ತುಮಕೂರು : ನಗರದ ಪ್ರತಿಷ್ಠಿತ ಬಡಾವಣೆಯಾದ ಗಾಂಧಿನಗರದಲ್ಲಿರುವ ಅತೀ ಪುರಾತನ ಹಾಗೂ ವಿಶೇಷ ಇತಿಹಾಸ ಹೊಂದಿರುವ, ಅಸಂಖ್ಯಾತ ವಿದ್ಯಾರ್ಥಿಗಳಿಗೆ ಜ್ಞಾನ ದೇಗುಲವಾಗಿದ್ದ, ಸಮಾಜದಲ್ಲಿ ಉನ್ನತಮಟ್ಟದ ಸ್ಥಾನಗಳಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ, ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವ ವ್ಯಕ್ತಿಗಳು ವ್ಯಾಸಂಗ ಮಾಡಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯು ಅವನತಿಯ ಅಂಚಿಗೆ ತಲುಪಿದೆ.
ಈ ಶಾಲೆಯು ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದು, 1956ರಲ್ಲಿ ಭಾರತ ಸರ್ಕಾರ ತನ್ನ ಸುಪರ್ದಿಗೆ ಪಡೆದು ತುಮಕೂರಿನ ಆಗಿನ ಕಾಲದ ಪುರಸಭೆಯ ಆಡಳಿತಕ್ಕೆ ನೀಡಲಾಗಿತ್ತು, ಜೊತೆಗೆ ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಪ್ರಸ್ತುತ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಗಾಂಧಿನಗರದ ಈ ಸರ್ಕಾರಿ ಶಾಲೆಯು ಸುತ್ತಮುತ್ತಲಿರುವ ಬಡಾವಣೆಗಳಲ್ಲಿರುವ ಬಡವರ ಮಕ್ಕಳ ಪಾಲಿಗೆ ಜ್ಞಾನ ದೇಗುಲವಾಗಿತ್ತು. ಇದು 1956 ರಿಂದ 2005-06ನೇ ಸಾಲಿನವರೆವಿಗೂ ಪ್ರತೀ ವರ್ಷ ಸುಮಾರು 400 ರಿಂದ 500 ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜ್ಞಾನ ದೇಗುಲವಾಗಿತ್ತು. ಆದರೆ ಈ ಶಾಲೆಯು ಇತ್ತೀಚೆಗೆ ಕೇವಲ 26 ಮಕ್ಕಳ ಸಂಖ್ಯೆಗೆ ಇಳಿದಿರುವುದು ವಿಷಾಧನೀಯ ಸಂಗತಿಯಾಗಿದೆ.
ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಇತಿಹಾಸ ಪ್ರಸಿದ್ಧ ಶಾಲೆಯು ಇಂದು ಅವನತಿಯ ಅಂಚಿಗೆ ಬಂದಿರುವುದು ಶೋಚನೀಯ ಸಂಗತಿಯಾಗಿದೆಯಲ್ಲದೇ, ಶಾಲೆಯ ಕೂಗಳತೆ ದೂರದಲ್ಲಿಯೇ ನಗರ ಶಾಸಕರು ಮತ್ತು ಸಂಸದರ ನಿವಾಸವಿದ್ದು, ಅವರುಗಳ ಗಮನಕ್ಕೆ ಬಾರದೇ ಇದೆ ಎಂದರೆ ಎಂತಹ ವಿಪಾರ್ಯಸವಲ್ಲವೇ? ಇವರ ಮನೆಯ ಪಕ್ಕದಲ್ಲಿರುವ ಶಾಲೆಯನ್ನೇ ದುರಸ್ಥಿ ಮಾಡದ ವ್ಯಕ್ತಿಗಳು ಜಿಲ್ಲೆ ಮತ್ತು ನಗರವನ್ನು ಎಷ್ಟು ಮಾತ್ರ ದುರಸ್ಥಿ ಮಾಡಿಯಾರು? ಎಂಬುದು ಈ ಶಾಲೆಯ ಹಳೆಯ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.
ಇನ್ನು ಈ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ, ಇನ್ನು ಮೇಲ್ಛಾವಣಿಯೋ ಆಗೋ ಇಗೋ ಎಂಬಂತೆ ನೇತಾಡುವ ಹಂತಕ್ಕೆ ತಲುಪಿದೆ, ಏಕೆಂದರೆ ಶಾಲೆಯ ಆವರಣದಲ್ಲಿಯೇ ಇರುವ ಪುರಾತನ ಮರಗಳು ಶಾಲೆಯ ಮೇಲ್ಛಾವಣಿಯ ಹತ್ತಿರಕ್ಕೆ ಬಂದಿದ್ದು ಬಲಿಗಾಗಿ ಕಾದು ನೋಡುತ್ತಿರುವ ಯಮಕಿಂಕರರಂತೆ ಭಾಸವಾಗುತ್ತಿದೆ. ಒಂದು ವೇಳೆ ಇದೀಗ ಮಳೆಗಾಲ ಪ್ರಾರಂಭವಾಗುತ್ತಿದ್ದು, ಮಳೆ-ಗಾಳಿಗೆ ಏನಾದರೂ ಪುಟಾಣಿ ಮಕ್ಕಳು ಶಾಲೆಯಲ್ಲಿದ್ದಂತಹ ಸಂದರ್ಭದಲ್ಲಿ ಛಾವಣಿ ಏನಾದರೂ ಮುರಿದು ಬಿದ್ದರೆ ಸಂಭವಿಸಬಹುದಾದ ಬಾರೀ ಅನಾಹುತಕ್ಕೆ ಹೊಣೆ ಯಾರು? ಎಂಬುದು ದೊಡ್ಡ ಯಕ್ಷ ಪ್ರಶ್ನೆಯಾಗಿದೆ.
ಈ ಶಾಲೆಯನ್ನು ಹತ್ತಾರು ವರ್ಷಗಳ ಹಿಂದೆ ಎಸ್.ಆರ್.ಎಸ್. ಬಸ್ ಮಾಲೀಕರಾದ ರೇವಣ್ಣ ಕುಟುಂಬದವರು ಈ ಶಾಲೆಯಲ್ಲಿ ತಮ್ಮ ಮಕ್ಕಳು ಓದಿದ್ದರು ಎಂಬ ಕಾರಣಕ್ಕೆ ಅವರಿಗೆ ಆದಂತಹ ಸಹಾಯವನ್ನು ಮಾಡಿ ಕಟ್ಟಡ ದುರಸ್ಥಿ ಮಾಡಿಸಿದ್ದರು, ಆದರೆ ಅದೂ ಸಹ ಅದು ಪೂರ್ಣ ಪ್ರಮಾಣದ ದುರಸ್ಥಿ ಕಾರ್ಯ ಆಗದ ಕಾರಣ ಮತ್ತೊಮ್ಮೆ ಈ ಕಟ್ಟಡವು ಶಿಥಿಲಾವಸ್ಥೆ ತಲುಪಿದೆ, ನಂತರ ಕೆಲ ವರ್ಷಗಳ ಹಿಂದೆ ರೋಟರಿ ಸಂಸ್ಥೆಯು ಮುಂದೆ ಬಂದು ಈ ಶಾಲೆಯ ಎರಡು ಕೊಠಡಿಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿ, ಕೊಂಚ ಅಭಿವೃದ್ಧಿಯೂ ಸಹ ಆಗಿರುತ್ತದೆ. ಅಲ್ಲದೇ ಇನ್ನು ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ತಮಗೆ ಕೈಲಾದ ಸಹಾಯವನ್ನು ಅಂದರೆ ಮಕ್ಕಳಿಗೆ ಪುಸ್ತಕ, ಪೆನ್ನು, ಸಮವಸ್ತ್ರ, ಕುಡಿಯುವ ನೀರಿನ ಸೌಕರ್ಯ, ಇತ್ಯಾದಿ ಕಲಿಕಾ ಉಪಕರಣಗಳನ್ನು ಕೊಡಿಸಿಕೊಡುವಲ್ಲಿ ಮಾತ್ರ ಶಕ್ತರಾಗಿದ್ದಾರೆ.
ಇನ್ನು ಈ ಶಾಲೆಯ ದುರಸ್ಥಿ ಕಾರ್ಯದ ಬಗ್ಗೆ ಈ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿಗಳು ಸೇರಿದಂತೆ, ಶಾಲೆಯಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕರು, ಶಿಕ್ಷಕಿಯರು, ಸಹಾಯಕರು ಸೇರಿದಂತೆ ಶಾಲೆಯ ಮೇಲೆ ಅಭಿಮಾನ ಹೊಂದಿದ್ದ ಅನೇಕ ಸಾರ್ವಜನಿಕರು ಇಲಾಖೆಯ ಮಟ್ಟದಲ್ಲಿ ಹಲವಾರು ಭಾರಿ ಮನವಿ ಸಲ್ಲಿಸಿದಾಗ್ಯೂ ಯಾವೊಂದು ಇಲಾಖೆ (ಶಿಕ್ಷಣ ಇಲಾಖೆ, ಪಾಲಿಕೆ, ಜಿಲ್ಲಾಡಳಿತ, ಅರಣ್ಯ, ಬೆಸ್ಕಾಂ) ಇತ್ತ ಕಡೆ ಗಮನ ಹರಿಸದೇ ಸಂಪೂರ್ಣ ನಿರ್ಲಕ್ಷ್ಯವಹಿಸಿ ಈ ಶಾಲೆಯು ಅವನತಿಗೆ ಹೋಗಲು ಕಾರಣಕರ್ತರಾಗಿದ್ದಾರೆ.
ಈ ಶಾಲೆಯು ಪ್ರತಿಷ್ಠಿತ ಬಡಾವಣೆಯಲ್ಲಿದ್ದು, ಇದರ ವಿಸ್ತೀರ್ಣ ಸರಿ ಸುಮಾರು 25 ಗುಂಟೆ ಇರಬಹುದು ಎನ್ನಲಾಗಿದೆ, ಈ ಶಾಲೆಯ ಕಟ್ಟಡ ಏನಾದರೂ ಬಿದ್ದುಹೋಗಿ ಈ ಜಾಗದಲ್ಲಿ ಶಾಲೆಯು ಮಾಯವಾದರೇ ಬಹುಕೋಟಿ ಮೌಲ್ಯದ ಜಾಗವನ್ನು ನುಂಗಲು ಹಲವಾರು ಭೂಗಳ್ಳರು ಕಣ್ಣಿಟ್ಟಿದ್ದಾರೆ ಎಂಬ ಗುಸು ಗುಸು ಸುದ್ಧಿ ಸ್ಥಳೀಯ ಸಾರ್ವಜನಿಕರ ಬಾಯಲ್ಲಿ ಹರಿದಾಡುತ್ತಿದೆ.
ಈ ಶಾಲೆಯನ್ನು ಪೂರ್ಣಪ್ರಮಾಣದಲ್ಲಿ ದುರಸ್ಥಿಯಾಗಬೇಕೆಂದರೆ ಅದು ಸ್ಥಳೀಯ ಶಾಸಕರ ಅನುದಾನ, ಸಂಸದರ ಅನುದಾನ, ವಿಧಾನಪರಿಷತ್ ಸದಸ್ಯರ ಅನುದಾನ, ಜಿಲ್ಲಾಡಳಿತ, ಪಾಲಿಕೆಯ, ನಿರ್ಮಿತಿ ಕೇಂದ್ರ, ಶಿಕ್ಷಣ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳು ಕೈಜೋಡಿಸಿ ಶ್ರಮಿಸಿದರೇ ಮಾತ್ರ ಈ ಶಾಲೆಗೆ ಮರು ರೂಪ ನೀಡಿ, ಸ್ವಾತಂತ್ರ್ಯ ಪೂರ್ವದ ಮತ್ತು ಇತಿಹಾಸವುಳ್ಳ ಶಾಲೆಯನ್ನು ಈ ಪೀಳಿಗೆಯವರು ಸಹ ನೋಡಲು ಸಾಧ್ಯವಾಗುತ್ತದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು, ಸಂಸದರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಈ ಕುರಿತು ಗಮನಹರಿಸಿ ಇತಿಹಾಸ ಪ್ರಸಿದ್ಧ ಶಾಲೆಯನ್ನು ಉಳಿಸುವರೇ ಕಾದು ನೋಡಬೇಕಿದೆ.