ತುಮಕೂರು:- ತುಮಕೂರು ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಕಳೆದ 4 ದಶಕಗಳಿಂದ ರಾಜಕೀಯ ಮಾಡಿಕೊಂಡರು ಬಂದಿರುವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಲಕ್ಕಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ತುಮಕೂರು ಜಿಲ್ಲೆ ಮತ್ತು ನಗರದಲ್ಲಿ ನಮ್ಮ ಸ್ವಂತ ಖರ್ಚಿನಿಂದ ಕಟ್ಟಿಕೊಂಡು, ಬೆಳಸಿಕೊಂಡು ಬಂದಿರುವ ನಮಗೆ ಡಾ. ಜಿ.ಪರಮೇಶ್ವರ್ ನಮ್ಮ ಮೇಲೆ ವಿನಾಃಕಾರಣ ದ್ವೇಷ ಸಾಧಿಸುತ್ತಿದ್ದು, ನಮ್ಮ ಅಳಿಯನ ಟಿಕೇಟ್ ಕೈ ತಪ್ಪಿಸುವಲ್ಲಿ ಯಶಸ್ವಿಯನ್ನು ಕಂಡಿದ್ದಾರೆಂದು ಆರೋಪವನ್ನು ಮಾಜಿ ಶಾಸಕರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಎಸ್.ಷಫೀ ಅಹಮ್ಮದ್ ಪತ್ರಿಕಾಗೋಷ್ಠಿಯನ್ನು ನಡೆಸಿ ಪರಮೇಶ್ವರ್ ವಿರುದ್ಧ ವಗ್ದಾಳಿ ಮಾಡಿದ್ದಾರೆ.
ತುಮಕೂರು ನಗರಕ್ಕೆ ಈ ಬಾರಿ ಡಾ. ಎಸ್.ರಫೀಕ್ ಅಹಮದ್ ಅವರಿಗೆ ಟಿಕೆಟ್ ನೀಡುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದ್ದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ನಮಗೆ ಟಿಕೆಟ್ ನೀಡುವ ವಿಚಾರದಲ್ಲಿ ವಿಶ್ವಾಸ ದ್ರೋಹವೆಸಗಿದ್ದಾರೆ ಎಂದು ತುಮಕೂರು ನಗರ ಮಾಜಿ ಶಾಸಕ ಶಫಿ ಅಹಮದ್ ಅವರು ಆರೋಪ ಮಾಡಿದ್ದರು.
ಇನ್ನು ಪಕ್ಷದ ಎಐಸಿಸಿ ಮುಖಂಡರು ನಮಗೆ ಟಿಕೆಟ್ ನೀಡಲು ಭರವಸೆಯನ್ನು ನೀಡಿದ್ದರು ಆದರೆ ಕರ್ನಾಟಕ ವಿಧಾನಸಭಾ ಚುನಾವಣೆ ಚುನಾವಣಾ ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಡಾ. ಜಿ ಪರಮೇಶ್ವರ್ ಅವರು ಆಯ್ಕೆ ಸಮಿತಿ ಮತ್ತು ಕೆಪಿಸಿಸಿ, ಎ.ಐ.ಸಿ.ಸಿ. ಮುಖಂಡರು ಸಭೆಯಲ್ಲಿ ಮಾತನಾಡಿ ಒಂದು ವೇಳೆ ರಫೀಕ್ ಅಹಮ್ಮದ್ ಅವರಿಗೆ ಟಿಕೆಟ್ ನೀಡಿದರೆ ನಾನು ಸಭೆಯಿಂದ ವಾಕ್ ಔಟ್ ಮಾಡುವುದಾಗಿ ಹೇಳುವುದರೊಂದಿಗೆ ನಮಗೆ ಟಿಕೆಟ್ ತಪ್ಪಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ ಎಂಬಾ ಗಂಭೀರ ಆರೋಪವನ್ನು ಷಫಿ ಅಹಮದ್ ಅವರು ಮಾಡಿದ್ದರು.
ಇನ್ಮುಂದೆ ಪಕ್ಷದ ಯಾವುದೇ ಕಾರ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸದೆ ಅಧಿಕೃತವಾಗಿ ನಾಳೆ ಕಾಂಗ್ರೆಸ್ ಪಕ್ಷದ ನನ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡುತ್ತೇನೆ ಎಂದು ತಿಳಿಸಿದರು.
ಇನ್ನು ನನಾಗಲೀ ನನ್ನ ಕುಟುಂಬದವರಾಗಲೀ ಪರಮೇಶ್ವರ್ ರವರಿಗೆ ಯಾವುದೇ ರೀತಿಯಾದ ದ್ರೋಹ, ಅನ್ಯಾಯವನ್ನು ಇದುವರೆವಿಗೂ ಮಾಡಿಲ್ಲ, ಆದರೂ ಸಹ ಅವರು ನಮ್ಮ ಮೇಲೆ ಈ ರೀತಿಯಾದ ವಿಶ್ವಾಸದ್ರೋಹವನ್ನು ಮಾಡುವುದರೊಂದಿಗೆ ತಮ್ಮ ಹಗೆಯನ್ನು ಸಾಧಿಸಿದ್ದಾರೆಂದು ತಿಳಿಸಿದರು.
ಮುಂದುವರೆದು ನನ್ನೊಟ್ಟಿಗೆ ಅಪಾರ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪಾಲಿಕೆ ಸದಸ್ಯರುಗಳು ರಾಜೀನಾಮೆ ಸಲ್ಲಿಸುತ್ತಾರೆಂಬ ವಿಶ್ವಾಸವನ್ನು ಹೊಂದಿದ್ದೇನೆ ಆದರೆ ನಾನು ಯಾರ ಮೇಲೂ ಒತ್ತಡ ಹೇರಿಲ್ಲ, ಅವರೇ ತಮ್ಮ ಸ್ವ ಇಚ್ಛೇಯಿಂದ ಕೊಡಲಿದ್ದಾರೆಂದು ತಿಳಿಸಿದರು.
ಸುದಿಗೋಷ್ಠಿಯಲ್ಲಿ ಮಾಜಿ ಶಾಸಕ ರಫೀಕ್ ಅಹಮದ್, ನಯಾಜ್ ಅಹಮದ್, ಅಸ್ಲಾಂ ಪಾಷಾ, ಜೆ. ಕುಮಾರ್, ಟಿ.ಎಂ.ಮಹೇಶ್ ಸೇರಿದಂತೆ ಹಲವು ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.