ತುಮಕೂರು ದಸರಾ ಉತ್ಸವಕ್ಕೆ ಪೂರ್ವಸಿದ್ಧತೆ :ಆಚರಣೆಗೆ ಜಿಲ್ಲಾಡಳಿತ ಸಜ್ಜು

ತುಮಕೂರು ನಗರದಲ್ಲಿ ದಸರಾ ಉತ್ಸವವನ್ನು ಎಲ್ಲಾರನ್ನು ಒಳಗೊಂಡಂತೆ ಜನಪರವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ಉಪಸಮಿತಿಗಳ ಅಧ್ಯಕ್ಷರು/ಸದ್ಯಸ ಕಾರ್ಯದರ್ಶಿರವರೊಂದಿಗೆವಿವಿಧ ಇಲಾಖೆಗಳ ಸಮನ್ವಯ, ಕಾರ್ಯಕ್ರಮಗಳ ರೂಪುರೇಷೆ ಹಾಗೂ ಉತ್ಸವದ ಯಶಸ್ವಿ ಆಯೋಜನೆ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ದಸರಾ ಅಂಗವಾಗಿ ನಡೆಯಲಿರುವ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಸ್ಥಳ, ಸಮಯ, ವೇದಿಕೆ ನಿರ್ಮಾಣ, ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಿಕೆ ಸೇರಿದಂತೆ ವಿವಿಧ ವ್ಯವಸ್ಥೆಗಳ ಕುರಿತು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಉತ್ಸವದ ಸಂದರ್ಭದಲ್ಲಿ ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ, ರಸ್ತೆ, ಸಂಚಾರ, ವಾಹನ ನಿಲುಗಡೆ, ಸಾರ್ವಜನಿಕ ಶೌಚಾಲಯ ಹಾಗೂ ತುರ್ತು ವೈದ್ಯಕೀಯ ಸೇವೆಗಳಿಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ, ಜನಸಂದಣಿ ನಿಯಂತ್ರಣ ಹಾಗೂ ಸಂಚಾರ ನಿರ್ವಹಣೆಗೆ ವಿಶೇಷ ಗಮನ ನೀಡಲಾಗುವುದು. ಪೊಲೀಸ್ ಇಲಾಖೆ ಅಗತ್ಯ ಭದ್ರತಾ ವ್ಯವಸ್ಥೆ ರೂಪಿಸಲಿದ್ದು, ಉತ್ಸವ ನಡೆಯುವ ಸ್ಥಳಗಳಲ್ಲಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಹಾಗೂ ಇತರೆ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ.
ತುಮಕೂರು ದಸರಾ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ, ಕವಿಗೋಷ್ಟಿ ಕಲೆ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಪರಿಚಯಿಸುವ ವೇದಿಕೆಯಾಗುವಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪುಸ್ತಕ ಪ್ರದರ್ಶನ, ಸ್ಥಳೀಯ ಕಲಾವಿದರು, ಸಾಂಸ್ಕೃತಿಕ ತಂಡಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಬರ ನಿರ್ವಹಣೆಗೆ ಮೊದಲ ಆದ್ಯತೆ ನೀಡುವುದರ ಜೊತೆಗೆ, ಅನಗತ್ಯ ಅದ್ದೂರಿ ಮತ್ತು ದುಂದು ವೆಚ್ಚಗಳಿಗೆ ಅವಕಾಶ ನೀಡದೆ ‘ಬರ ನಿರ್ವಹಣೆಗೆ ಆದ್ಯತೆ–ಸಂಪ್ರದಾಯಕ್ಕೆ ಗೌರವ’ ಎಂಬ ಆಶಯದೊಂದಿಗೆ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.
ದಸರಾ ಉತ್ಸವವನ್ನು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿಜ ಬಿ.ವಿ., ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತರು, ಶುಭ.ಬಿ., ತುಮಕೂರು ಉಪವಿಭಾಗಾಧಿಕಾರಿ ನಹೀದ ಝಮ್ ಝಮ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *