ಗೌರಿ ಹಬ್ಬದ ಆಚರಣೆಯ ಕುರಿತು ಒಂದು ಪೌರಾಣಿಕ ಕಥೆ

ಒಂದು ವಿಶಾಲವಾದ ನಗರದಲ್ಲಿ ಓರ್ವ ಬಡ ಬ್ರಾಹ್ಮಣನಿದ್ದನು. ಭಾದ್ರಪದ ತಿಂಗಳು ಬಂದಾಗ ಮನೆ ಮನೆಯಲ್ಲಿ ಜನರು ಗೌರಿಯನ್ನು ತಂದರು. ಎಲ್ಲ ಬೀದಿಗಳಲ್ಲಿ ಹೆಂಗಸರು ಓಡಾಡುತ್ತಿದ್ದರು. ಗಂಟೆಯ ನಾದ ಕೇಳಿಸುತ್ತಿತ್ತು. ಇದನ್ನು ನೋಡಿದ ಬ್ರಾಹ್ಮಣನ ಮಕ್ಕಳು, ಮನೆಗೆ ಬಂದು ‘ಅಮ್ಮ, ಅಮ್ಮ, ನಮ್ಮ ಮನೆಗೆ ಗೌರಿಯನ್ನು ತಾ!’ ಎಂದು ತಾಯಿಗೆ ಹೇಳಿದರು. ಆಗ ತಾಯಿಯು ‘ಮಕ್ಕಳೇ, ಗೌರಿಯನ್ನು ತಂದು ನಾನೇನು ಮಾಡಲಿ, ಅವಳ ಪೂಜೆ ಮಾಡಬೇಕು, ಹೋಳಿಗೆ, ಪಾಯಸದ ನೈವೇದ್ಯ ಅರ್ಪಿಸಬೇಕು, ಆದರೆ ನಮ್ಮ ಮನೆಯಲ್ಲಿ ಏನೂ ಇಲ್ಲ. ನೀವು ಅಪ್ಪನಿಗ ಪೇಟೆಗೆ ಹೋಗಿ ಸಾಮಾನು ತರಲು ಹೇಳಿ. ಸಾಮಾನು ತಂದರೆ ಗೌರಿಯನ್ನು ತರುತ್ತೇನೆ!‘ ಎಂದು ಹೇಳಿದಳು. ಮಕ್ಕಳು ತಂದೆಯ ಬಳಿ ಬಂದು ತಂದೆಗೆ ‘ಅಪ್ಪ, ಅಪ್ಪ, ಪೇಟೆಗೆ ಹೋಗಿ ಹೋಳಿಗೆ ಪಾಯಸಕ್ಕೆ ಬೇಕಾದ ಸಾಮಾನು ತನ್ನಿರಿ ಏಕೆಂದರೆ ಅಮ್ಮ ಗೌರಿ ತರುತ್ತಾಳೆ‘ ಎಂದು ಹೇಳಿದರು.

ಬಡ ಬ್ರಾಹ್ಮಣನು ಮಕ್ಕಳ ಕೋರಿಕೆಯನ್ನು ಕೇಳಿದನು. ಅವನ ಮನಸ್ಸಿಗೆ ಬಹಳ ಬೇಸರವಾಯಿತು. ಬಂಗಾರಂತಹ ಮಕ್ಕಳ ಕೋರಿಕೆಯನ್ನು ಪೂರೈಸಲು ಆಗುತ್ತಿಲ್ಲ. ಬಡತನದ ಎದುರು ಉಪಾಯವಿಲ್ಲ. ಬೇಡಲು ಹೋದರೂ ಏನೂ ಸಿಗುವುದಿಲ್ಲ. ಅದಕ್ಕಿಂತ ಸಾಯುವುದೇ ಲೇಸು ಎಂದು ದೇವರನ್ನು ನೆನೆದು ಕೆರೆಯ ದಿಕ್ಕಿನಲ್ಲಿ ಹೋದನು. ಅರ್ಧ ದಾರಿಯನ್ನು ತಲುಪುವಾಗಲೇ ಸಂಜೆಯಾಯಿತು. ಅಲ್ಲಿಯೇ ಹತ್ತಿರದಲ್ಲಿ ಓರ್ವ ಸುಮಂಗಲೆಯಾದ ಮುದುಕಿಯ ಭೇಟಿಯಾಯಿತು. ಮುದುಕಿಯು ಇವನ ಗೋಳನ್ನು ಕೇಳಿ ನೀನು ಯಾರು ಎಂದು ಕೇಳಿದಳು. ಬ್ರಾಹ್ಮಣನು ಇದ್ದ ವಿಷಯವನ್ನು ಹೇಳಿದನು. ಮುದುಕಿಯು ಅವನಿಗೆ ಸಮಾಧಾನ ಮಾಡಿ ಬುದ್ಧಿವಾದ ಹೇಳಿದಳು. ಬ್ರಾಹ್ಮಣನು ಮುದುಕಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದನು. ಬ್ರಾಹ್ಮಣನ ಹೆಂಡತಿಯು ದೀಪವನ್ನು ಹಚ್ಚಿ ‘ಇವರು ಯಾರು’ ಎಂದು ಕೇಳಿದಳು ಆಗ ಬ್ರಾಹ್ಮಣನು ‘ಅಜ್ಜಿ’ ಎಂದು ಉತ್ತರಿಸಿದನು.

ಹೆಂಡತಿಯು ಮನೆಯ ಒಳಗೆ ಹೋಗಿ ಗಂಜಿ ಮಾಡಲು ನುಚ್ಚನ್ನು ನೋಡಿದಳು. ಅವಳಿಗೆ ನುಚ್ಚಿನ ಮಡಕೆಯು ತುಂಬಿರುವುದನ್ನು ನೋಡಿ ಬಹಳ ಆಶ್ಚರ್ಯವಾಯಿತು. ಅವಳು ಈ ವಿಷಯವನ್ನು ತನ್ನ ಗಂಡನಿಗೆ ಹೇಳಿದಳು. ಅವನಿಗೆ ಬಹಳ ಆನಂದವಾಯಿತು. ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡುವಷ್ಟು ಗಂಜಿಯನ್ನು ತಯಾರಿಸಿ, ಉಂಡು, ಆನಂದದಿಂದ ಮಲಗಿದರು. ಬೆಳಗಾದ ತಕ್ಷಣ ಮುದುಕಿಯು ಬ್ರಾಹ್ಮಣನನ್ನು ಕರೆದಳು. ‘ಮಗ, ನಿನ್ನ ಹೆಂಡತಿಯನ್ನು ನನಗೆ ಸ್ನಾನ ಮಾಡಿಸಲು ಹೇಳು‘ ಎಂದು ಹೇಳಿದಳು. ‘ದೇವರಿಗಾಗಿ ಹೋಳಿಗೆ ಪಾಯಸ ಮಾಡು, ಏನೂ ಇಲ್ಲ ಎಂದು ಹೇಳಬೇಡ, ಬೇಸರಪಡಬೇಡ’ ಎಂದಳು. ಬ್ರಾಹ್ಮಣನು ಹಾಗೆಯೇ ಎದ್ದು ಮನೆಯೊಳಗೆ ಹೋಗಿ ಹೆಂಡತಿಯನ್ನು ಕರೆದು ‘ಕೇಳಿಸಿಕೊಂಡೆಯಾ? ಅಜ್ಜಿಗೆ ಸ್ನಾನ ಮಾಡಿಸು‘ ಎಂದು ಹೇಳಿ ತಾನು ಭಿಕ್ಷೆ ಬೇಡಲು ಹೋದನು. ಬಹಳಷ್ಟು ಭಿಕ್ಷೆ ದೊರೆಯಿತು. ಬೇಕಾದಷ್ಟು ಬೆಲ್ಲ ಹಾಗೂ ಉಳಿದ ಸಾಮಾನುಗಳೂ ದೊರೆತವು. ಬ್ರಾಹ್ಮಣನಿಗೆ ಆನಂದವಾಯಿತು. ಹೆಂಡತಿ ಅಡುಗೆ ಮಾಡಿದಳು. ಮಕ್ಕಳೆಲ್ಲರೂ ಸೇರಿ ಹೊಟ್ಟೆ ತುಂಬಾ ಊಟಮಾಡಿದರು.

ಮುದುಕಿಯು ಬ್ರಾಹ್ಮಣನನ್ನು ಕರೆದು ಮರುದಿನದ ಅಡುಗೆಗೆ ಪಾಯಸ ಮಾಡಲು ಹೇಳಿದಳು. ಬ್ರಾಹ್ಮಣನು ‘ಅಜ್ಜಿ, ಹಾಲನ್ನು ಎಲ್ಲಿಂದ ತರಲಿ?‘ ಎಂದು ಕೇಳಿದನು. ಆಗ ಮುದುಕಿಯು ‘ನೀನು ಏನೂ ಚಿಂತೆ ಮಾಡಬೇಡ, ಈಗಲೇ ಎದ್ದು ನಿನಗೆ ಎಷ್ಟು ಎಮ್ಮೆ ಮತ್ತು ದನ ಬೇಕೊ ಅಷ್ಟು ಕಂಬವನ್ನು ನೆಟ್ಟು ಅವೆಲ್ಲದಕ್ಕೂ ಹಗ್ಗ ಕಟ್ಟಿಡು. ಸಾಯಂಕಾಲ ಗೋಧೂಳಿ ಮೂಹೂರ್ತದಲ್ಲಿ ದನ-ಎಮ್ಮೆಗಳಿಗೆ ಅವುಗಳ ಹೆಸರಿನಿಂದ ಕೂಗಿದರೆ ಅವು ಬರುವುವು ಮತ್ತು ನಿನ್ನ ಕೊಟ್ಟಿಗೆಯು ತುಂಬುವುದು. ಅವುಗಳ ಹಾಲನ್ನು ಕರೆ’ ಎಂದು ಹೇಳಿದಳು. ಬ್ರಾಹ್ಮಣನು ಅದೇ ರೀತಿ ಮಾಡಿದನು. ದನ-ಎಮ್ಮೆಯನ್ನು ಅವುಗಳ ಹೆಸರಿನಿಂದ ಕರೆದಾಗ ಅವು ತಮ್ಮ ಕರುಗಳೊಂದಿಗೆ ಓಡಿ ಬಂದವು. ಬ್ರಾಹ್ಮಣನ ಕೊಟ್ಟಿಗೆಯು ಎಮ್ಮೆ ದನಗಳಿಂದ ತುಂಬಿ ಹೋಯಿತು. ಬ್ರಾಹ್ಮಣನು ಅವುಗಳ ಹಾಲು ಕರೆದನು.

ಮರುದಿನ ಪಾಯಿಸ ಮಾಡಿದರು. ಮುದುಕಿಯು ಸಂಜೆಯಾದ ತಕ್ಷಣ ಬ್ರಾಹ್ಮಣನಿಗೆ ‘ಮಗ, ನನಗೆ ಈಗ ಕಳಿಸಿಕೊಡು’ ಎಂದು ಹೇಳಿದಳು. ಬ್ರಾಹ್ಮಣನು ‘ಅಜ್ಜಿ, ನಿಮ್ಮ ಕೃಪೆಯಿಂದ ನನಗೆ ಎಲ್ಲವೂ ದೊರೆಯಿತು ಈಗ ನಾನು ನಿಮ್ಮನ್ನು ಹೇಗೆ ಕಳಿಸಿಕೊಡಲಿ? ನೀವು ಹೋದರೆ ಎಲ್ಲವೂ ಇಲ್ಲದಂತಾಗುವುದು’ ಎಂದು ಹೇಳಿದನು. ಅಗ ಮುದುಕಿಯು ‘ನೀನೇನೂ ಹೆದರಬೇಡ ನನ್ನ ಆಶೀರ್ವಾದದಿಂದ ನಿನಗೆ ಏನೂ ಕಡಿಮೆಯಾಗುವುದಿಲ್ಲ. ಜ್ಯೇಷ್ಠ ಗೌರಿ ಎಂದರೆ ನಾನೇ! ಈಗ ನನ್ನನ್ನು ಕಳಿಸಿಕೊಡು‘ ಎಂದು ಹೇಳಿದಳು. ಬ್ರಾಹ್ಮಣನು ‘ನೀನು ಕೊಟ್ಟಿರುವುದು ಹೀಗೇ ವೃದ್ಧಿಯಾಗಲು ಎನಾದರೂ ಉಪಾಯ ಹೇಳು‘ ಎಂದು ಹೇಳಿದನು.

ಗೌರಿಯು, ‘ನೀನು ಬರುವಾಗ ಮರಳು ಕೊಡುತ್ತೇನೆ. ಅದನ್ನು ನೀನು ಮನೆಯಲ್ಲಿ, ಹಂಡೆಯ ಮೇಲೆ, ಕೊಟ್ಟಿಗೆಯಲ್ಲಿ ಬೀಸು. ಹೀಗೆ ಮಾಡಿದ ನಂತರ ನಿನಗೆ ಯಾವುದರ ಕೊರತೆಯೂ ಆಗುವುದಿಲ್ಲ‘ ಎಂದಳು. ಬ್ರಾಹ್ಮಣನು ಅದಕ್ಕೆ ಒಪ್ಪಿ ಅವಳ ಪೂಜೆ ಮಾಡಿದನು. ಗೌರಿಯು ಪ್ರಸನ್ನಳಾದಳು. ಅವಳು ತನ್ನ ವ್ರತವನ್ನು ಹೇಳಿದಳು. ‘ಭಾದ್ರಪದ ತಿಂಗಳಿನಲ್ಲಿ ಕೆರೆಯ ದಂಡೆಗೆ ಹೋಗಿ ಎರಡು ಕಲ್ಲುಗಳನ್ನು ಮನೆಗೆ ತಂದು ಅವುಗಳನ್ನು ಬಿಸಿನೀರಿನಿಂದ ತೊಳೆಯಬೇಕು. ಜ್ಯೇಷ್ಠ ಗೌರಿ ಮತ್ತು ಕನಿಷ್ಠ ಗೌರಿ ಎಂದು ಅವುಗಳನ್ನು ಸ್ಥಾಪಿಸಿ ಪೂಜೆ ಮಾಡಬೇಕು. ಎರಡನೆಯ ದಿನ ಹೋಳಿಗೆ ಮತ್ತು ಮೂರನೆ ದಿನ ಪಾಯಸದ ನೈವೇದ್ಯವನ್ನು ಅರ್ಪಿಸಬೇಕು. ಸುಮಂಗಲೆಯರ ಉಡಿ ತುಂಬಬೇಕು. ಊಟ ಹಾಕಿಸಬೇಕು. ಸಂಜೆ ಅರಿಶಿನಕುಂಕುಮ ಇಟ್ಟು ದೇವರನ್ನು ಆಹ್ವಾನಿಸಿದರೆ ಅವರಿಗೆ ಅಕ್ಷಯ ಸುಖ ಸಿಗುವುದು, ಸಂತತಿಯಾಗುವುದು.’

ಸಂಗ್ರಹ
ಶ್ರೀ. ವಿನೋದ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ (ಸಂಪರ್ಕ : 9342599299)

Leave a Reply

Your email address will not be published. Required fields are marked *

error: Content is protected !!