ವಿದ್ಯಾರ್ಥಿಗಳ ಉಚಿತ ಬಸ್‌ ಪಾಸ್ ಘೋಷಣೆ ಮಾಡಿದ ಕರ್ನಾಟಕದ ನೂತನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ ಶಿವಕುಮಾರ್ ರವರ ನಡೆಯನ್ನು ವಿದ್ಯಾರ್ಥಿ ಪರಿಷತ್‌ ಸ್ವಾಗತಿಸುತ್ತದೆ – ಎಚ್ ಆರ್ ಗುರುಪ್ರಸಾದ್

ರಾಜ್ಯದ ವಿದ್ಯಾರ್ಥಿ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಯೋಜನೆಯನ್ನು ಘೋಷಿಸಿರುವ ಕರ್ನಾಟಕದ ನೂತನ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನಿರ್ಧಾರವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸ್ವಾಗತಿಸಿದೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ವಿದ್ಯಾರ್ಥಿಗಳ ಹಿತಾಸಕ್ತಿಗೆ ಸಂಬಂಧಿಸಿದ ಮಹತ್ವದ ನಿರ್ಧಾರವನ್ನು ಕೈಗೊಂಡಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಸಂತಸ ಮೂಡಿಸಿದೆ.
ಹಲವು ವರ್ಷಗಳಿಂದ ರಾಜ್ಯದ ವಿವಿಧ ಸರ್ಕಾರಗಳ ಮುಂದೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವಂತೆ ವಿದ್ಯಾರ್ಥಿ ಪರಿಷತ್ ನಿರಂತರವಾಗಿ ಒತ್ತಾಯಿಸುತ್ತಾ ಬಂದಿತ್ತು. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಸಂಚರಿಸುತ್ತಿದ್ದು, ಸಾರಿಗೆ ವೆಚ್ಚವು ಅವರ ಕುಟುಂಬಗಳಿಗೆ ಹೆಚ್ಚುವರಿ ಹೊರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉಚಿತ ಬಸ್‌ ಪಾಸ್‌ ಯೋಜನೆ ಜಾರಿಗೊಳಿಸುವಂತೆ ಅನೇಕ ಹಂತಗಳಲ್ಲಿ ಮನವಿ ಸಲ್ಲಿಸಲಾಗಿತ್ತು.
 ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ಉಚಿತ ಬಸ್‌ ಪಾಸ್‌ ಘೋಷಿಸಿರುವುದು ಶಿಕ್ಷಣಕ್ಕೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಶಾಲೆ ಹಾಗೂ ಕಾಲೇಜುಗಳಿಗೆ ನಿಯಮಿತವಾಗಿ ಹಾಜರಾಗಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳ ಕಲ್ಯಾಣಕ್ಕೆ ಆದ್ಯತೆ ನೀಡಿರುವ ಸರ್ಕಾರದ ಕ್ರಮ ಶ್ಲಾಘನೀಯವಾಗಿದ್ದು, ರಾಜ್ಯದ ವಿದ್ಯಾರ್ಥಿ ಸಮುದಾಯದ ಪರವಾಗಿ ಈ ನಿರ್ಧಾರವನ್ನು ಎಬಿವಿಪಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ
ಎಚ್.ಆರ್. ಗುರುಪ್ರಸಾದ್, ಎಬಿವಿಪಿ ವಿಭಾಗ ಸಂಚಾಲಕ್

Leave a Reply

Your email address will not be published. Required fields are marked *