ತುಮಕೂರು ವಿ.ವಿ ಘಟಿಕೋತ್ಸವ ಇಬ್ಬರು ಸಾಧಕರಿಗೆ ಗೌರವ ಡಾಕ್ಟರೇಟ್ ಸ್ಥಳೀಯರಿಗೆ ಆಧ್ಯತೆ ನೀಡಿದ ವಿ.ವಿ.

ಡಾ. ಆರ್. ಎಲ್. ರಮೇಶ್ ಬಾಬು ಸಮಾಜ ಸೇವಕ ಮತ್ತು ಕೈಗಾರಿಕೋದ್ಯಮಿಗಳು

 

ಖ್ಯಾತ ಕೈಗಾರಿಕೋದ್ಯಮಿ ಡಾ. ಆರ್. ಎಲ್. ರಮೇಶ್ ಬಾಬು ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾತರಾಗಿದ್ದಾರೆ. ಅವರು ಶ್ರೀಮತಿ ಶಶಿರೇಖಮ್ಮ ಮತ್ತು ಶ್ರೀ. ಆರ್. ಲಕ್ಷ್ಮೀನಾರಾಯಣ ಶೆಟ್ಟಿ ದಂಪತಿಗಳಿಗೆ 20  ಜೂನ್ 1961 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದಲ್ಲಿ ಜನಿಸಿದರು.

 

 

 

ತುಮಕೂರಿನ ಶ್ರೀ ಸಿದ್ದಗಂಗಾ ಕಾಲೇಜಿನಲ್ಲಿ ಬಿಕಾಂ ಓದಿದ ನಂತರ, ಡಾ. ರಮೇಶ್ ಬಾಬು ಸಣ್ಣ ಬಂಡವಾಳದಲ್ಲಿ ರೈಸ್‌ಮಿಲ್ ಉದ್ಯಮಿಯಾದರು. ತಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಭಗವಾನ್ ರೈಸ್ ಮಿಲ್, ಭಗವತಿ ಭಗವಾನ್ ರೈಸ್ ಮಿಲ್ ಮತ್ತು ರಾಜಲಕ್ಷಿ ಆಗ್ರೋ ಫುಡ್ಸ್‌ನ ಹೆಮ್ಮೆಯ ಮಾಲೀಕರಾದರು. ಈ ಮೂಲಕ 150 ಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗವನ್ನು ಸೃಷ್ಟಿಸಿದರು. ಅದಕ್ಕಿಂತ ಮುಖ್ಯವಾಗಿ ಒಂದು ಗಿರಣಿಯ ಲಾಭವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಡಾ. ರಮೇಶ್ ಬಾಬು ಅವರ ಉದ್ಯಮಶೀಲತೆಯ ಕಲ್ಪನೆಯು ಅವರ ವ್ಯವಹಾರದ ಗಡಿಗಳನ್ನು ಕರ್ನಾಟಕದಾಚೆಗೆ ವಿಸ್ತರಿಸಿದೆ ಮತ್ತು ಅವರು ವಿದೇಶಕ್ಕೆ ಅಕ್ಕಿ ರಫ್ತು ಮಾಡುವ ಪ್ರಮುಖರಲ್ಲಿ ಒಬ್ಬರು.

 

 

 

 

 

ರಮೇಶ್ ಬಾಬು ಅವರ ಸೇವೆ ಕೇವಲ ಉದ್ಯಮ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರು ಪರಿಸರವಾದಿ ಮತ್ತು ಶಿಕ್ಷಣತಜ್ಞರಾಗಿದ್ದಾರೆ. ಅವರು ಹಲವಾರು ಎಕರೆ ತೋಟ ಮತ್ತು ಪರಿಸರಾಸಕ್ತಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಮದೇನು ಶೈಕ್ಷಣಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿ 08ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆದಿದ್ದು,1500 ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳ ಫಲಾನುಭವಿಗಳಾಗಿದ್ದಾರೆ. ಮುಂದೆ, ಜ್ಞಾನಬುತ್ತಿ ಸತ್ಸಂಗದ ಅಧ್ಯಕ್ಷರಾಗಿ, ಅವರು ವಿಜ್ಞಾನ, ಸಾಹಿತ್ಯ ಮತ್ತು ತತ್ವಶಾಸ್ತ್ರದ ವಿ?ಯಗಳ ಕುರಿತು 1400 ಸಾಪ್ತಾಹಿಕ ಉಪನ್ಯಾಸಗಳನ್ನು ಆಯೋಜಿಸಿದ್ದಾರೆ ಮತ್ತು ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಮ್ಮೆಯ ಸ್ಥಾನವನ್ನು ಪಡೆದುಕೊಂಡಿದೆ.

 

 

 

 

 

ಶಿಕ್ಷಣ, ಪರಿಸರ ಮತ್ತು ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲಿ ಅವರ ಬದ್ಧತೆಯ ಕೆಲಸವು ಅವರಿಗೆ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ತಂದುಕೊಟ್ಟಿದೆ. ಅದರಂತೆ, ಅವರು ರೀಡ್ ಬುಕ್ ಸೇವಾ ಪ್ರಶಸ್ತಿ ಮತ್ತು ಯೋಗ ಸಂಸ್ಕೃತ ವಿಶ್ವವಿದ್ಯಾಲಯ, ಫ್ಲೋರಿಡಾ (ಯುಎಸ್) ನಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

 

 

ಡಾ. ಟಿ. ಎಸ್. ನಾಗಾಭರಣ ನಿರ್ದೇಶಕ, ನಟ, ರಂಗಕರ್ಮಿ ಹಾಗೂ ನಿರ್ಮಾಪಕರು, ಬೆಂಗಳೂರು

ಕನ್ನಡ ಸಿನೆಮಾ ಹಾಗೂ ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡುತ್ತಿರುವ ಶ್ರೀಯುತ ಟಿ. ಎಸ್. ನಾಗಾಭರಣ ಅವರು ೨೩ ಜನವರಿ ೧೯೫೩ ರಂದು ಮೈಸೂರುಜಿಲ್ಲೆಯ ತಲಕಾಡಿನಲ್ಲಿ ಶ್ರೀಯುತ ಎ. ಶ್ರೀನಿವಾಸಯ್ಯ ಮತ್ತು ಶ್ರೀಮತಿ ರುದ್ರಮ್ಮ ದಂಪತಿಗಳ ಎರಡನೆಯ ಸುಪುತ್ರರಾಗಿ ಜನಿಸಿದರು. ತಮ್ಮ ತಾತಂದಿರು ಯಕ್ಷಗಾನ ಹಾಗೂ ಇನ್ನಿತರ ಪ್ರದರ್ಶನ ಕಲೆಗಳಲ್ಲಿ ಆಸಕ್ತಿ ಮತ್ತು ಪರಿಣತಿಯನ್ನು ಹೊಂದಿದ್ದು, ಬಾಲಕ ನಾಗಾಭರಣರ ಕಲಾ ಪ್ರತಿಭೆಗೆ ಬಾಲ್ಯದಲ್ಲಿಯೇ ಮುನ್ನುಡಿ ಬರೆದಿತ್ತು.

 

ತಲಕಾಡಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ನಾಗಾಭರಣ ಅವರ ಮುಂದಿನ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಆಗ ಅವರು ಓದುತ್ತಿದ್ದುದು ಬಿಎಸ್ಸಿ, ಆದರೆ ವಿಜ್ಞಾನ ಅವರ ಕಲಾಭಿರುಚಿಗೆ ಧಕ್ಕೆ ತರಲಿಲ್ಲ. ಆ ದಿನಗಳಲ್ಲಿಯೇ ಅವರು ಕನ್ನಡದ ’ವಿರಾಟ ಪುರುಷ’ ರೆಂದೇ ಹೆಸರಾಗಿದ್ದ ನಾಟಕಕಾರ ಶ್ರೀರಂಗರ ಪ್ರಭಾವಕ್ಕೊಳಗಾಗಿ, ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ರಂಗಾಸಕ್ತಿಯನ್ನಿಟ್ಟುಕೊಂಡ ಕಲಾಪ್ರೇಮಿ ಶ್ರೀಮತಿ. ರಾಗಿಣಿ ಅವರು ’ಜನಮನದ ಜೋಡಿ’ಯಾಗಿ ನಾಗಾಭರಣರ ಬದುಕನ್ನು ಪ್ರವೇಶಿಸಿದರು.

 

 

 

 

’ಜನಪ್ರಿಯ’ ಸಿನಿಮಾ ಮತ್ತು ’ಕಲಾತ್ಮಕ’ ಸಿನಿಮಾ ಪ್ರಕಾರಗಳ ನಡುವಿನ ಅಂತರವನ್ನು ತುಂಬಿ, ಈ ಎರಡೂ ಚೌಕಟ್ಟುಗಳಲ್ಲಿ ಲೀಲಾಜಾಲವಾಗಿ ಕಲಾಕೃಷಿ ಮಾಡುವ ನಾಗಾಭರಣ 35 ಕ್ಕಿಂತ ಹೆಚ್ಚು ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ 22 ಚಲನಚಿತ್ರಗಳು ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಸಂತ ಶಿಶುನಾಳ ಶರೀಫ (1989), ಚಿನ್ನಾರಿ ಮುತ್ತ (1993), ನಾಗಮಂಡಲ (1996), ಸಿಂಗಾರೆವ್ವ (2002), ಕಲ್ಲರಳಿ ಹೂವಾಗಿ (2007), ಅಲ್ಲಮ (2017) ಮುಂತಾದ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ನಾಗಾಭರಣರು ನಮ್ಮ ಸಂಸ್ಕೃತಿಯ ಬೌದ್ಧಿಕ ಹೂರಣವನ್ನು ಕನ್ನಡದ ಕಲಾರಸಿಕರಿಗೆ ಉಣಬಡಿಸಿದ್ದಾರೆ. ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿದ ನಂತರವೂ ಅವರು ತಮ್ಮ ರಂಗಭೂಮಿಯ ಸೇವೆಯನ್ನು ಮುಂದುವರೆಸಿದ್ದಾರೆ.

 

 

ಕರ್ನಾಟಕದ ಘನತೆವೆತ್ತ ರಾಜ್ಯಪಾಲರೂ ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಉನ್ನತ ಶಿಕ್ಷಣ ಸಚಿವರೂ ತುಮಕೂರು ವಿಶ್ವವಿದ್ಯಾನಿಲಯದ ಸಮಕುಲಾಧಿಪತಿಗಳೂ ಆಗಿರುವ ಡಾ. ಎಂ. ಸಿ. ಸುಧಾಕರ್ ಉಪಸ್ಥಿತರಿರುವರು. ಪ್ರೊ. ಸಾಂತಿಶ್ರೀ ಧೂಳಿಪುಡಿ ಪಂಡಿತ್, ಮಾನ್ಯ ಕುಲಪತಿಗಳು, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ, ನವದೆಹಲಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಘಟಿಕೋತ್ಸವ ಭಾಷಣ ನೆರವೇರಿಸಲಿರುವರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವರಾದ ಶ್ರೀಮತಿ ನಾಹಿದಾ ಜ಼ಮ್ ಜ಼ಮ್ ಉಪಸ್ಥಿತರಿರುವರು.

 

 

 

ಸಮಾಜ ಸೇವಕ ಶ್ರೀ ಆರ್. ಎಲ್. ರಮೇಶ್ ಬಾಬು ಹಾಗೂ ಚಿತ್ರನಿರ್ದೇಶಕ ಶ್ರೀ ಟಿ. ಎಸ್. ನಾಗಭರಣ ಅವರಿಗೆ ಈ ಘಟಿಕೋತ್ಸವದ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.

 

 

 

 

 

ಈ ಬಾರಿಯ ಘಟಿಕೋತ್ಸವದಲ್ಲಿ 5 ಅಭ್ಯರ್ಥಿಗಳು ಡಿ.ಲಿಟ್ ಪದವಿ, 78 ಅಭ್ಯರ್ಥಿಗಳು ಪಿಎಚ್.ಡಿ. ಪದವಿ, 1517 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 8756 ಅಭ್ಯರ್ಥಿಗಳು ಸ್ನಾತಕ ಪದವಿ ಪಡೆಯಲು ಅರ್ಹರಾಗಿರುತ್ತಾರೆ (ಒಟ್ಟು 10273 ಅಭ್ಯರ್ಥಿಗಳು). ವಿಶ್ವವಿದ್ಯಾನಿಲಯವು ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ್‍ಯಾಂಕುಗಳನ್ನು, ಬಿಎ/ಬಿಎಸ್‌ಡಬ್ಲ್ಯೂ/ಬಿಎಸ್‌ಸಿ/ಬಿಕಾಂ/ಬಿಬಿಎಂ/ಬಿಇಡಿ (ಸೆಮಿಸ್ಟರ್ ಪದ್ಧತಿ)ಗಳಿಗೆ ತಲಾ ಹತ್ತು ರ್‍ಯಾಂಕುಗಳನ್ನು, ಬಿಎಫ್‌ಎ, ಬಿವಿಎ ಹಾಗೂ ಬಿಎ ಇಂಟಗ್ರೇಟೆಡ್ ಕನ್ನಡ ಪಂಡಿತ್‌ಗೆ ತಲಾ ಒಂದು ರ್‍ಯಾಂಕುಗಳನ್ನು ಘೋಷಿಸಿದೆ. ಒಟ್ಟು 80 ವಿದ್ಯಾರ್ಥಿಗಳಿಗೆ 99 ಚಿನ್ನದ ಪದಕಗಳನ್ನು ಹಾಗೂ ಹತ್ತು ನಗದು ಬಹುಮಾನಗಳನ್ನು ವಿಶ್ವವಿದ್ಯಾನಿಲಯವು ಈ ಬಾರಿಯ ಘಟಿಕೋತ್ಸವದಲ್ಲಿ ಪ್ರದಾನಮಾಡಲಿದೆ.

Leave a Reply

Your email address will not be published. Required fields are marked *

error: Content is protected !!