ಗುಬ್ಬಿ: ಸರ್ಕಾರ ಬಡವರಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದು ಇದರಲ್ಲಿ ಅನ್ನಭಾಗ್ಯ ಮುಖ್ಯವಾಗಿದೆ ಹಲವು ಕಡೆಗಳಲ್ಲಿ ಪಡಿತರ ವಿತರಣೆಯಲ್ಲಿ ಲೋಪ ದೋಷಗಳು ಕಂಡುಬರುತ್ತಿದ್ದು ಅನ್ನ ಭಾಗ್ಯ ಯೋಜನೆ ಅಡಿ ವಿತರಣೆ ಮಾಡುತ್ತಿರುವ ಅಕ್ಕಿಗೆ ಕನ್ನ ಹಾಕಿ ತೂಕದಲ್ಲಿ ಮೋಸ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹೊದಲೂರು ಗ್ರಾಮದ ನ್ಯಾಯಬೆಲೆ ಸೊಸೈಟಿಯಲ್ಲಿ ತೂಕ ಮಾಡುವುದರಲ್ಲಿ ಪ್ರತಿ ತಿಂಗಳು ಹೆಚ್ಚು ಕಡಿಮೆ ಮಾಡುತ್ತಿದ್ದು ಈ ತಿಂಗಳು ಕಿಟ್ಟದಕುಪ್ಪೆ ಗ್ರಾಮದವರಿಗೆ ಅಕ್ಕಿ ವಿತರಣೆ ಮಾಡಿದ್ದಾರೆ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಅನುಮಾನ ಬಂದು ತೂಕವನ್ನು ಪರೀಕ್ಷಿಸಿದಾಗ 5 ಕೆ.ಜಿ, 20 ಕೆ.ಜಿ, 15 ಕೆ.ಜಿ, 18 ಕೆಜಿ ತೂಕ ಕಮ್ಮಿ ಬಂದಿದ್ದು ಈ ಬಗ್ಗೆ ಊರಿನ ಎಲ್ಲಾ ಗ್ರಾಮಸ್ಥರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಪಡಿತರ ವಿತರಣೆ ವ್ಯತ್ಯಾಸ ಕುರಿತು ನಾವು ಕೇಳಲು ಹೋದಾಗ ಸೊಸೈಟಿಯಲ್ಲಿ ರೇಷನ್ ಕೊಡುತ್ತಿದ್ದ ವ್ಯಕ್ತಿ ನಾಪತ್ತೆಯಾಗಿರುವುದು ಕಂಡುಬಂತು. ಗ್ರಾ.ಪಂ.ಸದಸ್ಯ ರವೀಶ್ ಮಾತನಾಡಿ ಹೊದಲೂರು ಪಡಿತರ ಡಿಪೋದಲ್ಲಿ ಈ ಹಿಂದಿನಿಂದಲೂ ತೂಕದಲ್ಲಿ ವ್ಯತ್ಯಾಸ ಕಂಡು ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ನಮಗೂ 20 ಕೆ.ಜಿ. ಕಡಿಮೆ ಅಕ್ಕಿ ನೀಡಿದ್ದಾರೆ ಬೇಲಿನೆ ಎದ್ದು ಹೊಲ ಮೇಯ್ದ ಹಾಗಿದೆ ಈ ಕೂಡಲೇ ತಾಲ್ಲೂಕು ಆಹಾರ ನೀರಿಕ್ಷಕರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಬೇಕು ಜಿಲ್ಲಾಧಿಕಾರಿಗಳು ಇಂತಹವರ ವಿರುದ್ದ ಸೂಕ್ತಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಿಟ್ಟದಕುಪ್ಪೆಯ ಮುಸ್ಲಿಂ ಸಮುದಾಯದ ಮಹಿಳೆಯೊಬ್ಬರು ಮಾತನಾಡುತ್ತಾ ಅಕ್ಕಿ ತೂಕ ಮಾಡುವ ಸ್ಕೇಲ್ ಅಥವಾ (ತಕ್ಕಡಿ)ಯನ್ನು ಗ್ರಾಹಕರಿಗೆ ತೋರಿಸದೆ ಮುಚ್ಚಿಕೊಳ್ಳುತ್ತಾರೆ.
ಪ್ರತಿ ತಿಂಗಳು ಇದೇ ತರಹದ ಸಮಸ್ಯೆ ಕಂಡುಬರುತ್ತಿದ್ದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು.
ಗ್ರಾಹಕರು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ತೂಕ ಮಾಡಿದಾಗ ಎಂಟು ಸದಸ್ಯರಿಗೆ 120 ಕೆ.ಜಿ. ಅಕ್ಕಿ ಕೊಡಬೇಕಿತ್ತು ಅದರಲ್ಲಿ 20 ಕೆ.ಜಿ. ಕಡಿಮೆ ನಿಡಿದ್ದಾರೆ ಎಂದು ಅಳಲು ತೊಡಗಿಕೊಂಡರು.
ನೂರಾರು ಜನ ನ್ಯಾಯಬೆಲೆ ಅಂಗಡಿ ಬಳಿ ಸೇರಿ ಕೆಲವು ಗಂಟೆಗಳು ಗ್ರಾಹಕರಿಗೂ ಮತ್ತು ಇತರರಿಗೂ ವಾಗ್ವಾದ ನಡೆಯಿತು.
(ವರದಿ:-ಸಂತೋಷ್ ಗುಬ್ಬಿ)