ಗೌರಿ ಹಬ್ಬದಂದು 10 ಸಾವಿರ ಮಹಿಳೆಯರಿಗೆ ಬಾಗಿನ – ಕೆ.ಜಿ. ದೇವಪಟ್ಟಣದಲ್ಲಿ ವಿಶೇಷ ಘೋಷಣೆ

ಕೆ.ಜಿ. ದೇವಪಟ್ಟಣ: ಭೀಮನ ಅಮಾವಾಸ್ಯೆ ಪ್ರಯುಕ್ತ ಶೃಂಗೇರಿ ಶ್ರೀ ಶಾರದಾ ಪೀಠ ಪರಿಪಾಲಿತ ಕೆ.ಜಿ. ದೇವಪಟ್ಟಣದ ಶ್ರೀ ವಿದ್ಯಾಚೌಡೇಶ್ವರಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ವಿದ್ಯಾನಂದ ಸ್ವಾಮಿಗಳು, ಮುಂಬರುವ ಗೌರಿ ಹಬ್ಬದಂದು 10 ಸಾವಿರ ಮಹಿಳೆಯರಿಗೆ ಬಾಗಿನ ನೀಡುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಘೋಷಿಸಿದರು.

 

 

“ತವರು ಮನೆ ಇಲ್ಲ, ತಾಯಿ ಮನೆಯವರು ಹಬ್ಬಕ್ಕೆ ಕರೆಯುವುದಿಲ್ಲ ಎಂಬ ಕೊರಗಿನಲ್ಲಿ ಯಾವುದೇ ಮಹಿಳೆಯರು ಇರಬಾರದು. ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಸನ್ನಿಧಿಯೇ ನಿಮ್ಮ ತವರು ಮನೆ” ಎಂಬ ಭಾವನಾತ್ಮಕ ಸಂದೇಶವನ್ನು ನೀಡಿದ ಶ್ರೀಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಗೌರಿ ಹಬ್ಬದಂದು ದೇವಾಲಯಕ್ಕೆ ಆಗಮಿಸಿ ಅಮ್ಮನವರ ಆಶೀರ್ವಾದ ಪಡೆಯುವಂತೆ ಕರೆ ನೀಡಿದರು. ಭೀಮನ ಅಮಾವಾಸ್ಯೆಯ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಪುಷ್ಪಾಲಂಕಾರ, ಮಹಾಮಂಗಳಾರತಿ, ಚಂಡಿಕಾ ಹೋಮ, ಹೂ ಹೊಂಬಾಳೆ ಪೂಜೆ, ಮಡಿಲಕ್ಕಿ ಪೂಜೆ ಹಾಗೂ ಪ್ರಾಕಾರೋತ್ಸವ ಮಹೋತ್ಸವಗಳು ನೆರವೇರಿದವು.

 

 

ಬೆಳಗಿನ ಜಾವ 5 ಗಂಟೆಗೆ ಭಕ್ತರಿಗೆ ಅರಿಶಿನ ಸ್ನಾನ ಹಾಗೂ ಸಾಲಿಗ್ರಾಮ ತೀರ್ಥ ಸಂಪ್ರೋಕ್ಷಣೆಯ ಪುಣ್ಯ ಕಾರ್ಯಕ್ರಮ ನಡೆಯಿತು. ಭಕ್ತರ ಸುಖ-ಶಾಂತಿ, ಆರೋಗ್ಯ, ಕುಟುಂಬದ ಕ್ಷೇಮ ಹಾಗೂ ಲೋಕಕಲ್ಯಾಣಕ್ಕಾಗಿ ಚಂಡಿಕಾ ಹೋಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

 

 

ಉತ್ಸವ ಮೂರ್ತಿಗಳಾದ ಶ್ರೀ ಶನೇಶ್ವರ ಸ್ವಾಮಿ, ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರು ಹಾಗೂ ಶ್ರೀ ಚಿಕ್ಕ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಹಂಗರಹಳ್ಳಿ ಬಸವಣ್ಣನವರ ನೇತೃತ್ವದಲ್ಲಿ ಹೂ ಹೊಂಬಾಳೆ ಪೂಜೆ ನೆರವೇರಿತು. ನಂತರ ಭವ್ಯ ಪ್ರಾಕಾರೋತ್ಸವ ನಡೆಯಿತು. ಆಶೀರ್ವಚನದಲ್ಲಿ ಶ್ರೀ ವಿದ್ಯಾನಂದ ಸ್ವಾಮಿಗಳು ಸನಾತನ ಧರ್ಮವೇ ಭಾರತದ ಆತ್ಮ ಎಂದು ಪ್ರತಿಪಾದಿಸಿ, ಧರ್ಮ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದರು. ಗೋಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

 

 

 

 

ಕುಟುಂಬ ವ್ಯವಸ್ಥೆಯ ಮಹತ್ವವನ್ನು ವಿವರಿಸಿದ ಅವರು, ದಾಂಪತ್ಯ ಜೀವನದಲ್ಲಿ ಪತಿ-ಪತ್ನಿಯರು ಪರಸ್ಪರ ನಂಬಿಕೆ, ಪ್ರೀತಿ ಮತ್ತು ನಿಷ್ಠೆಯಿಂದ ನಡೆದುಕೊಂಡು ಕುಟುಂಬವನ್ನು ಕಾಪಾಡಬೇಕು ಎಂದು ಹೇಳಿದರು. ಭೀಮನ ಅಮಾವಾಸ್ಯೆಯ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ದರ್ಶನ ಪಡೆದು ಆಶೀರ್ವಾದ ಪಡೆದರು. ಗೌರಿ ಹಬ್ಬದಂದು 10 ಸಾವಿರ ಮಹಿಳೆಯರಿಗೆ ಬಾಗಿನ ನೀಡುವ ಘೋಷಣೆ ಇದೀಗ ಕೆ.ಜಿ. ದೇವಪಟ್ಟಣದ ಧಾರ್ಮಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆದಿದೆ.

Leave a Reply

Your email address will not be published. Required fields are marked *