ಗಾನ ಕೋಗಿಲೆ ಎಸ್.ಜಾನಕಿಗೆ ಆರ್ಕೆಸ್ಟ್ರಾ ಕಲಾವಿದರ ಗೀತ ನಮನ

ತುಮಕೂರು: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿಯವರ ಅಪೂರ್ವ ಸಂಗೀತ ಸಾಧನೆಯನ್ನು ಸ್ಮರಿಸುವ ‘ಎಸ್. ಜಾನಕಿಯವರ ಗಾನ ನಮನ’ ಕಾರ್ಯಕ್ರಮವು ತುಮಕೂರು ಜಿಲ್ಲಾ ಆರ್ಕೆಸ್ಟ್ರಾ ಕಲಾವಿದರ ಸಂಘ ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

 

 

 

 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಲಕ್ಷ್ಮಣದಾಸ್, ಎಸ್. ಜಾನಕಿಯವರು ತಮ್ಮ ಸುಮಧುರ ಕಂಠ, ಭಾವಪೂರ್ಣ ಗಾಯನ ಮತ್ತು ಅದ್ಭುತ ಸಂಗೀತ ಪ್ರತಿಭೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಳಿಯದ ಛಾಪು ಮೂಡಿಸಿದ್ದಾರೆ. ಅವರ ಹಾಡುಗಳು ಕಾಲಾತೀತವಾಗಿದ್ದು, ಇಂದಿಗೂ ಸಂಗೀತಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಇದೊಂದು ಅತ್ಯಂತ ಹೃದಯ ಸ್ಪರ್ಶಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

 

 

 

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ. ಎಸ್. ಸಿದ್ದಲಿಂಗಪ್ಪ, ಎಸ್. ಜಾನಕಿಯವರು ಸಾಧನೆಯ ಉತ್ತುಂಗದಲ್ಲಿದ್ದರೂ ಅತ್ಯಂತ ಸರಳ ಜೀವನ ನಡೆಸಿದ ಅಪರೂಪದ ಕಲಾವಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡುವ ಮೂಲಕ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

 

 

 

ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ದಿಬ್ಬೂರು ಮಂಜು, ವಿಷ್ಣು ರಾಮನ್ ಹಾಗೂ ಪೂಜ್ಯ ಮೋಹನ್ ಅವರು ಎಸ್. ಜಾನಕಿಯವರು ಹಾಡಿದ ಹಲವು ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸುವ ಮೂಲಕ ಭಾವಪೂರ್ಣ ಗೀತ ನಮನ ಸಲ್ಲಿಸಿದರು. ನಂತರ ಜಿಲ್ಲೆಯ ವಿವಿಧ ಆರ್ಕೆಸ್ಟ್ರಾ ಕಲಾವಿದರು ಎಸ್. ಜಾನಕಿಯವರ ಅಮರ ಗೀತೆಗಳನ್ನು ಹಾಡಿ ನೆರೆದಿದ್ದ ಸಂಗೀತಾಭಿಮಾನಿಗಳನ್ನು ರಂಜಿಸಿದರು.

 

 

 

 

ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಆರ್ಕೆಸ್ಟ್ರಾ ಕಲಾವಿದರ ಸಂಘದ ಅಧ್ಯಕ್ಷ ಎಸ್. ಶಂಕರ್, ಅನಿಲ್, ಲಾಯರ್ ರಾಜು, ಧನು, ಸಂಗೀತ್ ಶ್ರೀನಿವಾಸ್, ರಾಘವೇಂದ್ರ, ರೇಣುಕಪ್ಪ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಕಾಮರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು, ಕಲಾವಿದರು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಸಂಗೀತಾಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *