ಕುಡಿಯುವ ನೀರಿಗೆ 5ಕೋಟಿ, ಇವೆಂಟ್ ಗೆ 12 _ಕೋಟಿ. ಸರ್ಕಾರದ ಮೂರು ವರ್ಷದ ಸಾಧನೆ ಸಮಾವೇಶಕ್ಕಾಗಿ 12 ಕೋಟಿಯನ್ನು ವಿಶೇಷ ಭೂಸ್ವಾಧೀನ ಪ್ರಕರಣಗಳಲ್ಲಿ ಠೇವಣಿಯಾಗಿಟ್ಟಂತ ಹಣದ ಬಡ್ಡಿ ದುಡ್ಡಿಗೆ ಕೈ ಹಾಕಿದೆ.
ಬಡವರ ಮಕ್ಕಳ ವಸತಿ ಶಾಲೆಗೆ in-take ಹೆಚ್ಚಿಸಲು 11ಕೋಟಿ ಹೊಂದಿಸಲು ಕಷ್ಟ ಹಣಕಾಸು ಇಲಾಖೆ. ಆದರೆ ನ್ಯಾಷನಲ್ ಹೆರಾಲ್ಡ್ ಇತರೆ ಪತ್ರಿಕೆ ಟಿವಿ ಜಾಹೀರಾತುಗಳಿಗೆ ಪ್ರಚಾರಕ್ಕಾಗಿ ಮೂರು ವರ್ಷದಲ್ಲಿ 1076.27 ಕೋಟಿ ವೆಚ್ಚ. ನ್ಯಾಷನಲ್ ಹೆರಾಲ್ಡ್ ಕರ್ಣಾಟಕದ ಪತ್ರಿಕೆಯೇ..?
1,17,000 ಸರ್ಕಾರಿ ನೌಕರರಿಗೆ ಮೂರು ತಿಂಗಳಾದರೂ 83489 ಕೋಟಿ ಹಣ ಪಾವತಿ ಬಾಕಿ ಇದೆ.
ಐದು ಗ್ಯಾರಂಟಿಗಳ ಪರಿಶೀಲಿಸಿದ ವ್ಯಕ್ತಿಯಸುಧಾರಣಾಕೋಶ ಸಾಲದ ಮೂಲಕ ಅನುದಾನ ಒದಗಿಸಲಿರುವ ಸರ್ಕಾರ . ಗ್ಯಾರಂಟಿ ಸಮೀಕ್ಷೆ 15 ಜಿಲ್ಲೆ ಪ್ರಗತಿ,16ರಲ್ಲಿ ಕುಂಟಿತ ಆಡಳಿತಕ್ಕೆ ಸ್ಪಂದಿಸದ ಅಧಿಕಾರಿಶಾಹಿ.
ಪರಿಶಿಷ್ಟ ಉಪ ಯೋಜನೆ ಅನುದಾನ 175.5 ಕೋಟಿ ಅಲ್ಲಿ ಕೇವಲ 43.8 ಕೋಟಿ ಬಿಡುಗಡೆ
ಬೊಕ್ಕಸಕ್ಕೆ ಹೊರೆಯಾದ ಗೃಹಜ್ಯೋತಿ ಸರ್ಕಾರಿ ಇಲಾಖೆಗಳಿಂದಲೇ 11757.07 ಕೋಟಿ ಬಾಕಿ.
ಗೃಹ ಜ್ಯೋತಿ ನೊಂದಣಿಗೂ ಲಂಚ, ನೋಂದಣಿ ಆದರೂ ಬಿಲ್ ಕಟ್ಟಿರುವ ಫಲಾನುಭವಿಗಳು ಸಮೀಕ್ಷೆ ವರದಿ
ಸಾರಿಗೆ ನಿಗಮಗಳಿಗೆ ರೂ.4006.47 ಕೋಟಿ ಬಾಕಿ,ಶಕ್ತಿ ಯೋಜನೆಗೆ 1973 ಕೋಟಿ ಅಲ್ಲಿ 399 ಕೋಟಿ ಮಾತ್ರ ಬಿಡುಗಡೆ ಸಾರಿಗೆ ಸಂಸ್ಥೆಗಳ ಸ್ಥಿತಿ ಅದೋಗತಿ.ಶಕ್ತಿ ಉಚಿತ ಸಂಚಾರದಿಂದಲೇ ಹೆಚ್ಚಿನ ನಷ್ಟ ಬಿಎಂಟಿಸಿ ಎಂಡಿ ಇಂದಲೇ ಬಹಿರಂಗ,ಶಕ್ತಿ ಯೋಜನೆ ಎಸ್ಸಿ ಎಸ್ಟಿ ಫಲಾನುಭವಿಗಳ ನಿಖರ ಅಂಶ ಒದಗಿಸದ ಸಾರಿಗೆ ಇಲಾಖೆ
ನಿರಂತರ ಏರಿಕೆ ಎಂಟನೇ ತಿಂಗಳಲ್ಲಿ 32,289.99 ಕೋಟಿ ಸಾರ್ವಜನಿಕ ಸಾಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರ್ಕಾರದ cash Balance ಬಹಿರಂಗಗೊಳಿಸುವ ಧಮ್ಮು ತಾಕತ್ತು ಇದೆಯಾ…?
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು 3 ವರ್ಷ ಪೂರೈಸಿದ ಸಂದರ್ಭದಲ್ಲಿ ತುಮಕೂರಿನಲ್ಲಿ ದಿನಾಂಕ 19-05-2026 ರಂದು ಸಾಧನಾ ಸಮಾವೇಶ ನಡೆಸಲಾಗುತ್ತಿದೆ. ಸಿದ್ದರಾಮಯ್ಯನವರು ತಮ್ಮ ಖುರ್ಚಿಯನ್ನು ಉಳಿಸಿಕೊಂಡಿರುವುದೇ ದೊಡ್ಡ ಸಾಧನೆಯಾಗಿದ್ದು, ಇದಕ್ಕೆ ಸಚಿವ ಸಂಪುಟವು ಎರಡು ಭಾಗವಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರ ಪರವಾಗಿ ದೆಹಲಿ ದಂಡಯಾತ್ರೆ ಮಾಡುವುದು, ಸಭೆ ನಡೆಸುವುದು, ಹೇಳಿಕೆ ನೀಡುವುದೆ ದೊಡ್ಡ ಸಾಧನೆಯಾಗಿದೆ. ವರ್ಷವರ್ಷವೂ ಸಮಾವೇಶ ನಡೆಸುವುದು ಚಾಳಿಯಾಗಿದ್ದು, ಸರ್ಕಾರ ಉಳಿದಿರುವುದೇ ದೊಡ್ಡ ಸಾಧನೆಯಾಗಿರುತ್ತದೆ.
ರಾಜ್ಯದಲ್ಲಿ ನಿರುದ್ಯೋಗವು ಬಹಳ ದೊಡ್ಡ ಸಮಸ್ಯೆಯಾಗಿದ್ದು, ನೇಮಕಾತಿಗಳು ಸಂಪೂರ್ಣವಾಗಿ ಸ್ಥಗಿತಗೊಂಡು, ಯುವಜನರು ಕಂಗಾಲಾಗಿದ್ದಾರೆ. ನಿರುದ್ಯೋಗಿಗಳಿಗೆ ನೀಡಬೇಕಾದ ಸಂಬಳದ ಹಣದಲ್ಲಿ ಗ್ಯಾರೆಂಟಿ ಯ್ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. 56 ಸಾವಿರ ಹೊಸ ನೇಮಕಾತಿಗಳ ಅಧಿಸೂಚನೆ ಹೊರಡಿಸುವುದಾಗಿ ಘೋಷಿಸಿ ಮೂರು ತಿಂಗಳಾದರೂ ಅದರ ಸೂಚನೆಯೆ ಕಾಣಿಸುತ್ತಿಲ್ಲ. ಕೆಪಿಎಸ್ಸಿಯಲ್ಲಿ ಅಕ್ರಮಗಳ ಸರಣಿಯೆ ನಡೆದಿದ್ದರೂ ಯಾವುದೇ ಕ್ರಮಗಳಾಗಲಿ, ಸುಧಾರಣೆಗಳಾಗಲಿ ಆಗುತ್ತಿಲ್ಲ. ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಹಲವಾರು ಬೆಳೆಗಳ ಬೆಲೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ, ರಾಜ್ಯದಲ್ಲಿ ಮತ್ತೊಮ್ಮೆ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ, ರೈತರ ಪಂಪ್’ಸೆಟ್’ಗಳಿಗೆ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ, ಕೈಗಾರಿಕೆಗಳಿಗೆಂದು ವ್ಯಾಪಕವಾಗಿ ಭೂಸ್ವಾಧೀನದ ಹೆಸರಿನಲ್ಲಿ ರೈತರನ್ನು ಬೀದಿಪಾಲು ಮಾಡಲಾಗುತ್ತಿದೆ, ಆದರೆ ರಿಯಲ್ ಎಸ್ಟೇಟ್ ಮಾಫಿಯಾದವರು ಮತ್ತು ಅಧಿಕಾರಿಗಳು ಇದರ ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತರ ಸಾಲದ ಸಿಳಿಗೆ ಸಿಲುಕುತ್ತಿದ್ದು, ಬ್ಯಾಂಕ್ ಮತ್ತು ಖಾಸಗಿ ಫೈನಾನ್ಸ್ ನವರ ಅಡಕತ್ತರಿಯಲ್ಲಿ ನರಳುತ್ತಿದ್ದಾರೆ. ಇವರ ನೆರವಿಗೆ ರಾಜ್ಯ ಸರ್ಕಾರವು ಬರುತ್ತಿಲ್ಲ.

ಸರ್ಕಾರದ ಪ್ರಚಾರಕ್ಕಾಗಿ ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ, ಆದರೆ ಕೆರೆ, ಆಸ್ಪತ್ರೆ, ಶಾಲೆ ಅಭೃವೃದ್ಧಿಗೆ ಹಣಕಾಸು ಇಲ್ಲವೆಂದು ಪ್ರಸ್ತಾವನೆಗಳು ನೆನೆಗುದಿಗೆ ಬಿದ್ದಿವೆ ಅಥವಾ ತಿರಸ್ಕೃತವಾಗಿವೆ. ಮತ್ತೊಂದೆಡೆ ಸರ್ಕಾರದ ಸಾಲವು ಹೆಚ್ಚಾಗುತ್ತಿದೆ, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ, ಆದರೆ ಪ್ರಚಾರ ಕಾರ್ಯಕ್ಕೆ ವ್ಯಯಿಸಲು ಯಾವುದೇ ಅಡೆ ತಡೆ ಇಲ್ಲ. ಸರ್ಕಾರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆಯದಿರುವಾಗ, ಇಂತಹ ಸಮಾವೇಶಗಳು ಮತ್ತು ಪ್ರಚಾರ ಕಾರ್ಯಗಳ ಮೊರೆ ಹೋಗಬೇಕಾಗುತ್ತದೆ.
ಅಕ್ರಮ ಕಲ್ಲು ಮತ್ತು ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ರಾಜ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲಾಗುತ್ತಿದ್ದು, ತಡೆಯುವಲ್ಲಿ ವಿಫಲವಾಗಿರುವ ಸರ್ಕಾರ, ಅಕ್ರಮ ಎಸಗಿರುವವರ ವಿರುದ್ಧ ಕ್ರಮ ಜರುಗಿಸದೆ, ದಂಡ ವಸೂಲಿ ಮಾಡದೆ, ಲೂಟಿ ಹೊಡೆದಿರುವವರಿಗೆ ಅನುಕೂಲ ಮಾಡಿಕೊಡುವುದಕ್ಕೆ ಮುಂದಾಗಿದೆ. ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಕಂದಾಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರವಿದ್ದು, ಸರ್ವೆ ಕಾರ್ಯ ಸಂಪೂರ್ಣವಾಗಿ ಸ್ಥಗಿತವಾಗಿದೆ, ರೈತರ ಬೆಳೆ ವಿಮೆ ಸಿಗುತ್ತಿಲ್ಲ, ಸಿಕ್ಕರೂ ಅದು ಬಿಡಿಗಾಸು ಮಾತ್ರ. ರಾಜ್ಯದಲ್ಲಿ ಸ್ಥಾಪನೆಯಾಗಿರುವ ಅರ್ಧಕ್ಕಿಂತ ಹೆಚ್ಚು ಮಳೆ ಮಾಪನ ಕೇಂದ್ರಗಳು ಕೆಟ್ಟು ವರ್ಷಗಳೇ ಆದರು, ಸರಿಪಡಿಸಲು ಸಾಧ್ಯವಾಗಿಲ್ಲ. ಬಗರ್ ಹುಕುಂ ಅರ್ಜಿದಾರರು ಹತ್ತಾರು ವರ್ಷಗಳಿಂದ ಚಾತಕ ಪಕ್ಷಗಳಂತೆ ಭೂಮಿಗಾಗಿ ಕಾಯುತ್ತಿದ್ದಾರೆ, ಆದರೆ ಅವರಿಗೆ ಹಕ್ಕುಪತ್ರ ನೀಡದೆ, ಭೂಕಬಳಿಕೆಗೆ ನೆರವಾಗುತ್ತಿದೆ. ಇದಕ್ಕೆ ಕಂದಾಯ ಸಚಿವರು ತಾಲ್ಲೂಕು ಕಛೇರಿಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳಿಗೆ ನೀಡುತ್ತಿರುವ ಎಚ್ಚರಿಕೆಯೆ ಸಾಕ್ಷಿಯಾಗಿದ್ದು, ಈ ಎಚ್ಚರಿಕೆಯ ನಡುವೆಯೂ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲದಿರುವುದು ವ್ಯವಸ್ಥೆ ಯಾವ ಮಟ್ಟಕ್ಕೆ ಜಡ್ಡುಗಟ್ಟಿದೆ ಮತ್ತು ಅಧಿಕಾರಿಗಳು ನಿಯಂತ್ರಣ ತಪ್ಪಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಿನಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಲಾಗಿದೆ, ಹಿಂದೆ ಆರ್ ಎಸ್ ಎಸ್ ಸಂಬಂಧಿ ಅಂಗ ಸಂಸ್ಥೆಗಳಿಗೆ ಬಿಜೆಪಿ ಸರ್ಕಾರ ಸಾರ್ವಜನಿಕ ಭೂಮಿಯನ್ನು ಮಂಜೂರು ಮಾಡಿಕೊಳ್ಳಲಾಗಿದೆ, ಈ ಬಗ್ಗೆಯೂ ಯಾವುದೇ ಕ್ರಮವಾಗಿಲ್ಲ, ಆದರೆ ಪ್ರತಿ ದಿನವೂ ಆರೆಸ್ಸೆಸ್ ವಿರುದ್ಧ ಸಚಿವರುಗಳು ಮತ್ತು ಮುಖ್ಯಮಂತ್ರಿಗಳು ಮಾತನಾಡುತ್ತಾರೆ, ಕ್ರಮ ಮಾತ್ರ ವಹಿಸುವುದಿಲ್ಲ.
ಬಿಜೆಪಿಯ 40% ಕಮೀಷನ್ ಸರ್ಕಾರದ ವಿರುದ್ಧ ಹೋರಾಟ ಮಾಡಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಆ ಬಗ್ಗೆ ಒಂದೇ ಒಂದು ಕ್ರಮವೂ ಆಗಿಲ್ಲ, ಕೋವಿಡ್ ಅಕ್ರಮಗಳ ಬಗ್ಗೆಯೂ ಯಾವುದೇ ಕ್ರಮವಾಗಿಲ್ಲ, ಆದರೆ ಭ್ರಷ್ಟಾಚಾರವು ಮತ್ತಷ್ತು ಹೆಚ್ಚಾಗಿದೆ. ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸಲಾಗುತ್ತಿಲ್ಲ, 30 ಸಾವಿರಕ್ಕಿಂತಲೂ ಹೆಚ್ಚು ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗದೆ, ಬಾಕಿ ಉಳಿಸಿಕೊಳ್ಳಲಾಗಿದೆ. ನೀರಾವರಿ ಯೋಜನೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ, ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಅರ್ಧಕ್ಕೆ ನಿಂತ ಕಾಲುವೆಗಳು, ಸೇತುವೆಗಳು, ಕಾಮಗಾರಿಗಳು ಸ್ಮಾರಕಗಳಂತೆ ಗೋಚರಿಸುತ್ತಿವೆ.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಂಪೂರ್ಣವಾಗಿ ಇಲಾಖೆಯು ವಿಫಲವಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ, ಅವನ್ನು ಸರಿಪಡಿಸಲೂ ಸಹ ಸರ್ಕಾರದಲ್ಲಿ ಹಣವಿಲ್ಲ. ಇ-ಖಾತೆ ಮತ್ತು ಇ-ಸ್ವತ್ತು ಪಡೆಯಲು ಹತ್ತಾರು ಸಾವಿರ ಲಂಚ ನೀಡದೆ ಪಡೆಯಲು ಸಾಧ್ಯವಿಲ್ಲ ಎಂಬಂತಾಗಿದೆ.
ರಾಜ್ಯದಲ್ಲಿ ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಸಾಧ್ಯವಾಗಿಲ್ಲ, ಮಟ್ಕಾ ದಂಧೆ, ಜೂಜು ಆಡ್ಡೆಗಳು, ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯವಾಟಿಕೆ ಪೊಲೀಸರ ಕೃಪಾಶಿರ್ವಾದದಲ್ಲಿಯೆ ನಡೆಯುತ್ತಿವೆ. ಪೊಲೀಸ್ ಇಲಾಖೆಯ ಭ್ರಷ್ಟಾಚಾರ, ಧರ್ಪ, ದೌರ್ಜನ್ಯ ಬಟಾ ಬಯಲಾಗಿದೆ, 800ಕ್ಕು ಹೆಚ್ಚು ಪೊಲೀಸ್ ಸಿಬ್ಬಂದಿ / ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಅಥವಾ ಅಕ್ರಮಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಆದರೂ ಇಲಾಖೆಯಲ್ಲಿ ಸುಧಾರಣೆಗಳು ಕಾಣುತ್ತಿಲ್ಲ. ಸುಳ್ಳು ಪ್ರಕರಣಗಳನ್ನು ದಾಖಲಿಸುವುದು ಸರ್ವೇ ಸಾಮಾನ್ಯವಾಗಿದೆ. ಪೊಲೀಸ್ ಠಾಣೆಗಳು ಸಂತ್ರಸ್ತರ ಸುಲಿಗೆ ಕೇಂದ್ರಗಳಾಗಿದ್ದು, ರಿಯಲ್ ಎಸ್ಟೇಟ್ ದಂಧೆಕೋರರ ಕಾಪ್ ಪಂಚಾಯ್ತಿ ಅಡ್ಡಗಳಾಗಿವೆ.
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದು ಲೋಕಾಯುಕ್ತ ದಾಳಿ ಹಾಗು ಸ್ವತಃ – ಲೋಕಾಯುಕ್ತ ಪೊಲೀಸ್ ಎಸ್ಪಿಯೊಬ್ಬರು ಭಾಗಿಯಾಗಿದ್ದ ಪ್ರಕರಣವೇ ಸಾಕ್ಷಿಯಾಗಿದೆ. ರಾಜ್ಯದೆಲ್ಲೆಡೆ, ಪ್ರತಿ ಹಳ್ಳಿಯಲ್ಲಿಯೂ ಪೆಟ್ಟಿಗೆ / ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ, ಈ ಬಗ್ಗೆ ದೂರು ನೀಡಿದರೂ ಕೂಡ ಯಾವುದೇ ಕ್ರಮ ವಹಿಸುತ್ತಿಲ್ಲ. ಸರ್ಕಾರದಲ್ಲಿ ಹಣವಿಲ್ಲದಿರುವುದರಿಂದ ರಾಜ್ಯದ ಜನರಿಗೆ ಹೆಚ್ಚಾಗಿ ಮದ್ಯ ಕುಡಿಸಿ, ಅದರ ಆದಾಯದಲ್ಲಿ ಸರ್ಕಾರ ನಡೆಸಲು ಮುಂದಾಗಿದೆ. ಸಿಎಲ್ 7 ಲೈಸೆನ್ಸ್ ಬಾರ್’ಗಳು ರಾಜ್ಯಾದ್ಯಂತ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವುದು ಕಣ್ಣಿಗೆ ರಾಚುತ್ತಿದೆ.
ಅನ್ನಭಾಗ್ಯದ ಅಕ್ಕಿಯು ನಿರಂತರವಾಗಿ ಕಳ್ಳಸಾಗಣೆಯಾಗುತ್ತಿದೆ, ಕಾರ್ಡುದಾರರಿಗೆ ನಿರಂತರವಾಗಿ ಮೋಸ ಮಾಡಲಾಗುತ್ತಿದೆ, ಸಾಕ್ಷಿ ಸಮೇತ ಹಿಡಿದುಕೊಟ್ಟರು ಕೂಡ ಯಾವುದೆ ಕ್ರಮ ವಹಿಸದಿರುವುದು, ಅಧಿಕಾರಿಗಳು ಕೂಡ ಇದರಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿನ ಭ್ರಷ್ಟಾಚಾರ ಮನೆಮಾತಾಗಿದೆ, ವಾಲ್ಮಿಕಿ ನಿಗಮ ಸೇರಿದಂತೆ ಇಲಾಖೆಯ ಅಡಿಯಲ್ಲಿನ ನಿಗಮಗಳು ಹಾಗೂ ವಸತಿ ಶಾಲೆಗಳನ್ನು ನಡೆಸುವ ಕ್ರೈಸ್ ಸಂಸ್ಥೆ ಭ್ರಷ್ಟಾಚಾರದ ಕೂಪಗಳಾಗಿವೆ. ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಶಾಲಾ ಕಟ್ಟಡಗಳು ದುಸ್ಥಿಯಲ್ಲಿದ್ದು, ಶಿಕ್ಷಕರ ಕೊರತೆ ನೀಗಿಸಲು ಯಾವುದೇ ಕ್ರಮ ವಹಿಸುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆ ಕುಸಿದಿದ್ದು, ಔಷಧಿಗಳ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಜನರು ವಿಧಿಯಿಲ್ಲದೆ, ಖಾಸಗಿ ಶಾಲೆ ಮತ್ತು ಆಸ್ಪತ್ರೆಗಳನ್ನೆ ನೆಚ್ಚಿಕೊಳ್ಳಬೇಕಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿ ಮಾಡಲು ಸರ್ಕಾರದಲ್ಲಿ ಹಣವಿಲ್ಲ, ಆದರೆ ಸಾಧನಾ ಸಮಾವೇಶ ನಡೆಸಲು ಹಣವಿದೆ. ನಿರಂತರವಾಗಿ ನೀರು, ಬಸ್ ಟಿಕೆಟ್, ನೋಂದಣಿ ಶುಲ್ಕ, ವಿದ್ಯುತ್ ದರ ಏರಿಕೆ ಮಾಡಿ ಜನರ ಮೇಲೆ ಗಧಾ ಪ್ರಹಾರ ಮಾಡಲಾಗಿದೆ, ಜನರು ಹೈರಾಣಾಗಿದ್ದಾರೆ, ಆದರೆ ಸರ್ಕಾರ ಇದನ್ನೆ ಸಾಧನೆ ಎಂದು ಸಮಾವೇಶ ಮಾಡುತ್ತಿದೆ. ಜಾಹಿರಾತು ರಾಮಯ್ಯ, ಕುಮಾರರ ಪುಟಗಟ್ಟಲೆ ಜಾಹಿರಾತು, ಫ್ಲೆಕ್ಸ್’ಗಳಲ್ಲಿ ರಾಜ್ಯದೆಲ್ಲೆಡೆ ರರಾಜಿಸುತ್ತಿದ್ದಾರೆ.
ನಿರುದ್ಯೋಗಿಗಳ ಸಂಬಳದ ಹಣದಲ್ಲಿ, ಎಸ್’ಸಿಟಿಎಸ್’ಪಿ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡು, ಗ್ಯಾರೆಂಟಿ ಕೊಡುತ್ತಿರುವುದೇ ಸಾಧನೆ ಎಂದು ಬಡಾಯಿ ಕೊಚ್ಚಿಕೊಳ್ಳಲಾಗುತ್ತಿದೆ ಮತ್ತು ಗ್ಯಾರೆಂಟಿಯ ಸುತ್ತ ಗಿರಕಿ ಹೊಡೆಯುತ್ತಿದ್ದಾರೆ. ಯುವನಿಧಿಯು ಸಂಪೂರ್ಣವಾಗಿ ವಿಫಲವಾಗಿದೆ, ಇದರ ಬಗ್ಗೆ ಮಾತೆ ಇಲ್ಲದಾಗಿದೆ. ಮನೆ ನಿರ್ಮಾಣದಲ್ಲಿ ವಸತಿ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು, ಅನುದಾನ ಬಿಡುಗಡೆಗಾಗಿ ಬಡವರು ನಿರಂತರವಾಗಿ ಅಲೆದಾಡುವಂತಾಗಿದೆ. ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆಯು ಕುಂಟುತ್ತಾ ಸಾಗಿದ್ದು, ಅದು ದಶಕ ಕಳೆದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಮೂಡಾ ಹಗರಣ, ವಾಲ್ಮಿಕಿ ನಿಗಮ ಹಗರಣ ಸೇರಿದಂತೆ, ಭೂ ಸ್ವಾಧೀನದಲ್ಲಿನ ಅಕ್ರಮಗಳು ಸರ್ವೆ ಸಾಮಾನ್ಯವಾಗಿವೆ. ಆದರೆ ಹಿಂದೆ ಅಕ್ರಮ ಮಾಡಿದವರಿಗೆ ಭಡ್ತಿ ನೀಡಲಾಗುತ್ತಿದೆ. ಅಕ್ರಮ ಎಸಗಿ ಎಲಾಖಾ ತನಿಖೆ ಎದುರಿಸುತ್ತಿದ್ದ ಎಪಿಪಿಗಳ ಅಮಾನತ್ತನ್ನು ಹಿಂಪಡೆಯಲಾಗಿದೆ, ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಧಿಕಾರಿಯ ಅಮಾನತ್ತನ್ನು ಹಿಂಪಡೆಯಲಾಗುತ್ತದೆ, ಮೂಡದಲ್ಲಿ ಅಕ್ರಮ ಎಸಗಿರುವ ಅಧಿಕಾರಿಗೆ ಭಡ್ತಿ ನೀಡಿ, ಜನರನ್ನು ರೋಧಿಸುತ್ತಿರುವುದೆ ಅಧಿಕಾರ ರಾಮಯ್ಯ ಮತ್ತು ಖುರ್ಚಿ ಕುಮಾರರ ಸಾಧನೆಗಳು.
ಸರ್ಕಾರದಲ್ಲಿ ಹಣವಿಲ್ಲದೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿರಬೇಕಾದರೆ, ಪುಟಗಟ್ಟಲೆ ಜಾಹಿರಾತು ನೀಡುವುದು, ಸಾಧನಾ ಸಮಾವೇಶಗಳನ್ನು ಮಾಡುವುದನ್ನು ನಿಲ್ಲಿಸಬೇಕು, ಅನವಶ್ಯಕ ವೆಚ್ಚಗಳಿಗೆ ಕಡಿವಾಣ ಮಾಡಬೇಕು, ಖುರ್ಚಿ ಕಿತ್ತಾಟಕ್ಕೆ ಬ್ರೆಕ್ ಹಾಕಿ ಆಡಳಿತದ ಕಡೆಗೆ ಗಮನ ನೀಡಬೇಕು ಎಂದು ಕೆ ಆರ್ ಎಸ್ ಪಕ್ಷ ಆಗ್ರಹಿಸುತ್ತದೆ.
