ಸರ್ವವಿಘ್ನ ನಿವಾರಕನೆಂದೇ ಪ್ರತೀತಿಯಾಗಿರುವ ಗಣೇಶ ಭಾರತೀಯರಿಗಷ್ಟೇ ಅಲ್ಲ, ವಿಶ್ವಾದ್ಯಂತ ಅತ್ಯಂತ ಜನಪ್ರಿಯ ದೇವರು. ಇದೇ ಸೆಪ್ಟೆಂಬರ್ ೧೦ ರಂದು ಎಲ್ಲೆಡೆ ಗಣೇಶ ಚತುರ್ಥಿಯ ಸಡಗರ. ಗಣೇಶನಿಗೆ ನೂರಾರು ಹೆಸರುಗಳು, ನೂರಾರು ಬಗೆಯ ಪೂಜೆಗಳು, ಪ್ರತಿವರ್ಷದ ಗಣೇಶ ಚತುರ್ಥಿ ಪ್ರತಿಯೊಬ್ಬರಿಗೂ ಪ್ರೇರಣಾದಾಯಕ. ಗಣಪತಿಯ ಕುರಿತು ಇಲ್ಲಿವೆ ಒಂದಿಷ್ಟು ಅಪೂರ್ವ ಮಾಹಿತಿಗಳು.
ಭಾದ್ರಪದ ಶುದ್ಧ ಚತುರ್ಥಿ ಹಿಂದೂಗಳಿಗೆ ಗಣಪತಿಯ ಹಬ್ಬದ ದಿನ. ವಿಘ್ನ ವಿನಾಶ ಹಾಗೂ ಸಿದ್ಧಿ ಬುದ್ಧಿಗಳ ಅಭೀಷ್ಟದಾಯಕ ಶಕ್ತಿಯ ಆದಿದೈವ ಶ್ರೀ ಗಣಪತಿ. ’ಕಲೌದುರ್ಗಿ ವಿನಾಯಕೌ’. ಕಲಿಯುಗದಲ್ಲಿ ಗಣಪತಿ ಹಾಗೂ ದುರ್ಗಿಯರು ಶೀಘ್ರ ವರವನ್ನು ನೀಡುವ ದೇವತೆಗಳು. ಈ ತಾಯಿ (ಗೌರೀ) ಮಗನನ್ನು ಆರಾಧಿಸಿದರೆ ಸಕಲ ಕಾರ್ಯ ಸಿದ್ಧಿ ಖಚಿತ.
ಯಾವ ಶುಭ ಕಾರ್ಯವೇ ಆಗಲಿ, ಅದು ಗಣೇಶನ ಪೂಜೆಯೊಂದಿಗೇ ಪ್ರಾರಂಭವಾಗುತ್ತದೆ. ಶ್ರೀ ಗಣೇಶನ ಪೂಜೆ ಮಾಡದೇ ಹೋದರೆ, ಬೇರೆ ಯಾವ ದೇವತೆಗಳ ಪೂಜೆಯೂ ಸಫಲವಾಗುವುದಿಲ್ಲ. ಶ್ರೀ ಗಣೇಶನು ಪ್ರಸನ್ನನಾಗದಿದ್ದರೆ ಬೇರೆ ಯಾವ ದೇವತೆಯೂ ಪ್ರಸನ್ನವಾಗುವುದಿಲ್ಲ. ಈ ರೀತಿ ಗಣೇಶನು ಧಾರ್ಮಿಕ ಕ್ಷೇತ್ರದಲ್ಲಿ ಅಸಂಖ್ಯ ದೇವಿ ದೇವತೆಗಳ ಮಧ್ಯದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾನೆ.
ಅತ್ಯಂತ ಪ್ರಾಚೀನವಾದ ವೇದಗಳಲ್ಲಿ ಗಣಪತಿಯ ಪ್ರಸ್ತಾವನೆಯು ಅನೇಕ ಕಡೆಗಳಲ್ಲಿ ಕಂಡುಬರುತ್ತದೆ. ಋಗ್ವೇದಲ್ಲಿ ಗಣಾನಾಂತ್ವಾ ಗಣಪತಿಂ ಹವಾಮಹೇ… ಎಂದು ಋಕ್ಕು ಇದ್ದು, ಇದು ಗಣಪತಿ ಪೂಜೆಯ ಮುಖ್ಯ ಮಂತ್ರವಾಗಿ ಇಂದಿಗೂ ಪುರಸ್ಕೃತವಾಗಿದೆ.
ವಿಶ್ವವಂದಿತ ವಿನಾಯಕ
ಯಜುರ್ವೇದದ ತೈತ್ತರೀಯ ಸಂಹಿತೆಯಲ್ಲಿ ’ನಮೋ ಗಣೇಭ್ಯೋ ಗಣಪತಿಭ್ಯಃ’ ಎಂಬ ಮಂತ್ರದಲ್ಲಿ ಅನೇಕ ಗಣಪತಿಗಳ ಉಲ್ಲೇಖವಿದೆ. ಅಥರ್ವಣ ವೇದದಲ್ಲಿ ಗಣಪತಿ ಹೆಸರುಳ್ಳ ಒಂದು ಪ್ರತ್ಯೇಕ ಉಪನಿಷತ್ತು ಇದೆ. ಇವಲ್ಲದೇ ಗಣೇಶ ಪೂರ್ವತಾಪಿನಿ, ಗಣೇಶ ಉತ್ತರಾಪಿನಿ, ವಲ್ಲಭೋಪನಿಷತ್ತು, ಹೇರಂಭೋಪನಿಷತ್ತು ಎಂಬ ಉಪನಿಷತ್ತುಗಳು ಲಭ್ಯವಿವೆ. ’ಗಣೇಶಗೀತಾ’ ಎಂಬ ೧೧ ಅಧ್ಯಾಯವುಳ್ಳ ಗೀತಾಗ್ರಂಥವೂ ಇದೆ. ಗಣೇಶ ಪುರಾಣ ಹಾಗೂ ಮುದ್ಗಲ ಪುರಾಣಗಳಂತೂ ಗಣಪತಿಯನ್ನು ಹಾಡಿ ಹೊಗಳಿವೆ.
ಅವತಾರ ಪುರುಷ
ಗಣೇಶ ಪುರಾಣದ ಪ್ರಕಾರ ತ್ರೇತಾಯುಗದಲ್ಲಿ ನವಿಲನ್ನು ವಾಹನವಾಗಿ ಹೊಂದಿ ಆರು ಕೈಗಳಲ್ಲಿ ಕಾಣಿಸಿಕೊಂಡಿದ್ದರೆ, ದ್ವಾಪರಯುಗದಲ್ಲಿ ನಾಲ್ಕು ಕೈ ಹೊಂದಿದ್ದು (ಆನೆ ವಾಹನ), ಕಲಿಯುಗದಲ್ಲಿ ಎರಡು ಕೈ ಹೊಂದಿದ್ದಾನೆ (ಕುದುರೆ ವಾಹನ). ಗಣಪನನ್ನು ಈ ಎಲ್ಲ ರೂಪಗಳಲ್ಲೂ ಪೂಜಿಸಬೇಕೆಂಬ ಪ್ರಸ್ತಾಪ ಗಣೇಶ ಪುರಾಣದಲ್ಲಿದೆ.
ಮುದ್ಗಲ ಪುರಾಣದಲ್ಲಿ ಗಣೇಶನು ’೩೨’ ರೂಪಗಳಲ್ಲಿ ವರ್ಣಿತನಾಗಿದ್ದಾನೆ. ’೩೨’ ಅನ್ನುತ್ತಿದ್ದಂತೆಯೇ ನಮಗೆ ಹಲ್ಲುಗಳ ವಿಷಯ ಜ್ಞಾಪಕಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ’ಏಕದಂತ’ ನೆಂಬ ಹೆಸರು ಜ್ಞಾಪಕಕ್ಕೆ ಬರುತ್ತದೆ. ದಂತಗಳ ವೈವಿಧ್ಯವನ್ನು ಖಂಡಿಸಿ, ಏಕದಂತನಾದ ಗಣಪತಿಯ ರೂಪಗಳನ್ನು ದಂತಗಳ ಸಂಖ್ಯೆಯ ಮೂಲಕವೇ ಸೂಚಿಸುತ್ತಿರುವುದು ಮಹರ್ಷಿಗಳ ಚಮತ್ಕಾರ.
ಗಣೇಶ ರಹಸ್ಯ
ಶ್ರೀ ಗಣೇಶ ತತ್ವದಂತೆ ಬೆನ್ನುಹುರಿಯ ತುದಿಯೇ ’ಮೂಲಾಧಾರ’. ’ಮೂಲಾಧಾರ ಕ್ಷೇತ್ರಸ್ಥಿತ’ ಎಂಬುದಾಗಿ ಗಣೇಶನ ವರ್ಣನೆಯಂತೆಯೇ ಈ ಕ್ಷೇತ್ರವೇ ಗಣೇಶನ ಸ್ಥಾನ. ಯೋಗಶಾಸ್ತ್ರದಲ್ಲಿ ತಿಳಿಸಿರುವಂತೆ ಈ ಮೂಲಾಧಾರ ಕ್ಷೇತ್ರದಿಂದ ಅಂದರೆ ಬೆನ್ನುಹುರಿಯಿಂದ ಕುಂಡಲಿನಿ ಶಕ್ತಿಯು ಜಾಗೃತವಾಗಿ ಮೇಲ್ಮುಖವಾಗಿ ಹರಿಯಲಾರಂಭಿಸುವುದು. ಇದಕ್ಕಾಗಿ ಮೊದಲು ಗಣೇಶನ ಉಪಾಸನೆ ಅರ್ಥಾತ್ ’ಶುದ್ಧಿಕ್ರಿಯೆ’ ಅವಶ್ಯ. ಆರಂಭದ ಮೊದಲ ’೬೦೦’ ಪ್ರಾಣಾಯಾಮಗಳೇ ಗಣೇಶನ ಪೂಜೆ. ಇದರಿಂದ ಶರೀರದ ಎಲ್ಲ ಭಾಗಗಳು ಶುದ್ಧವಾಗುತ್ತವೆ. ಹೀಗೆ ಗಣೇಶನ ಅನುಗ್ರಹ ದೊರೆತ ಬಳಿಕವೇ ’ಕುಂಡಲಿನಿ ಶಕ್ತಿ’ ಮೇಲೇರತೊಡಗುತ್ತದೆ. ಹೀಗಾಗಿಯೇ ಕುಂಡಲಿನಿ ನಿರ್ಭಿನ್ನ ವಿಘ್ನಯಂತ್ರ ಪ್ರಹರ್ಷಿತಾ ಎಂಬುದಾಗಿ ಸ್ತುತಿಸಲಾಗಿದೆ.
ಅಕ್ಕಿ ಹರಡಿದ ಹರಿವಾಣದಲ್ಲಿ ಮುದ್ದು ಮುದ್ದಾದ ಗಣೇಶನನ್ನು ತಂದು ಪೂಜಿಸಿ, ಬೆನಕ ಬೆನಕ ಏಕದಂತ ಪಚ್ಚೆಕಲ್ಲು ಪಾಣಿಪೀಠ ಮುತ್ತಿನುಂಡೆ ಹೊನ್ನಗಂಟೆ ಇಂತೊಪ್ಪುವ ಶ್ರೀ ಸಿದ್ಧಿ ವಿನಾಯಕ ದೇವರ ಪಾದಾರವಿಂದಕ್ಕೆ ನಮೋ ನಮಃ ಎಂದು ಪ್ರಾರ್ಥಿಸುತ್ತಾ ಲಂಬೋದರನಿಗೆ ಪ್ರಿಯವಾದ ಕಬ್ಬು, ಕಡಲೆ, ಕಡುಬು, ಚಕ್ಕುಲಿ, ಉಂಡೆಗಳನ್ನು ನಿವೇದಿಸಿ, ಕೊನೆಗೆ ಕೆರೆಯಲ್ಲೋ, ಬಾವಿಯಲ್ಲೋ ವಿಸರ್ಜಿಸುವ ವೇಳೆಗೆ ಬಹುಮಂದಿ ಯಾವುದೋ ಅಮೂಲ್ಯ ವಸ್ತುವನ್ನು ಕಳೆದುಕೊಂಡಂತೆ ಪೇಚಾಡುತ್ತಾರೆ. ಇಂತು ಗಣಪ ನಮ್ಮ ಬದುಕಿನ ಅವಿಭಾಜ್ಯ ಅಂಗ.
ಗಣಪತಿ ಉಪಾಸನೆ ಏಕೆ? ಹೇಗೆ?
ಗಣಪತಿಯ ಹುಟ್ಟಿನ ಬಗೆಗಿರುವ ಕಥೆಯೇ ಕುತೂಹಲಕರ. ಇದರೊಂದಿಗೆ ಆತನ (ಗಣಪತಿಯ) ಉಪಾಸನೆಗೆ ಸಂಬಂಧಿಸಿದ ಬಗ್ಗೆ ಇರುವ ನಂಬಿಕೆಗಳು, ಐತಿಹ್ಯಗಳು ಕೂಡ ಗಮನಸೆಳೆಯುವಂಥದ್ದು.
’21’ ರ ಮಹತ್ವ
ಇಪ್ಪತ್ತೊಂದು (21) ಗಣಪನಿಗೆ ಪ್ರಿಯವಾದ ಸಂಖ್ಯೆ. ಈ ’21’ ಕ್ಕೂ ಗಣಪತಿಗೂ ಏನು ಸಂಬಂಧ? ಇದು ಸಂಖ್ಯಾಶಾಸ್ತ್ರಕ್ಕೆ ಸಂಬಂಧಪಟ್ಟ ಮಾತು. ತತ್ವಗಳನ್ನು ನಾನಾಬಗೆಯಿಂದ ಪ್ರಾಚೀನರು ವಿಭಾಗಿಸಿದ್ದುಂಟು. ಒಂದು ವಿಭಾಗದಂತೆ ಪ್ರಪಂಚವನ್ನು ತುಂಬಿರುವ ತತ್ವಗಳು ’೨೫’. ಅವೆಂದರೆ : ಚೇತನ, ಚಿತ್ತ, ಅಹಂಕಾರ, ಬುದ್ಧಿ, ಮನಸ್ಸು, ಶ್ರೋತೃ, ಚಕ್ಷು, ತ್ವಕ್, ರಸ, ಪ್ರಾಣ, ವಾಕ್, ಪ್ರಾಣಿ, ಪಾದ, ಪಾಯು, ಉಪಸ್ಥ, ಶಬ್ಧ, ಸ್ಪರ್ಶ, ರೂಪ, ರಸ, ಗಂಧ, ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ.
ಇವುಗಳಲ್ಲಿ ಮೊದಲನೆಯದು ಅಂತಃಕರಣ ಪಂಚಕ, ಎರಡನೆಯದು ಜ್ಞಾನೇಂದ್ರಿಯ ಪಂಚಕ, ಮೂರನೆಯದು ಕರ್ಮಮಯ ಪಂಚಕ, ನಾಲ್ಕನೆಯದು ತನ್ಮಾತ್ರ ಪಂಚಕ, ಐದನೆಯದು ಭೂತಪಂಚಕ, ಹೀಗೆ ಪಂಚ ಪಂಚಕಗಳಿಂದ ಈ ಪ್ರಪಂಚ ನಿರ್ಮಾಣವಾಗಿದೆ. ಇದರಲ್ಲಿ ೨೧ ನೇ ತತ್ವವೇ ಆಕಾಶ. ಇದರ ಅಭಿಮಾನಿ ದೇವತೆ ಗಣಪತಿ. ಆದ್ದರಿಂದಲೇ ’21’ ಬಗೆಯ ಭಕ್ಷ್ಯ-ಭೋಜನ, ಫಲ-ಪತ್ರ, ಪುಷ್ಪಪ್ರಿಯವಾದ್ದು.
ಚತುರ್ಥಿ ಪ್ರಶಸ್ತ :
ಗಣೇಶನು ಭಾದ್ರಪದ ಶುದ್ಧ ಚತುರ್ಥಿಯ ಮಧ್ಯಾಹ್ನ ಕಾಲ, ಸ್ವಾತಿ ನಕ್ಷತ್ರ, ಸಿಂಹ ಲಗ್ನದಲ್ಲಿ ಜನಿಸಿದ್ದರಿಂದ, ಅವನ ಪೂಜೆ, ಉಪಾಸನೆಗಳಿಗೆ ಅತಿ ಮಹತ್ವವಿದೆ. ಇದಕ್ಕೊಂದು ಹಿನ್ನೆಲೆಯಿದೆ.
ಒಮ್ಮೆ ಲೋಕ ಪಿತಾಮಹ ಬ್ರಹ್ಮನು ಗಣಪತಿಯ ಧ್ಯಾನ ಮಾಡಿ, ಸೃಷ್ಟಿ ಕಾರ್ಯ ಆರಂಭಿಸಿದನು. ಗಣಪತಿಯ ಧ್ಯಾನದ ಸಮಯದಲ್ಲಿ ಅವನ ಶರೀರದಿಂದ ಪರಾ ಪ್ರಕೃತಿಯೇ ಮಹಾಮಾಯ ತಿಥಿಗಳ ತಾಯಿ ಕಾಮರೂಪಿಣಿ ದೇವಿಯು ಪ್ರಕಟವಾದಳು. ಈ ದೇವಿಯು ಬ್ರಹ್ಮನಿಗೆ ವಂದಿಸಿ, ಆಜ್ಞೆಯನ್ನು ಕೇಳಿದಾಗ, ’ವಕ್ರತುಂಡಾಯ ಹುಂ’ ಎಂಬ ಷಡಕ್ಷರ ಮಂತ್ರವನ್ನು ಉಪದೇಶಿಸಿದನು. ಷಡಕ್ಷರ ಮಂತ್ರವನ್ನು ನಿರಾಹಾರ ತಪದಿಂದ ಸ್ತುತಿಗೈದು, ಗಣಪತಿಯಿಂದ ಅನುಗ್ರಹ ಪಡೆದುಕೊಂಡಳು. ಗಣಪತಿಯ ಅನುಗ್ರಹದಿಂದ ಸೃಷ್ಟಿ ರಚನೆ ಮಾಡಿ, ಸಮಸ್ತ ತಿಥಿಗಳಿಗೆ ತಾಯಿ ಎನಿಸಿದಳು. ಈ ದೇವಿಯ ಎಡಭಾಗವು ಕಪ್ಪಾಗಿಯೂ, ಬಲಭಾಗವು ಬಿಳುಪಾಗಿಯೂ ಇದ್ದಿತು. ಅವಳ ಅಂಗಾಂಗದ ಕಲೆಗಳಿಂದ ಚಂದ್ರನ ಕಲೆಗಳು ಹುಟ್ಟಿದವು. ಆಕೆಯನ್ನು ಶುದ್ಧ ಚತುರ್ಥಿಯಂದು ಹಗಲು, ಕೃಷ್ಣ ಚತುರ್ಥಿಯಂದು ರಾತ್ರಿ ಪೂಜಿಸಿದವರ ಸೂಚಿತ ಪಾಪಗಳು ನಾಶವಾಗಿ, ಸಮಸ್ತ ಕಾಮನೆಗಳ ಸಿದ್ಧಿಯು ಲಭಿಸುತ್ತದೆ ಎಂದು ಗಣಪತಿಯು ವರವನ್ನು ನೀಡಿದನು ಎಂದು ಮುದ್ಗಲ ಪುರಾಣದಲ್ಲಿ ಹೇಳಲಾಗಿದೆ. ಚತುರ್ಥಿ ಮಂಗಳವಾರ ಬಂದರೆ, ಅಂಗಾರಕ ಯೋಗ ಎನ್ನುವರು. ಅಂದು ವಿಘ್ನೇಶನನ್ನು ಪೂಜಿಸುವವರಿಗೆ ಅಪವಾದವೆಲ್ಲಾ ನಾಶವಾಗಿ, ಸಕಲ ಸಂಕಷ್ಟ ಪರಿಹಾರವಾಗಿ, ಕುಜ-ಕೇತು ಗ್ರಹಗಳ ಕೆಟ್ಟ ಪ್ರಭಾವ ದೂರವಾಗುತ್ತದೆ ಎಂದು ಪ್ರತೀತಿ.
ವಿಸರ್ಜನೆಯ ಕಥೆ
ಗಣೇಶನ ಮೂರ್ತಿಯನ್ನು ಅಂಗಡಿಯಿಂದ ಮನೆಗೆ ಇಲ್ಲವೆ ಸಾರ್ವಜನಿಕ ಪೂಜಾಸ್ಥಳಕ್ಕೆ ತರುವಾಗಲೇ ಅದಕ್ಕೊಂದು ಉತ್ಸವ ರೂಪ ಬರುತ್ತದೆ. ಈ ಉತ್ಸವದ ಶೋಭೆ ಗರಿಷ್ಠ ಮಟ್ಟಕ್ಕೇರುವುದು ಅನಂತ ಚತುರ್ದಶಿಯ ಶುಭ ಪರ್ವದಂದು. ಗಣೇಶನ ಉತ್ತುಂಗ ಮಹಿಮೆಗಳನ್ನು ಗಗನಭೇದಿಯಾಗಿ ಹೊರಹೊಮ್ಮಿಸುವಂತಹ ಕಟ್ಟಕಡೆಯ ಈ ಕಾರ್ಯಕ್ರಮದಲ್ಲಿ ಚತುರ್ಥಿಯ ದಿನದಿಂದಲೂ ಶ್ರದ್ಧಾಭಕ್ತಿಯಿಂದ ತಾವು ಪೂಜಿಸಿದ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುವುದರ ಒಳಾರ್ಥವೇನು? ಮೂರ್ತಿ ಪೂಜೆಯ ಸಾರಸರ್ವಸ್ವ ಅಡಗಿರುವುದೇ ಇಲ್ಲಿ. ಈ ಕಟ್ಟಕಡೆಯ ಕ್ರಿಯೆಯಲ್ಲಿ, ಕಲ್ಲು, ಮಣ್ಣು, ಲೋಹಗಳನ್ನು ಹಿಂದೂಗಳು ದೇವರೆಂದು ಪೂಜಿಸುವರು ಎನ್ನುವ ಭ್ರಾಮಕ ಕಲ್ಪನೆಗಳನ್ನು ಅದು ಒಂದೇ ಏಟಿಗೆ ನುಚ್ಚುನೂರು ಮಾಡುತ್ತದೆ. ಮೂರ್ತಿಯ ಮೂಲಕ ಇಡೀ ಸೃಷ್ಟಿಯಲ್ಲಿನ ಮಹಾಚೇತನವನ್ನು ಭಕ್ತ ತನ್ನಲ್ಲಿ ಆವಾಹಿಸಿಕೊಳ್ಳುತ್ತಾನೆ. ಪೂಜೆಯಲ್ಲಿನ ಒಂದೊಂದು ಮಂತ್ರ ಒಂದೊಂದು ತಂತ್ರದ ಈ ನಿಜವಾದ ಒಳಾರ್ಥವನ್ನು ಅದು ಪ್ರತಿಬಿಂಬಿಸುತ್ತದೆ. ಮಹಾರಾಷ್ಟ್ರದಲ್ಲಿ ಗಣಪತಿ ವಿಸರ್ಜನಾ ಸಮಯದಲ್ಲಿ ’ಗಣಪತಿ ಬಾಪ್ಪಾ ಮೋರೆಯಾ, ಪುಡಚಾವರ್ಷಿ ಲೌಕರ್ ಯಾ’ ಪ್ರಿಯ ಗಣಪತಿ, ಮುಂದಿನ ವರ್ಷ ಬೇಗ ಬಾ.
ಕರ್ನಾಟಕದ ಮಕ್ಕಳ ಬಾಯಲ್ಲಿ ನಲಿಯುವ ರಾಗವೆಂದರೆ ’ಗಣೇಶ ಬಂದ, ಕಾಯಿಕಡುಬು ತಿಂದ, ಚಿಕ್ಕೆರೇಲಿ ಬಿದ್ದ, ದೊಡ್ಕೆರೇಲಿ ಎದ್ದ!’ ಒಂದು ಕೆರೇಲಿ ಬಿದ್ದು, ಮತ್ತೊಂದು ಕೆರೇಲಿ ಏಳುವವ ಎಂದರೆ, ಇನ್ನೊಂದು ಕೆರೆಯ ಮಣ್ಣಿನಲ್ಲಿ ರೂಪುಗೊಳ್ಳುವವನು ಎಂದರೆ ಹೊರಗಿನ ರೂಪ ಬದಲಾಗುತ್ತದೆ – ಕಾಲ ಬದಲಾಗುತ್ತದೆ, ಆದರೆ ಒಳಗಿನ ಆತ್ಮತತ್ವ ಮಾತ್ರ ಶಾಶ್ವತ. ಮಾನವನ ಜೀವನಕ್ಕೂ ಅನ್ವಯಿಸುವುದು ಇದೇ ತತ್ವವೇ. ಕಾಲ ಉರುಳಿದಂತೆ ಮನುಷ್ಯನ ಹೊರ ರೂಪ ಬದಲಾಗುತ್ತದೆ. ಹಳೆಯ ಶರೀರ ಬೂದಿಯಾಗುತ್ತದೆ. ಮಣ್ಣಾಗುತ್ತದೆ. ಆದರೆ ಒಳಗಿನ ಅವನ ಚೇತನ ಜೀವಾತ್ಮ ಮಾತ್ರ ಮುಂದುವರೆಯುತ್ತದೆ.
ಬೇ.ನ.ಶ್ರೀನಿವಾಸಮೂರ್ತಿ,
ತುಮಕೂರು