ಪರಿಷ್ಕೃತ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಜಾರಿಗೆ ತರುವ ಕುರಿತು ಇಂದು ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಪ್ರತಿಭಟನೆ

ಕರ್ನಾಟಕ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 4.5 ಲಕ್ಷ ಹೊರಗುತ್ತಿಗೆ ನೌಕರರ ಜೀವನಮಟ್ಟ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಪ್ರಸ್ತುತ ಜೀವನ ವೆಚ್ಚವನ್ನು ಪರಿಗಣಿಸಿ ಕನಿಷ್ಠ ವೇತನವನ್ನು ಸಮರ್ಪಕವಾಗಿ ಪರಿಷ್ಕರಿಸುವುದು ಅತ್ಯಂತ ಅಗತ್ಯವಾಗಿದೆ ಜೊತೆಗೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಬೃಹತ್‌ ಜಾಥಾ ಮತ್ತು ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳು ಕಛೇರಿಯಲ್ಲಿ ಲಭ್ಯವಿಲ್ಲದ ಕಾರಣ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

 

 

 

 

ಪ್ರತಿಭಟನೆ ಕುರಿತು ಕರ್ನಾಟಕ ರಾಜ್ಯ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಟಿ.ಸಿ.ಡಮರುಗೇಶ್‌ ಮಾತನಾಡಿ  ಕಾರ್ಮಿಕ ಇಲಾಖೆಯಿಂದ ಕನಿಷ್ಠ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಆದೇಶ/ಕರಡು ಅಧಿಸೂಚನೆಯಲ್ಲಿ ವಿವಿಧ ವರ್ಗಗಳ ನೌಕರರಿಗೆ ಪರಿಷ್ಕೃತ ವೇತನ ದರಗಳನ್ನು ನಿಗದಿಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ದಾಖಲೆಗಳಲ್ಲಿ ವಿವಿಧ ವರ್ಗಗಳಾದ Un-skilled, Semi-skilled, Skilled ಮತ್ತು Highly Skilled ನೌಕರರ ವೇತನ ವರ್ಗೀಕರಣವೂ ಉಲ್ಲೇಖವಾಗಿದೆ. ಸದರಿ ಆದೇಶದಲ್ಲಿ ಉಲ್ಲೇಖಿಸಿರುವ ಕೆಲವು ವೇತನ ದರಗಳು, ಉದಾಹರಣೆಗೆ ₹1,196.69, ₹1,087.90, ₹989.00, ₹899.09 ಹಾಗೂ ₹817.35ರಂತಹ ದೈನಂದಿನ ದರಗಳು ಮತ್ತು ಅವುಗಳಿಗೆ ಅನುಗುಣವಾದ ಮಾಸಿಕ ಮೊತ್ತಗಳು ದಾಖಲಾಗಿವೆ. ಆದರೆ, ಹೊರಗುತ್ತಿಗೆ ನೌಕರರ ಹಿತದೃಷ್ಟಿಯಿಂದ ಕರಡು/ಪ್ರಸ್ತಾವಿತ ಆದೇಶವನ್ನು ಇನ್ನಷ್ಟು ವಿಳಂಬ ಮಾಡದೆ ಅಂತಿಮವಾಗಿ ದೃಢೀಕರಿಸಿ (Confirm), ಅಂತಿಮ ಅಧಿಸೂಚನೆ ಹೊರಡಿಸಿ, ಅದರಂತೆ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಪಾವತಿಸುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

 

 

 

 

ಮುಂದುವರೆದು ನಮ್ಮ ಬೇಡಿಕೆಗಳನ್ನು ಸರ್ಕಾರವು ತುರ್ತಾಗಿ ಪರಿಗಣಿಸಬೇಕೆಂದು ಸರ್ಕಾರಕ್ಕೆ ಈ ಮೂಲಕ ಒತ್ತಾಯ ಮಾಡುತ್ತಿದ್ದೇವೆಂದು ತಿಳಿಸುತ್ತಾ, ತಮ್ಮ ಪ್ರಮುಖ ಬೇಡಿಕೆಗಳಾದ ಕನಿಷ್ಠ ವೇತನ ಪರಿಷ್ಕರಣೆ ಕುರಿತು ಈಗಾಗಲೇ ಹೊರಡಿಸಿರುವ ಆದೇಶ/ಕರಡು ಅಧಿಸೂಚನೆಯನ್ನು ತಕ್ಷಣ ದೃಢೀಕರಿಸಿ ಅಂತಿಮ ಅಧಿಸೂಚನೆ ಹೊರಡಿಸುವುದು,  ಅಂತಿಮ ಅಧಿಸೂಚನೆಯಲ್ಲಿ ನಿಗದಿಪಡಿಸುವ ಪರಿಷ್ಕೃತ ಕನಿಷ್ಠ ವೇತನವನ್ನು ಎಲ್ಲಾ ಅರ್ಹ ಹೊರಗುತ್ತಿಗೆ ನೌಕರರಿಗೆ ಕಡ್ಡಾಯವಾಗಿ ಜಾರಿಗೊಳಿಸುವುದು. ಸರ್ಕಾರದ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಇತರೆ ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೂ ಅನ್ವಯವಾಗುವಂತೆ ಸ್ಪಷ್ಟ ಆದೇಶ ಹೊರಡಿಸುವುದು, ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಪಾವತಿಸುವ ಗುತ್ತಿಗೆದಾರರು/ಸಂಸ್ಥೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೊಳಿಸುವುದು. ಪರಿಷ್ಕೃತ ವೇತನ ಜಾರಿಗೆ ಬಂದ ನಂತರ ಬಾಕಿ ಉಳಿದಿರುವ ವೇತನ ವ್ಯತ್ಯಾಸವನ್ನು ಅರ್ಹ ನೌಕರರಿಗೆ ಪಾವತಿಸುವ ಕುರಿತು ಸ್ಪಷ್ಟ ನಿರ್ದೇಶನ ನೀಡುವುದು. ಕನಿಷ್ಠ ವೇತನದ ಜೊತೆಗೆ ಕಾನೂನುಬದ್ಧವಾಗಿ ಅನ್ವಯಿಸುವ ಇತರೆ ಸೌಲಭ್ಯಗಳು ಮತ್ತು ಭತ್ಯೆಗಳನ್ನು ಸಹ ನೌಕರರಿಗೆ ಸಮರ್ಪಕವಾಗಿ ನೀಡುವಂತೆ ಖಚಿತಪಡಿಸುವುದು ಸೇರಿದಂತೆ  ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳನ್ನು ನೇಮಿಸಿ, ಕನಿಷ್ಠ ವೇತನ ಜಾರಿಯಾಗುತ್ತಿರುವ ಬಗ್ಗೆ ನಿಯಮಿತ ಪರಿಶೀಲನೆ ನಡೆಸಬೇಕು ಎಂಬುದು ನಮ್ಮ ಬೇಡಿಕೆಗಳಾಗಿವೆ ಎಂದರು.

 

 

 

 

ನೌಕರರ ಶ್ರಮಕ್ಕೆ ನ್ಯಾಯಯುತ ಪ್ರತಿಫಲ ದೊರೆಯುವುದು ಸಾಮಾಜಿಕ ನ್ಯಾಯದ ಪ್ರಮುಖ ಅಂಶವಾಗಿದೆ. ಆದ್ದರಿಂದ ಈಗಾಗಲೇ ಕೈಗೊಂಡಿರುವ ಕನಿಷ್ಠ ವೇತನ ಪರಿಷ್ಕರಣೆ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬಗೊಳಿಸದೆ, ಆದೇಶವನ್ನು ದೃಢೀಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿ, ಪರಿಷ್ಕೃತ ಕನಿಷ್ಠ ವೇತನವನ್ನು ತಕ್ಷಣದಿಂದಲೇ ಪರಿಣಾಮಕಾರಿಯಾಗಿ ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಇಂದು ಸರ್ಕಾರಕ್ಕೆ ಒತ್ತಾಯ ಮಾಡಿ ತುಮಕೂರು ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

 

 

 

 

 

 

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾಧ್ಯಕ್ಷ ಹರ್ಷ ಜಿಲ್ಲಾ ಕಾರ್ಯಾಧ್ಯಕ್ಷ ನಂಜರೆಡ್ಡಿ, ರಾಜ್ಯ ಸಮಿತಿ ಸದಸ್ಯರಾದ ಮಹೇಶ್ವರ, ಹರೀಶ, ಭವ್ಯಶ್ರೀ ಸೇರಿದಂತೆ ನೂರಾರು ಹೊರಗುತ್ತಿಗೆ ನೌಕರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *