ತುಮಕೂರು ಜಿಲ್ಲೆಯ ಹಿರಿಯ ಕಾಂಗ್ರೆಸ್ ಕಟ್ಟಾಳು, ಅತ್ಯಂತ ಪ್ರಭಾವಿ ರಾಜಕಾರಣಿ, ಸಹಕಾರಿ ಧುರೀಣ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು, ಕಳೆದ ನಾಲ್ಕೈದು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಅಮೋಘ ಸಾಧನೆಯನ್ನು ಮಾಡಿಕೊಂಡು ಬರುತ್ತಿರುವ, ಹಾಲಿ ಸಹಕಾರ ಸಚಿವರು, ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಅಧ್ಯಕ್ಷರು, ಮಧುಗಿರಿ ಶಾಸಕರಾಗಿರುವ ಕೆ.ಎನ್.ರಾಜಣ್ಣ ತಮ್ಮ ಮೇಲೆ ಹನಿಟ್ರಾಪ್ ನಡೆದಿದೆಂದು ಇಂದು ವಿಧಾನಸಭೆಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ.
ಪ್ರಕರಣದ ಕುರಿತು ಕಳೆದ ನಾಲ್ಕೈದು ದಿನಗಳಿಂದ ಪ್ರಭಾವಿ ಮಂತ್ರಿಯೊಬ್ಬರ ಮೇಲೆ ಹನಿಟ್ರ್ಯಾಪ್ ಷಡ್ಯಂತ್ರ ನಡೆದಿದೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಚಾರ ಇಂದು ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿದೆ. ವಿಧಾನಸಭೆಯಲ್ಲಿ ಶಾಸಕ ಯತ್ನಾಳ್, ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ನೇರವಾಗಿ ಹೇಳಿದರು.
ಈ ವೇಳೆ ಸ್ಪಷ್ಟೀಕರಣ ನೀಡಲು ಮುಂದಾದ ಕೆ.ಎನ್.ರಾಜಣ್ಣ, ಯತ್ನಾಳ್ ನನ್ನ ಹೆಸರು ಪ್ರಸ್ತಾಪಿಸಿದ್ದಕ್ಕೆ ಸ್ಪಷ್ಟನೆ ನೀಡುತ್ತಿದ್ದೇನೆ. ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿತ್ತು. ಕಳೆದ 6 ತಿಂಗಳಿಂದ ನನ್ನನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಲು ಯತ್ನವನ್ನು ಸಹ ಮಾಡಿದ್ದಾರೆ ಎಂದು ಸ್ಪಷ್ಠನೆ ನೀಡುವ ಮೂಲಕ ತಾವು ಸಹ ಹನಿಟ್ರಾಪ್ ಗೆ ಸಿಲುಕಿದ್ದೇನೆ ಎಂಬ ಮಾರ್ಮಿಕ ಉತ್ತರವನ್ನು ಇಂದು ನೀಡಿದ್ದಾರೆ.
ಇದರ ಹಿಂದೆ ಯಾರಿದ್ದಾರೆ. ಏನು ಎಂಬುದು ತನಿಖೆಯಾಗಬೇಕು. ಹನಿಟ್ರ್ಯಾಪ್ ಜಾಲದ ಬಗ್ಗೆ ತನಿಖೆಯಾಗಲಿ ನಾನು ಈ ಬಗ್ಗೆ ಲಿಖಿತ ದೂರು ನೀಡುತ್ತೇನೆ ಎಂದು ಸಹ ಹೇಳಿರುವುದು ಪ್ರಕರಣಕ್ಕೆ ಮತ್ತಷ್ಟು ಬಲ ತುಂಬಿದೆ ಎಂದು ಹೇಳಲಾಗಿದೆ.