ತುಮಕೂರು: ಶಿರಾ ತಾಲ್ಲೂಕಿನ ಮಾರನಗೆರೆಗೊಲ್ಲಹಟ್ಟಿ ನಿವಾಸಿ ಬಲರಾಮ ಬಿನ್ ಮಾರಣ್ಣ ಅವರಿಗೆ ಸೇರಿದ 32 ಕುರಿಗಳು ಹಾಗೂ 2 ಮೇಕೆಗಳು ಮೇಯಲು ಬಿಟ್ಟಾಗ ವಿಷಪೂರಿತ ಆಹಾರ ಸೇವಿಸಿ ದಿನಾಂಕ 12-07-2026 ಮತ್ತು 13-07-2026 ರಂದು (ಭಾನುವಾರ ಮತ್ತು ಸೋಮವಾರ) ಮೃತಪಟ್ಟಿದ್ದವು.

ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ತಕ್ಷಣವೇ ಸ್ಪಂದಿಸಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಸರ್ಕಾರದ ‘ಅನುಗ್ರಹ ಕೊಡುಗೆ’ ಯೋಜನೆಯಡಿ, ಮೃತಪಟ್ಟ ಪ್ರತಿ ಕುರಿಗೆ ತಲಾ 7,500 ರಂತೆ ಒಟ್ಟು 2,55,000 (ಎರಡು ಲಕ್ಷದ ಐವತ್ತೈದು ಸಾವಿರ ರೂಪಾಯಿ ಮಾತ್ರ)ಗಳ ಪರಿಹಾರದ ಮಂಜೂರಾತಿ ಆದೇಶ ಪತ್ರವನ್ನು ಸಂತ್ರಸ್ತ ಮಾಲೀಕರಿಗೆ ವಿತರಿಸಲಾಯಿತು. ಉಪ ಮುಖ್ಯಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಸಂತ್ರಸ್ತ ಮಾಲೀಕ ಬಲರಾಮ ಅವರಿಗೆ ಈ ಪರಿಹಾರದ ಆದೇಶ ಪತ್ರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಡಾ: ಎಚ್.ಎಂ. ಶಿವಪ್ರಸಾದ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ಅನುಷ್ಠಾನಾಧಿಕಾರಿ ಡಾ: ಲೋಹನ್, ಶಿರಾ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿ ಡಾ: ಸಂತೋಷ್ ಕುಮಾರ್ ಜಿಲ್ಲೆಯ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
