋರರ ವಿರುದ್ಧ ಡಿಎಫ್ಒ ಕ್ರಮ ಕೈಗೊಳ್ಳಬೇಕು. ಕೊರಟಗೆರೆ ಘಟನೆಯ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸದಿದ್ದರೆ, ಅರಣ್ಯ ಇಲಾಖೆಯ ಲೋಪಗಳ ವಿರುದ್ಧ ಸಂವಿಧಾನಬದ್ಧವಾಗಿ ತೀವ್ರ ಹೋರಾಟ ರೂಪಿಸಲಾಗುವುದು.”
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಹೇಳಿಕೆ
> “ತಾಲೂಕು ಕಚೇರಿ ಆವರಣದಲ್ಲಿ ಮರ ಕಡಿದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಇಲಾಖೆಯಿಂದ ಯಾವುದೇ ಅರ್ಜಿಯನ್ನು ಸಹ ನಾವು ಅರಣ್ಯ ಇಲಾಖೆಗೆ ನೀಡಿರುವುದಿಲ್ಲ. ಮರಗಳನ್ನು ಕಡಿಯುವ ಅಧಿಕಾರ ಅರಣ್ಯ ಇಲಾಖೆಗೆ ಇದೆ. ಆದರೆ ರಸ್ತೆಗೆ ಅಡ್ಡ ಇತ್ತೋ ಅಥವಾ ಇಲ್ಲವೋ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ.”
> — ಉಮೇಶ್, ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ ಕೊರಟಗೆರೆ.ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಷ್ಟನೆ
> “ಈ ಹಿಂದೆ ಬಂದಿದ್ದ ಅರ್ಜಿಗಳು ಹಾಗೂ ಸಲ್ಲಿಕೆಯಾಗಿದ್ದ ವರದಿಗಳ ಆಧಾರದ ಮೇಲೆ ಮರ ಕಡಿಯಲು ಅನುಮತಿ ನೀಡಲಾಗಿದೆ. ಇನ್ನು ಮುಂದೆ ಮರ ಕಡಿಯಲು ಬರುವ ಹೊಸ ಅರ್ಜಿಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ಮರಗಳು ಜನರಿಗೆ ನಿಜವಾಗಿಯೂ ಆತಂಕಕಾರಿ ಅಥವಾ ಅಪಾಯಕಾರಿಯಾಗಿದ್ದರೆ ಮಾತ್ರ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ. ಸುಖಾಸುಮ್ಮನೆ ಮರ ಕಡಿಯಲು ಅವಕಾಶ ನೀಡುವುದಿಲ್ಲ”.
> — ಕುಮಾರಿ ಉಮಾ ಕೆ ಟಿ, ಎಸಿಎಫ್, ಮಧುಗಿರಿ ಉಪ ವಿಭಾಗಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು “ನಾವು ಮರ ಕಡಿಯಲು ಅರ್ಜಿಯನ್ನೇ ನೀಡಿಲ್ಲ” ಎಂದು ಕೈತೊಳೆದುಕೊಂಡಿರುವುದು ಮತ್ತು ಇತ್ತ ಎಸಿಎಫ್ ಅವರು “ಹಿಂದಿನ ಅರ್ಜಿಗಳ ಆಧಾರದಲ್ಲೇ ಅನುಮತಿ ನೀಡಲಾಗಿದೆ” ಎಂದು ಹೇಳಿರುವುದು ಇಲಾಖೆಗಳ ನಡುವಿನ ಭಾರೀ ಸಮನ್ವಯದ ಕೊರತೆ ಹಾಗೂ ಅನುಮಾನಗಳಿಗೆ ನೇರ ಪುಷ್ಟಿ ನೀಡಿದೆ. ಕಂದಾಯ ಸಚಿವರ ಸ್ವಕ್ಷೇತ್ರದಲ್ಲೇ ಇಂತಹ ಸಾರ್ವಜನಿಕ ಹಿತಾಸಕ್ತಿ ವಿರೋಧಿ ಕೃತ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಜಿಲ್ಲಾಡಳಿತವು ಸೂಕ್ತ ತನಿಖೆ ನಡೆಸಿ ವಾಸ್ತವಾಂಶವನ್ನು ಬಯಲಿಗೆಳೆಯಬೇಕಿದೆ.

