ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಜನರ ಜೀವನದಲ್ಲಿ ಬದಲಾವಣೆ ತರಲು ವಿಫಲವಾಗಿದೆ : ಡಿ.ಕೆ.ಶಿವಕುಮಾರ್

 

ಇಂದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ನಮಸ್ಕರಿಸಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇವೆ. ದೇಶದಲ್ಲಿ ಧರ್ಮ, ಸಂಸ್ಕೃತಿ, ಅಕ್ಷರ ಹಾಗೂ ಅನ್ನ ದಾಸೋಹ ನಮ್ಮ ಆಸ್ತಿ. ಈ ಕಲ್ಪತರು ನಾಡು ಪ್ರಜ್ಞಾವಂತರ ನಾಡು. ಈ ನಾಡಿಗೆ ಇಂದು ಈ ಪ್ರಜಾಧ್ವನಿ ಯಾತ್ರೆ ಬಂದಿದೆ. ರಾಜ್ಯದ ಜನರ ನೋವು, ಅಭಿಪ್ರಾಯ ಅರಿತು, ಅವರಿಗೆ ಪರಿಹಾರ ನೀಡುವ ಉದ್ದೇಶದಿಂದ ಈ ಯಾತ್ರೆ ಮಾಡುತ್ತಿದ್ದೇವೆ.

 

 

ನಮ್ಮ ರಾಜ್ಯದ ರೈತರು, ಕಾರ್ಮಿಕರು, ವರ್ತಕರು, ಯುವಕರು, ಮಹಿಳೆಯರಿಗೆ ಶಕ್ತಿ ತುಂಬಲು ಕಾಂಗ್ರೆಸ್ ಶ್ರಮಿಸುತ್ತಿದ. ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಜನರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿ ವಿಫಲವಾಗಿದೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ನಿಮ್ಮ ಖಾತೆಗೆ 15 ಲಕ್ಷ ನೀಡುವುದಾಗಿ ಹೇಳಿದ್ದರು. ಇವುಗಳಲ್ಲಿ ಯಾವುದನ್ನಾದರೂ ಮಾಡಿದ್ದಾರಾ?

 

 

 

 

 

ಬಿಜೆಪಿ 600 ಭರವಸೆ ನೀಡಿ, ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ 1 ಲಕ್ಷದ ವರೆಗಿನ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು. ಅಚ್ಛೇದಿನ ನೀಡುತ್ತೇವೆ ಎಂದಿದ್ದರು. ಯಾವುದಾದರೂ ಸಿಕ್ಕಿದೆಯಾ ? ಕೋವಿಡ್ ಸಮಯದಲ್ಲಿ ಪರಿಹಾರ ನೀಡಲಿಲ್. ಈ ದುರಾಡಳಿತ ಕೊನೆ ಆಗಬೇಕು. ಪರೀಕ್ಷೆ ಕಾಲ ಬಂದಿದೆ. 45 ದಿನಗಳ ನಂತರ ನಿಮ್ಮ ಸರ್ಕಾರ ಬರಲಿದೆ. ರಾಜೇಂದ್ರ ಎಂಎಲ್ಸಿ ಆಗುವ ಮುನ್ನ, ಕಾಂತರಾಜು ಹಾಗೂ ಕೋಲಾರದಲ್ಲಿ ಮನೋಹರ್ ಅವರು ಹಾಲಿ ಎಂಎಲ್ಸಿ ಸ್ಥಾನ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದರು. ನಂತರ ನಡೆದ ಚುನಾವಣೆ ನಡೆಯಿತು. ನಮ್ಮ ಅಧಿಕಾರ ಇದ್ದಾಗ, ಮಂಡ್ಯ ತುಮಕುರು, ಕೋಲಾರದಲ್ಲಿ ಸೋತಿದ್ದೆವು. ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು, ಪಧವೀದರರು, ಶಿಕ್ಷಕರು ಮುಂದೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ದಿಕ್ಸೂಚಿ ನೀಡಲು ಈ ಮೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದರು.

 

 

 

 

 

ಗುಬ್ಬಿಯ ಶ್ರೀನಿವಾಸ್, ಮಧು ಮಾದೇಗೌಡರು, ಮಧು ಬಂಗಾರಪ್ಪ, ಕೋಲಾರದ ಶ್ರೀನಿವಾಸ ಗೌಡರು, ವೈಎಸ್ವಿ ದತ್ತಾ, ಮಂಜುನಾಥ ಗೌಡರು, ದೇವೇಂದ್ರಪ್ಪ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇವರೆಲ್ಲರೂ ನಾಯಕರು, ಜನಪ್ರತಿನಿಧಿಗಳು, ವಿದ್ಯಾವಂತರು. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುತ್ತಿದ್ದಾರೆ.

 

 

 

 

ರಾಹುಲ್ ಗಾಂಧಿ ಅವರು 3570 ಕಿ.ಮೀ ಹೆಜ್ಜೆ ಹಾಕಿದ್ದಾರೆ. ನಮ್ಮ ರಾಜ್ಯದಲ್ಲಿ 511 ಕಿ.ಮೀ ಹೆಜ್ಜೆ ಹಾಕಿದ್ದೇವೆ. ರಾಜ್ಯದಲ್ಲಿ ಸಾಮರಸ್ಯಕ್ಕೆ, ಬೆಲೆ ಏರಿಕೆ ನಿಯಂತ್ರಣಕ್ಕೆ, ಯುವಕರ ಭವಿಷ್ಯ ರಕ್ಷಿಸಿ, ಮೆಕೆದಾಟು ಆಣೆಕಟ್ಟು ಕಟ್ಟಿ ಕಾವೇರಿ ಜಲಾನಯನ ಪ್ರದೇಶಕ್ಕೆ ನೀರು ಒದಗಿಸಲು ಹೆಜ್ಜೆ ಹಾಕಿದ್ದೇವೆ. ಬಿಜೆಪಿ, ಜೆಡಿಎಸ್ ಈ ರೀತಿ ಒಂದು ಹೋರಾಟ ಮಾಡಿದರಾ?

 

 

 

 

ಅವರು ಅಧಿಕಾರ ಇದ್ದಾಗ ಏನಾದರೂ ಕೆಲಸ ಮಾಡಿದ್ದಾರಾ? ಈಗ ಟೀಕೆ ಮಾಡುತ್ತಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿದುಕೊಳ್ಳುತ್ತವೆ. ಕುವೆಂಪು ಅವರು ಹೇಳುವಂತೆ ಸತ್ತಂತೆ ಬದುಕಬಾರದು. ಸತ್ತು ಬದುಕುವುದು ಲೇಸು. ಇದನ್ನು ಕಾಂಗ್ರೆಸ್ ಸದಾ ಮಾಡಿಕೊಂಡು ಬಂದಿದೆ.

 

 

 

 

 

ನಾವು ಪಾದಯಾತ್ರೆ ಮಾಡುವಾಗ ಚಿತ್ರದುರ್ಗದ ಬಳಿ ಹಿರಿಯ ಮಹಿಳೆ ಬಂದು ರಾಹುಲ್ ಗಾಂಧಿ ಅವರಿಗೆ ಸೌತೇಕಾಯಿ ಕೊಟ್ಟರು. ಆಗ ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದೇವೆ ತಗೊಳ್ಳಿ ಎಂದು ಹೇಳಿದರು. ಉಳುವವನಿಗೆ ಭೂಮಿ, ನಿವೇಶನ, ಮನೆ, ಕೆಲಸ, ಪಿಂಚಣಿ ಕೊಟ್ಟಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಬಿಜೆಪಿ ನಿಮಗೆ ಒಂದು ಕಾರ್ಯಕ್ರಮ ನೀಡಿಲ್ಲ.

 

 

 

 

 

ನೀವು ನಾಳೆಗೆ ಕಾಯಬೇಡಿ. ಇಂದು ನಿಮ್ಮ ಕೈಯಲ್ಲಿ ನಿಮ್ಮ ರಾಜ್ಯ ಹಾಗೂ ರಾಷ್ಟ್ರದ ಭವಿಷ್ಯವಿದೆ. ನೀವು ಪ್ರತಿಜ್ಞೆ ಮಾಡಿ ಭ್ರಷ್ಟ ಹಾಗೂ ಕಳಂಕಿತ ಬಿಜೆಪಿ ಸರ್ಕಾರ ತೊಲಗಿಸಲು. ಜನ ಸಂಕಷ್ಟದಲ್ಲಿದ್ದಾರೆ, ಅವರಿಗೆ ನೆರವಾಗಲು ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ ಎಂಬ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು. ನಂತರ ರಾಜ್ಯದ ಮಹಿಳೆಯರು ಕಾಂಗ್ರೆಸ್ ಪಕ್ಷದಿಂದ ಏನನ್ನು ಬಯಸುತ್ತಿದ್ದಾರೆ ಎಂದು ಅಭಿಪ್ರಾಯ ಸಂಗ್ರಹಿಸಿದೆವು. ನಂತರ ನಮ್ಮ ಪಕ್ಷದ ಎಲ್ಲ ನಾಯಕರು ಚರ್ಚೆ ಮಾಡಿ ಪ್ರತಿ ತಿಂಗಳು ಪ್ರತಿ ಮನೆಯೊಡತಿಗೆ 2 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುವ ಗೃಹಲಕ್ಷ್ಮಿ ಎಂಬ ಎರಡನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ಆ ಮೂಲಕ ಬೆಲೆ ಏರಿಕೆಯಿಂದ ಮಹಿಳೆಯರ ರಕ್ಷಣೆ ಮಾಡಲು ಈ ಕಾರ್ಯಕ್ರಮ ನೀಡುತ್ತಿದ್ದೇವೆ. ವಿದ್ಯುತ್ ಮೂಲಕ ವರ್ಷಕ್ಕೆ 18 ಸಾವಿರ, ಮಹಿಳೆಯರಿಗೆ 24 ಸಾವಿರ ಪ್ರತಿ ಕುಟುಂಬಕ್ಕೆ ಉಳಿತಾಯವಾಗುತ್ತದೆ. ಇಂತಹ ಒಂದು ಕಾರ್ಯಕ್ರಮವನ್ನು ಬಿಜೆಪಿ ನೀಡಿದೆಯಾ?

 

 

 

 

 

ಬಿಜೆಪಿ ನಿಮ್ಮ ಭಾವನೆ ಕೆರಳಿಸುತ್ತಿದೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಮಾತು ತಪ್ಪಿದರೆ ರಾಜಕೀಯ ಬದುಕಿನಿಂದ ನಿವೃತ್ತಿ ಪಡೆಯುತ್ತೇವೆ ಎಂಬ ಶಪಥ ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ವಚನ. ನಮ್ಮ ಯೋಜನೆ ಕೇಳಿದ ನಂತರ ಬಿಜೆಪಿ ನಾಯಕರ ಮನಸ್ಸು ವಿಲವಿಲನೆ ಒದ್ದಾಡುತ್ತಿದೆ. ಜೆಡಿಎಸ್, ಕುಮಾರಸ್ವಾಮಿಯ ಎದೆ ಡವಡವ ಎಂದು ಒಡೆದು ಕೊಳ್ಳುತ್ತಿದೆ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಯಾಕೆ ಇಂತಹ ಕಾರ್ಯಕ್ರಮ ನೀಡಲಿಲ್ಲ? ನಾವು ಘೋಷಣೆ ಮಾಡಿದ ನಂತರ ಈಗ ಬಿಜೆಪಿಯವರು ನಾವು ಈ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಲ್ಲಮ ಪ್ರಭುಗಳು ಒಂದು ಮಾತು ಹೇಳಿದ್ದಾರೆ. ಕೊಟ್ಟ ಕುದುರೆ ಏರಲಾಗದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅದೇ ರೀತಿ ಅಧಿಕಾರ ಇದ್ದಾಗ ಮಾಡದೇ ಅಧಿಕಾರ ಹೋಗುವಾಗ ಮಾಡುತ್ತೇವೆ ಎಂದರೆ ಆಗುತ್ತದೆಯಾ?

 

 

 

 

 

ಸರ್ಕಾರ ಫೆ.17ರಂದು ಬಜೆಟ್ ಮಂಡನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಬಜೆಟ್ ನಲ್ಲಿ ಏನು ಹೇಳಿದರೂ ಜಾರಿಗೆ ಬರುವುದಿಲ್ಲ. ಅವರು ತಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಯೋಜನೆ ಜಾರಿ ಮಾಡಲಿಲ್ಲ. ನಾವು ಒಳ್ಳೆ ಕೆಲಸ ಮಾಡುತ್ತೇವೆ ಎಂದು ಹೋದರೆ ಅದು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ಉಚಿತವಾಗಿ ಅಕ್ಕಿ ನೀಡಲಿಲ್ಲವೇ? ಬಸವ ಜಯಂತಿ ದಿನ ಅಧಿಕಾರ ಸ್ವೀಕರಿಸಿ, ಅನ್ನ ಭಾಗ್ಯ ಯೋಜನೆ ಜಾರಿ ಮಾಡಿದರು. ಇಲ್ಲಿ ಪಾವಗಡದವರು ಇದ್ದೀರಿ. 50 ಸಾವಿರ ಎಕರೆ ಬೆಲೆ ಬಾಳುತ್ತಿದ್ದ ಜಮೀನಿನಲ್ಲಿ ವರ್ಷಕ್ಕೆ 24 ಸಾವಿರ ಬಾಡಿಗೆ ಬರುವಂತೆ ಮಾಡಿ 14 ಸಾವಿರ ಎಕರೆಗಳಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದೇವೆ. ನಮ್ಮ ಕೈಯಲ್ಲಿ ಚಿತ ವಿದ್ಯುತ್ ನೀಡಲು ಆಗುವುದಿಲ್ಲವೇ? ರೈತರಿಗೆ ನೀಡಲಾಗುತ್ತಿದ್ದ 6 ತಾಸು ಗಂಟೆಯನ್ನು 7 ತಾಸಿಗೆ ಏರಿಕೆ ಮಾಡಿದೆವು. ಬಿಜೆಪಿಯವರು 10 ಗಂಟೆಗಳ ಕಾಲ ಕರೆಂಟ್ ನೀಡುತ್ತೇವೆ ಎಂದಿದ್ದರು. ಯಾಕೆ ನೀಡಲು ಆಗಲಿಲ್ಲ? ಈ ಸರ್ಕಾರದ 40% ಕಮಿಷನ್ ಲಂಚವನ್ನು ತಡೆದರೆ, ಬಡವರ ಜೇಬು ತುಂಬಬಹುದು.

 

 

 

 

 

ಮುಂದಿನ ತಿಂಗಳು ಮೊದಲ ವಾರದಿಂದ ಪ್ರತಿ ತಾಲೂಕಿಗೆ ಭೇಟಿ ಮಾಡುತ್ತೇವೆ. ಮೊದಲು ನಾನು ದಕ್ಷಿಣ ಭಾಗದ ಜಿಲ್ಲೆಗಳ ಕ್ಷೇತ್ರಗಳಿಗೆ, ಸಿದ್ದರಾಮಯ್ಯನವರು ಉತ್ತರ ಭಾಗದ ಜಿಲ್ಲೆಗಳಲ್ಲಿ ಕ್ಷೇತ್ರಗಳಿಗೆ ಭೇಟಿ ನೀಡುತ್ತೇವೆ. ನಂತರ ನಾನು ಉತ್ತರ ಭಾಗದ ಕ್ಷೇತ್ರಗಳಿಗೆ ಹೋದರೆ, ಸಿದ್ದರಾಮಯ್ಯನವರು ದಕ್ಷಿಣ ಭಾಗದ ಜಿಲ್ಲೆಗಳ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ನೀವು ಪ್ರತಿ ಮನೆಗೆ ನಮ್ಮ ಯೋಜನೆಗಳ ಬಗ್ಗೆ ಮಾಹಿತಿ ತಲುಪಿಸಬೇಕು. ಪಕ್ಷದ ಸದಸ್ಯತ್ವ ಮಾಡಿದ ರೀತಿ ಪ್ರಚಾರ ಮಾಡಿ. ನಿಮ್ಮ ಆಶೀರ್ವಾದ ನಮಗೆ ನೀಡಿ ಜಿಲ್ಲೆಯಿಂದ 10 ಶಾಸಕರನ್ನು ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡುತ್ತೇನೆ.

Leave a Reply

Your email address will not be published. Required fields are marked *

error: Content is protected !!