ತುಮಕೂರು:ತುಮಕೂರು ನಗರದ ಕ್ಯಾತ್ಸಂದ್ರದಿಂದ ಶ್ರೀ ಸಿದ್ಧಗಂಗಾ ಮಠಕ್ಕೆ ಹೋಗುವ ಭಕ್ತಾದಿಗಳಿಗಾಗಿ ರೈಲ್ವೇ ಕೆಳಸೇತುವೆ ಮತ್ತು ಮೇಲ್ಸೇತುವೆ ಕಾಮಗಾರಿಗಳ ಪರಿಶೀಲನೆ ಮಾಡಲು ಲೋಕೋಪಯೋಗಿ ಮುಖ್ಯ ಅಭಿಯಂತರರಾದ ಶಿವಯೋಗಿ ಹಿರೇಮಠ್ ರವರು ತಮ್ಮ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಪತ್ರಕರ್ತರೊಂದಿಗೆ ಮಾತನಾಡುತ್ತಾ ಇತ್ತೀಚೆಗೆ ಸಿದ್ಧಗಂಗಾ ಮಠಕ್ಕೆ ತೆರಳುವ ರೈಲ್ವೇ ಕೆಳ ಸೇತುವೆ ನಿರ್ಮಿಸುವಾಗ ಕೆಲವರು ಭೂಸ್ವಾಧೀನ ಮಾಡಲು ಬಿಡದೆ ಪಟ್ಟು ಹಿಡಿದಿದ್ದು ಕಾಮಗಾರಿ ಕುಂಠಿತವಾಗಿದೆ, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಉನ್ನತ ಅಧಿಕಾರಿಗಳು ಸಾರ್ವಜನಿಕರ ಮನವೊಲಿಸಿದರೂ ಕಾಮಗಾರಿಗೆ ಅವಶ್ಯಕತೆ ಇರುವ ಜಾಗವನ್ನು ಕೆಲವರು ಬಿಟ್ಟು ಕೊಟ್ಟಿರಲಿಲ್ಲ,ಈಗ ಲೋಕೋಪಯೋಗಿ ಇಲಾಖೆಯಿಂದ ಮೇಲ್ಸೇತುವೆಗೆ ೧೩ ಕೋಟಿ ಟೆಂಡರ್ ಆಗಿದ್ದು ಶೀಘ್ರದಲ್ಲಿಯೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು,ಕೆಳ ಸೇತುವೆಗೆ ಅವಶ್ಯಕತೆ ಇರುವ ಜಾಗವನ್ನು ತುಮಕೂರು ಉಪವಿಭಾಗಾಧಿಕಾರಿಗಳು ಸರ್ಕಾರಿ ಬೆಲೆ ನೀಡಿ ಅಗತ್ಯ ಕ್ರಮಗಳನ್ನು ಅನುಸರಿಸಿ ಜಾಗವನ್ನು ಬಿಡಿಸಿಕೊಡುವರು ಎಂದು ಮುಖ್ಯ ಅಭಿಯಂತರರು ತಿಳಿಸಿದರು.ಅತಿ ಶೀಘ್ರದಲ್ಲಿಯೇ ರೈಲ್ವೇ ಕೆಳಸೇತುವೆ ಮತ್ತು ಮೇಲ್ಸೇತುವೆ ಕಾಮಗಾರಿಗಳು ಪೂರ್ಣಗೊಂಡು ಸಾರ್ವಜನಿಕರಿಗೆ ಉಪಯೋಗಿಸಲು ಬಿಟ್ಟುಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಬಿ.ಹೆಚ್.ಮಂಜುನಾಥ್, ಕಾರ್ಯಪಾಲಕ ಅಭಿಯಂತರರಾದ ರಘುನಂದನ್.ಸಿ.ಜಿ, ಎ.ಇ.ಇ.ಶಂಭುಕುಮಾರ್.ಆರ್, ಇಂಜಿನಿಯರ್ ಸಿದ್ಧಪ್ಪ,ಗುತ್ತಿಗೆದಾರ ಎಂ.ಎನ್.ಲೋಕೇಶ್,ರೈಲ್ವೇ ಇಲಾಖೆಯ ಶಿವಕುಮಾರ್,ಅರುಣ್,ಸ್ಥಳೀಯರಾದ ಹೊನ್ನೇಶ್ ಮುಂತಾದವರು ಹಾಜರಿದ್ದರು.ನಂತರ ಮುಖ್ಯ ಅಭಿಯಂತರರು ಶ್ರೀ ಶಿವಕುಮಾರಸ್ವಾಮೀಜಿಗಳ ಗದ್ದುಗೆಗೆ ನಮಿಸಿ ಶ್ರೀ ಸಿದ್ಧಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆದರು.