ಮೆಳೇಹಳ್ಳಿ ಕೆರೆಯ ಮಣ್ಣು ದಂಧೆಕೋರರಿಗೆ ಕಡಿವಾಣ ಬೀಳುವುದಾದರು ಯಾವಾಗ?

ತುಮಕೂರು : ತಾಲ್ಲೂಕಿನ ಕೋರಾ ಹೋಬಳಿ ಮೆಳೇಹಳ್ಳಿ ಗ್ರಾಮದ ಕೆರೆಯಲ್ಲಿ ಅಕ್ರಮ ಮಣ್ಣು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

 

 

 

 

ಕಳೆದ ಹಲವಾರು ದಿನಗಳಿಂದ ಪೈಪೋಟಿ ಮೇಲೆ ಈ ಮಣ್ಣು ದಂಧೆ ಸಕ್ರೀಯವಾಗಿ ನಡೆಯುತ್ತಿದ್ದು ಶಾಶ್ವತ ಕಡಿವಾಣ ಇದುವರೆಗೂ ಬೀಳದೇ ಇರುವುದು ಶೋಚನೀಯ ಸಂಗತಿ. ಕೋರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕೆರೆ ಇದಾಗಿದ್ದು, ವ್ಯಾಪ್ತಿಯಲ್ಲಿ ಅತ್ಯಂತ ಕಿರಿಯದಾಗಿದೆ. ಈಗಾಗಲೇ ಕೆರೆಯ ಮಣ್ಣನ್ನು ರೈಲ್ವೇ ಇಲಾಖೆಯ ಕಾಮಗಾರಿಗಳಿಗೆ ಲೂಟಿ ಮಾಡಲಾಗಿದ್ದು, ಉಳಿಕೆ ಮಣ್ಣನ್ನು ಮಣ್ಣು ದಂಧೆಕೋರರು ಲೂಟಿ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕುವವರು ಯಾರೂ ದಿಕ್ಕಿಲ್ಲದಂತೆ ಆಗಿದೆ.

 

 

 

 

ಪಂಚಾಯಿತಿ ಪಿಡಿಓ ಹಾಗೂ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದರೂ ಸಹ ಈ ದಂಧೆಗೆ ಕಡಿವಾಣ ಹಾಕಲು ಅವರ ಕೈಯಲ್ಲಿ ಆಗುತ್ತಿಲ್ಲ. ಬರೀ ಇಲ್ಲಸಲ್ಲದ ಸಬೂಬು ಹೇಳಿ ಕಾಲ ಕಳೆಯುತ್ತಿದ್ದಾರೆ ವಿನಃ ಸ್ಥಳಕ್ಕೆ ಬಂದು ಮಣ್ಣು ದಂಧೆಗೆ ಕಡಿವಾಣು ಹಾಕುವ ಇಚ್ಛಾಶಕ್ತಿ ತೋರದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

 

 

 

 

ಪಿಡಿಓ ಅವರಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ವಾಟರ್‌ ಮ್ಯಾನ್‌ ರವರನ್ನು ಕಳುಹಿಸುತ್ತಾರೆ, ಆದರೆ ದಂಧೆಕೋರರು ಅವರಿಗೆ ಧಮ್ಕಿ ಹಾಕುವಷ್ಟು ಪ್ರಭಾವಿಗಳಾಗಿದ್ದು ಅವರು ಬಂದ ದಾರಿಗೆ ಸುಂಕವಿಲ್ಲದಂತೆ ಜಾಗ ಖಾಲಿ ಮಾಡುತ್ತಾರೆ. ಇನ್ನು ಪಿಡಿಓ ಅವರಿಗೆ ಸ್ಥಳಕ್ಕೆ ಬರಲು ತಿಳಿಸಿದರು ಸಹ ಅವರು ಒಮ್ಮೆಯೂ ಸ್ಥಳಕ್ಕೆ ಭೇಟಿ ನೀಡಿ ದಂಧೆಕೋರರ ವಿರುದ್ಧ ಕ್ರಮಕ್ಕೆ ಮುಂದಾಗದಿರುವುದು ಕೆಲವು ಅನುಮಾನಗಳಿಗೆ ಪುಷ್ಠಿ ನೀಡುತ್ತಿದೆ.

 

 

 

 

ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ಮಣ್ಣು ದಂಧೆಯ ಬಗ್ಗೆ ವಿಚಾರ ಮುಟ್ಟಿಸಿದರೆ ನೀವೇ ದೂರು ನೀಡಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದೂರವಾಣಿ ಕರೆಯನ್ನೇ ಸ್ವೀಕರಿಸದೇ ಇರುವುದು ದುರಾದೃಶ್ಟವೇ ಸರಿ……………

 

ಅಧಿಕಾರಿಗಳ ವ್ಯವಸ್ಥಿತ ಕಳ್ಳಾಟದಿಂದ ಮೆಳೇಹಳ್ಳಿ ಕೆರೆ ಮಣ್ಣು ರಾಜಾರೋಷವಾಗಿ ಲೂಟಿಯಾಗುತ್ತಿದ್ದು ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿಗಳ ನಷ್ಟವಾಗುತ್ತಿದೆ. ಇನ್ನಾದರೂ ನಿದ್ದೆಯಲ್ಲಿರುವ ಅಧಿಕಾರಿಗಳು ಹಾಗೂ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡು ಅಕ್ರಮ ಮಣ್ಣು ದಂಧೆಗೆ ಕಡಿವಾಣ ಹಾಕಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *