ತುಮಕೂರು : ನಗರದ ಅಮಾಯಕ ಯುವತಿ ರಭಿಯಾ ಸಭಾ ಎಂಬಾಕೆ ತನಗೆ ತುಮಕೂರಿನ ಹಿರಿಯ ಮತ್ತು ಉನ್ನತ ಪೊಲೀಸ್ ಅಧಿಕಾರಿಯೊಬ್ಬರಿಂದ ದೈಹಿಕ ಕಿರುಕುಳ ಸೇರಿದಂತೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಹೇಳಿಕೊಂಡು ಮೊಕ್ಕದ್ದಮೆಯನ್ನು ದಾಖಲಿಸಿರುವ ಪ್ರಸಂಗ ಇದೀಗ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಸೇರಿದಂತೆ ರಾಜ್ಯ ಮಹಿಳಾ ಆಯೋಗ, ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೊಂದ ಯುವತಿಯು ದೂರನ್ನು ಸಲ್ಲಿಸಿದ್ದು, ಸಂಬಂಧಪಟ್ಟ ಪ್ರಾಧಿಕಾರದವರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆಯನ್ನು ನೀಡಿದ್ದಾರೆಂದು ಹೇಳಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ನೊಂದ ಯುವತಿ ರಬಿಯಾ ಸಭಾ ಹೇಳಿಕೊಂಡಂತೆ ತನ್ನನ್ನು 20-05-2023ರಂದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕೊಲೆ ಪ್ರಕರಣವೊಂದರ ವಿಚಾರಣೆಗಾಗಿ ಕರೆದೊಯ್ದು ವಿಚಾರಣೆಗೆ ಕರೆದೊಯ್ದು ನಂತರ ಮನೆಗೆ ಕಳುಹಿಸಿ ಮರುದಿನ ಮತ್ತೊಮ್ಮೆ ತುಮಕೂರು ವೃತ್ತ ನಿರೀಕ್ಷಕರ ಠಾಣೆ ಸೇರಿದಂತೆ ವಿವಿಧ ಔಟ್ ಪೋಸ್ಟ್ ಪೊಲೀಸ್ ಠಾಣೆಗಳಲ್ಲಿ ಸತತ ಒಂಭತ್ತು ದಿನ ಕಸ್ಟಡಿಯಲ್ಲಿರಿಸಿಕೊಂಡು ವೃಥಾ ವಿಚಾರಣೆಯನ್ನು ನಡೆಯಿಸಿರುತ್ತಾರೆ, ಈ ಮಧ್ಯೆ ಡಿ.ವೈ.ಎಸ್.ಪಿ. ಶ್ರೀನಿವಾಸ್‌ರವರು ಇತರೆ ಪೊಲೀಸರನ್ನು ಆಚೆ ಕಳುಹಿಸಿ ತನಗೆ ಸಹಕರಿಸುವಂತೆ ಹೇಳಿದ್ದಲ್ಲದೇ, ಲೈಂಗಿಕ ಕಿರುಕುಳವನ್ನು ನೀಡಿದ್ದಲ್ಲದೇ ತನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಲು ಮುಂದಾಗಿರುತ್ತಾರೆ. ಅಲ್ಲದೇ ತಾನು ಹೇಳಿದ ವ್ಯಕ್ತಿಯೊಬ್ಬರಾದ ಲಕ್ಷ್ಮೀಕಾಂತ್ (ಚಂದು) ಎಂಬುವವರ ಮೇಲೆ ಸುಳ್ಳು ರೇಪ್ ಕೇಸ್ ದಾಖಲಿಸಬೇಕು ಅದಕ್ಕೆ ನೀನು ಸಹಕರಿಸಿದರೆ ಮಾತ್ರ ನಿನ್ನನ್ನು ಕೊಲೆ ಕೇಸಿನಿಂದ ಪಾರು ಮಾಡುವುದಾಗಿ ಹೇಳಿರುತ್ತಾರೆ ಸೇರಿದಂತೆ ಹತ್ತು ಹಲವಾರು ಅಂಶಗಳ ಆರೋಪಗಳನ್ನು ಮಾಡಿರುವ ವಿವರವಾದ ದೂರನ್ನು ದಾಖಲು ಮಾಡಿರುತ್ತಾರೆ.
ಇನ್ನು ಈ ಪ್ರಕರಣವು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯ ಮೇಲಿರುವುದರ ಪ್ರಯುಕ್ತ ಮಹಿಳಾ ಪೊಲೀಸ್ ಠಾಣೆ ಸೇರಿದಂತೆ, ವಿವಿಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರನ್ನು ಸಲ್ಲಿಸಲು ಭಯಬೀತರಾಗಿರುವ ಯುವತಿ ಕಾನೂನಿನ ಮೊರೆ ಹೋಗಿದ್ದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೂ ಸಹ ದೂರು ಸಲ್ಲಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಪೊಲೀಸ್ ಅಧಿಕಾರಿಗಳು ಈ ರೀತಿಯಾಗಿ ವರ್ತಿಸುತ್ತಿದ್ದಾರಾ ಎಂಬ ಗುಸು ಗುಸು ಮಾತು ಸಾರ್ವಜನಿಕರ ಬಾಯಲ್ಲಿ ಹರಿದಾಡುತ್ತಿದೆ.