ಪಾವಗಡ: ತಾಲ್ಲೂಕಿನ ಶೈಕ್ಷಣಿಕ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶಮಿ ವೃಕ್ಷ ಅಭಿವೃದ್ಧಿ ಸಮಿತಿ ಟ್ರಸ್ಟ್, ಹೆಲ್ಪ್ ಸೊಸೈಟಿ ಸೇವಾ ಟ್ರಸ್ಟ್, ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಸೆಂಟರ್ ಮತ್ತು ನಳಿನ್ನಾ ಟ್ಯುಟೋರಿಯಲ್ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಸಮಾರಂಭದಲ್ಲಿ, ತಾಲ್ಲೂಕಿನ ಟಾಪ್ 3 ಸ್ಥಾನಗಳನ್ನು ಅಲಂಕರಿಸಿದ ಪ್ರತಿಭೆಗಳನ್ನು ಸನ್ಮಾನಿಸಲಾಯಿತು. 625ಕ್ಕೆ 621 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಸಾಯಿ ವೆಂಕಟ್ ಜಿ, 616 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದ ಉಷಾ ಕಿರಣ್ ಸಿ.ಎನ್ ಹಾಗೂ 613 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದ ಲಿಖಿತ ಎಸ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಸತ್ಯ ಲೋಕೇಶ್ ಮಾತನಾಡಿ ತಾಲೂಕಿನ ಶೈಕ್ಷಣಿಕ ಪ್ರಗತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶಮಿ ವೃಕ್ಷ ಟ್ರಸ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. 2025-26ನೇ ಸಾಲಿನಲ್ಲಿ ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ “ಮೂರು ಮುತ್ತು ರತ್ನಗಳಂತಹ” ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಕರೆಯಿಸಿ ಸನ್ಮಾನಿಸಲಾಯಿತು ಎಂದರು

ಸಂಸ್ಕಾರಯುತ ಶಿಕ್ಷಣ ಅಗತ್ಯ:
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ, “ಶಿಕ್ಷಣ ಎನ್ನುವುದು ಕೇವಲ ಅಂಕಪಟ್ಟಿಗೆ ಅಥವಾ ಉದ್ಯೋಗಕ್ಕೆ ಸೀಮಿತವಾಗಬಾರದು. ನಾವು ಎಷ್ಟೇ ದೊಡ್ಡ ಶಿಕ್ಷಣ ಪಡೆದರೂ ನಮ್ಮ ತಂದೆ-ತಾಯಿ ಹಾಗೂ ಬೆಳೆಸಿದ ಮಣ್ಣಿನ ಸಂಸ್ಕಾರವನ್ನು ಮರೆಯಬಾರದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಅಂಕಗಳ ಜೊತೆಗೆ ಮೌಲ್ಯಯುತ ಶಿಕ್ಷಣವೂ ಅತಿ ಅಗತ್ಯ,” ಎಂದು ಕಿವಿಮಾತು ಹೇಳಿದರು.

ನಕ್ಷತ್ರಗಳಿಗಿಂತ ಚಂದ್ರನಾಗುವ ಗುರಿ ಇರಲಿ:
ಬಿಆರ್ಸಿ ಜಿ.ವಿ. ವೆಂಕಟೇಶ್ ಮಾತನಾಡಿ, “ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂದು ನಗರ ಪ್ರದೇಶದ ಪ್ರತಿಭೆಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಭಗವದ್ಗೀತೆಯ ಶ್ಲೋಕದಂತೆ ಸಾವಿರಾರು ನಕ್ಷತ್ರಗಳಿಗಿಂತ ಒಬ್ಬ ಗುಣವಂತ ವಿದ್ಯಾರ್ಥಿ ಸಮಾಜಕ್ಕೆ ದೊಡ್ಡ ಆಸ್ತಿಯಾಗಬಲ್ಲ,” ಎಂದರು. ಅಲ್ಲದೆ, ವಿದ್ಯಾರ್ಥಿಗಳು ಬ್ರೈನ್ ಡ್ರೈನ್ (Brain Drain) ಗೆ ಒಳಗಾಗದೆ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಬಿಇಓ ರೇಣುಕಮ್ಮ, ಬಿ ಆರ್ ಸಿ ವೆಂಕಟೇಶಪ್ಪ ಹಾಗೂ ಇ. ಸಿ. ಓ. ಖಾಜಾ ಹುಸೇನ್ ಅವರು ವಹಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಮಿರುಕ್ಷಾ ಟ್ರಸ್ಟ್ ನ ಕಾರ್ಯದರ್ಶಿ ಸತ್ಯ ಲೋಕೇಶ್, ಉಪಾಧ್ಯಕ್ಷರಾದ ರಾಘವೇಂದ್ರ ಗುರಪ್ಪ, ಸೇವಾ ಟ್ರಸ್ಟ್ ಅಧ್ಯಕ್ಷರಾದ ಮಾನಂ ಶಶಿಕಿರಣ್ ಹಾಗೂ ಬ್ರೈಟ್ ಫ್ಯೂಚರ್ ಸಿ ಈ ಓ ಶ್ರೀಧರ್ ಗುಪ್ತ ಮತ್ತು ಸುಮಾ ಶ್ರೀಧರ್ ಗುಪ್ತ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇವರೊಂದಿಗೆ ಗಣ್ಯರಾದ ಚಂದನ, ನಳಿನಾ ಮೇಡಂ, ಪತ್ರಕರ್ತರಾದ ಮೈಕಲ್ ಕೊಂಡಪ್ಪ, ಹಾಗೂ ಶಿಕ್ಷಕ ವೃಂದದ ಪರವಾಗಿ ಶಿವಕುಮಾರ್, ರಾಘವೇಂದ್ರ ಮತ್ತು ಹರ್ಷ ಅವರು ಭಾಗವಹಿಸಿದ್ದರು.
