ತುಮಕೂರು – ಕೆರೆಗೆ ಹರಿದು ಬರುತ್ತಿರುವ ಕಲುಷಿತ ನೀರಿನ ಜೊತೆಗೆ ಬಿಸಿಲಿನ ತಾಪಮಾನ ಏರಿಕೆಯ ಹೊಡೆತಕ್ಕೆ ಸಿಲುಕಿದ ಬೃಹತ್ ಗಾತ್ರದ ಮೀನುಗಳು ಸಾವನ್ನಪ್ಪಿರುವ ಘಟನೆ ಮಲ್ಲಸಂದ್ರ ಕೆರೆಯಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ಕೆರೆಯ ಸುತ್ತ ಮತ್ತಲಿನ ಗ್ರಾಮಕ್ಕೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಕೂಡಲೇ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ತುಮಕೂರು ತಾಲೂಕು ಮಲ್ಲಸಂದ್ರ ಗ್ರಾಮಕ್ಕೆ ಹೊಂದಿಕೊಂಡಂತಿರುವ ಸುಮಾರು 600 ಎಕರೆಯಷ್ಟು ವಿಸ್ತಾರ ಪ್ರದೇಶ ಹೊಂದಿರುವ ಮಲ್ಲಸಂದ್ರ ಕೆರೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮೀನುಗಳು ಸಾವನ್ನಪ್ಪುತ್ತಿದ್ದು ಇಡೀ ಕೆರೆಯ ನೀರು ಕಲುಷಿತಗೊಂಡಿರುವುದಲ್ಲದೇ ಪರಿಸರದೊಂದಿಗೆ ಸುತ್ತಮುತ್ತಲಿನ ಗ್ರಾಮಸ್ಥರಿಗೂ ಸಾಂಕ್ರಾಮಿಕ ರೋಗ ತಟ್ಟುವ ಭೀತಿ ಎದುರಾಗಿದೆ ಎನ್ನಲಾಗಿದೆ. ಈ ರೀತಿಯಾಗಿ ಸಾವನ್ನಪ್ಪಿತ್ತಿರುವ ಸಾವಿರಾರು ಮೀನುಗಳು ಮಲ್ಲಸಂದ್ರ ಗ್ರಾಮದ ಕೆರೆ ಕೋಡಿಗೆ ಬಂದು ನಿಲ್ಲುತ್ತಿರುವುದರಿಂದ ನೀರು ಮುಂದೆ ಹರಿಯದೆ ನಿಂತ ನೀರಿನಲ್ಲಿ ಮೀನುಗಳು ಕೊಳೆತು ಕೆಟ್ಟ ವಾಸನೆ ಬೀರುತ್ತಿದ್ದು ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ, ಈ ಕುರಿತು ಸ್ಥಳೀಯ ಅಧಿಕಾರಿಗಳಿಗೆ ಕೆಲ ಗ್ರಾಮಸ್ಥರು ವಿಷಯ ತಿಳಿಸಿದ್ದರೂ ಸಹ ಇದುವರೆವಿಗೂ ಗಮನಹರಿಸಿಲ್ಲವೆಂದು ಹೇಳಲಾಗುತ್ತಿದೆ.

ಈ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು, ಸ್ಥಳೀಯ ಮುಖಂಡರುಗಳು ಕೆರೆಯ ಸುತ್ತಮುತ್ತಲಿನ ಪರಿಸರ ಸಂಪೂರ್ಣ ಹಾಳಾಗಿದ್ದು ಮನೆಯಿಂದ ಹೊರಬಾರದೆ ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ. ಕೂಡಲೆ ಮೀನುಗಳ ಸರಣಿ ಸಾವಿನ ಬಗ್ಗೆ ತನಿಖೆ ನಡೆಸಬೇಕು ಹಾಗೂ ಸತ್ತ ಮೀನುಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕಾಗಿದ್ದು ಸ್ಥಳೀಯ ಆಡಳಿತಗಳು ಹಾಗೂ ಸಂಬಂಧ ಪಟ್ಟ ಇಲಾಖೆಗಳು ಇದರ ಬಗ್ಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾವುಗಳು ದಿನ ಕಳೆಯುವುದೇ ದುಷ್ಟಕರವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇನ್ನು ತುಮಕೂರು ನಗರದಿಂದ ಭೀಮಸಂದ್ರಕ್ಕೆ ಹರಿದು ಬರುವ ಕೊಳಚೆ ನೀರು, ಸಂಸ್ಕರಣ ಘಟಕದಿಂದ ಮುಂದೆ ಹರಿದು ಮಲಸಂದ್ರ ಕೆರೆಗೆ ನೀರು ಸೇರುತ್ತಿದ್ದು ಕಲುಷಿತ ನೀರಿನಿಂದ ಕೆರೆಯ ನೀರೆಲ್ಲ ಹಸಿರು ನೀರಾಗಿ ಪರಿವರ್ತನೆಯಾಗಿದ್ದು ಇದರ ನಡುವೆ ಸ್ಥಳೀಯ ಮುಖಂಡರೊಬ್ಬರಿಗೆ ಮೀನುಗಳ ಸಾಕಾಣಿಕೆಯ ಟೆಂಡರ್ ನೀಡಿದ್ದು ಮೀನುಗಳು ಸರಿಯಾಗಿ ವಿಲೇವಾರಿಯಾಗದೆ ಹಾಗೆ ಉಳಿದಿರುವುದು ಒಂದೆಡೆಯಾದರೆ ಮತ್ತೊಂದೆಡೆ ನಿರಂತರವಾಗಿ ಕೆರೆಗೆ ಹಾಕಿರುವ ಬಲೆಗಳು ಅಲ್ಲಲ್ಲಿ ಸಿಲುಕಿ ಮೀನುಗಳು ಒಂದೆಡೆಯಿಂದ ಮತ್ತೊಂದುಡೆಗೆ ಹೋಗಲಾರದೆ ಮೀನುಗಳು ಸಾವನ್ನಪ್ಪಿವೆ ಎನ್ನುವ ಆರೋಪಗಳು ಸಹ ಕೇಳಿ ಬರುತ್ತಿವೆ.

ಈ ಕೆರೆಯಲ್ಲಿ ಮೀನು ಸಾಕಲು / ಹಿಡಿಯಲು ಟೆಂಡರ್ ಪಡೆದಿರುವ ರವಿ ಎಂಬುವವರ ಮನವಿ ಮೇರೆಗೆ ದಾವಣಗೆರೆ ಮೂಲದ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಕೆರೆಯಲ್ಲಿ ಮೀನು ಹಿಡಿಯಲು ಬಂದಿದ್ದು ಅವರು ಸಹ ನಿರಂತರ ಮೀನುಗಳ ಸಾವಿಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕೆರೆಯಲ್ಲಿರುವ ಕಲುಷಿತ ನೀರಿನ ಹೊಡೆತಕ್ಕೆ ಸಿಲುಕಿ ಕೆರೆಯಲ್ಲಿರುವ ಮೀನುಗಳು ಸಾವನ್ನಪ್ಪುತ್ತಿವೆ ಎಂದಿದ್ದಾರೆ.

ಅದೇನೇ ಇರಲಿ ನಾಲ್ಕಾರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಬೃಹತ್ ಕೆರೆಯಲ್ಲಿ ನಿರಂತರವಾಗಿ ಸಾವನ್ನಪ್ಪಿ ಕೊಳೆಯುತ್ತಿರುವ ಮೀನು ನೀರಿನಲ್ಲಿ ಇರುವುದರಿಂದ ಸಾಂಕ್ರಾಮಿಕ ರೋಗದ ಬೀತಿ ಎದುರಾಗುತ್ತಿರುವುದಂತೂ ಸುಳ್ಳಲ್ಲ ಕೂಡಲೇ ಸ್ಥಳೀಯ ಆಡಳಿತಗಳು ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ ಬೃಹತ್ ಗಂಡಾಂತರ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
