ಶಿರಾ ತಾಲೂಕಿನ ಚಿಗುರು ಯುವಜನ ಸಂಘದ ಸದಸ್ಯರು ಕುಲಾಂತರಿ ತಳಿ ಮುಸುಕಿನ ಜೋಳದ ಕ್ಷೇತ್ರ ಪ್ರಯೋಗಕ್ಕೆ ಅನುಮತಿ ನೀಡಬಾರದೆಂದು ದೊಡ್ಡಆಲದಮರ ಗ್ರಾಮದ ರೈತರ ಹೊಲದಲ್ಲಿ ಬಣ್ಣದ ಮುಸುಕಿನ ಜೋಳದ ಬೀಜವನ್ನು ಪ್ರದರ್ಶಿಸುತ್ತಾ ಪತ್ರ ಚಳುವಳಿಯನ್ನು ನಡೆಸಲಾಯಿತು. ಈ ಪತ್ರ ಚಳುವಳಿಯಲ್ಲಿ ಯುವಜನರು ಅರಣ್ಯ ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆಯುವ ಮೂಲಕ ಪ್ರಯೋಗಕ್ಕೆ ಪರವಾನಿಗೆ ನೀಡಬಾರದೆಂದು ಮನವಿ ಮಾಡಿಕೊಳ್ಳಲಾಯಿತು.

ಈ ಪತ್ರ ಚಳುವಳಿಯಲ್ಲಿ ಚಿಗುರು ಯುವಜನ ಸಂಘದ ಅಧ್ಯಕ್ಷರಾದ ಮಂಜುನಾಥ್ ಅಮಲಗೊಂದಿ ಮಾತನಾಡುತ್ತಾ, ದಿನಾಂಕ:-15.9.2021 ರಂದು ಹೊರಡಿಸಿರುವ ಪತ್ರಿಕಾ ಪ್ರಕಟಣೆಯನ್ವಯ ಮತ್ತೆ ಕುಲಾಂತರಿ ತಳಿ ವಿಷಯ ಮನ್ನಡೆಗೆ ಬಂದಿದೆ. ಈ ಬಗ್ಗೆ ಹಲವು ವರ್ಷಗಳ ಹಿಂದೆ ಬದನೆಯ ಕುಲಾಂತರಿ ತಳಿಯ ಕ್ಷೇತ್ರ ಪ್ರಯೋಗಕ್ಕೆ ವ್ಯಾಪಕ ವಿರೋಧ ಸಾರ್ವಜನಿಕರಿಂದ, ರೈತರಿಂದ, ವಿಜ್ಞಾನಿಗಳಿಂದ ಬಂದು ಕುಲಾಂತರ ತಳಿ ಬದನೆಯ ವಿಚಾರವನ್ನು ಸರ್ಕಾರ ಕೈ ಬಿಟ್ಟದ್ದು ಎಲ್ಲರಿಗೂ ನೆನೆಪಿದೆ. ಈಗ ಮುಸುಕಿನ ಜೋಳದ ಕ್ಷೇತ್ರ ಪ್ರಯೋಗಕ್ಕೆ ರ‍್ಯಾಲೀಸ್ ಕಂಪನಿಯವರು ಅರ್ಜಿ ಸಲ್ಲಿಸಿರುವುದು ವಿಷಾದವೇ ಆಗಿದೆ. ಈ ಕೆಳಗಿನ ಕಾರಣಗಳಿಗಾಗಿ ಕುಲಾಂತರಿ ತಳಿ ಮುಸುಕಿನ ಜೋಳದ ಪ್ರಯೋಗಕ್ಕೆ ಅವಕಾಶ ನೀಡಬಾರದೆಂದು ಮನವಿ ಮಾಡಿಕೊಳ್ಳಲಾಗುತ್ತಿದೆ. ಕುಲಾಂತರಿ ಮಾಡುವುದು ಪ್ರಕೃತಿ ವಿರುದ್ಧದ ಚಟುವಟಿಕೆಯಾಗಿದ್ದು. ಮಾನವನಿಗೆ ಪ್ರಕೃತಿಯ ಸೃಷ್ಟಿಯ ಕ್ರಮದಲ್ಲಿ ತಲೆಹಾಕುವ ಹಕ್ಕಿಲ್ಲ. ಇದು ನೈತಿಕವಾದ ಕ್ರಮವಲ್ಲ. ಇದು ಸೃಷ್ಟಿಕರ್ತನ ವಿರುದ್ಧವೇ ಮಸಲತ್ತು ನಡೆಸುವ ಕೆಲಸವಾಗಿದೆ. ಈಗಾಗಲೇ ಪ್ರಕೃತಿಯ ನಿಯಮಗಳನ್ನು ಮುರಿದ ಕಾರಣವಾಗಿ ಮಾನವ ಕೋಟಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತದೆ. ಇದು ಬಹು ದೊಡ್ಡ ನೈತಿಕ ಪ್ರಶ್ನೆಆಗಿರುವುದರಿಂದ ಇಂತಹ ಅಪಚಾರದ ವಾಮಮಾರ್ಗದ ಕ್ರಿಯೆಗೆ ಸರ್ಕಾರ ಕೈ ಜೋಡಿಸಬಾರದು. ಜೀವ ಪರಿಸ್ಥಿತಿ ಮತ್ತು ಪರಿಸರ ಸಂರಕ್ಷಣೆ ನಿಮ್ಮ ಹೊಣೆ ಆಗಿರುವುದರಿಂದ ಕುಲಾಂತರಿ ತಳಿ ಪ್ರಯೋಗವು ಜೀವ ಪರಿಸ್ಥಿತಿಗೆ ಮತ್ತು ಪರಿಸರಕ್ಕೆ ಹಾನಿಯಾಗಿರುವುದರಿಂದ ತಾವು ಯಾವುದೇ ಕಾರಣಕ್ಕೂ ಕುಲಾಂತರಿ ತಳಿ ಮುಸುಕಿನ ಜೋಳದ ಕ್ಷೇತ್ರ ಪ್ರಯೋಗಕ್ಕೆ ಅನುಮತಿ ನೀಡಬಾರದೆಂದು ಯುವರೈತರ ಪರವಾಗಿ ಬಹಿರಂಗವಾಗಿ ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿಯಾದ ಮಂಜುನಾಥ್ ಆಲದಮರ ರವರು ಮಾತನಾಡಿ, ಪ್ರಕೃತಿಯ ಸೃಷ್ಟಿಯಲ್ಲಿ ಮನುಷ್ಯ ಕೂಡ ಒಂದು ವರ್ಗವೇ ಹೊರತು ಇವನು ಬೇರೆ ಜೀವಿಗಳಿಗೆ ಮೇಲಲ್ಲ. ಹಾಗಾಗಿ ನಾವು ಮಾಡುವ ತಪ್ಪು ಕೆಲಸಗಳಿಂದ ಪ್ರಕೃತಿಯ ಇತರ ಜೀವಿಗಳಿಗೆ ತೊಂದರೆ ನೀಡುವ ಯಾವ ಹಕ್ಕೂ ನಮಗಿಲ್ಲ. ಭೂಮಿಯು ಮನುಷ್ಯನೋರ‍್ವನಿಗೇ ಸೃಷ್ಟಿಯಾಗಿಲ್ಲ. ಕಳೆದ ಒಂದೂವರೆ ದಶಕದ ಹಿಂದೆ ರೈತರಿಗೆ ಅನುಕೂಲವಾಗುತ್ತದೆಂದು ನಾವು ಒಪ್ಪಿಕೊಂಡ ಕುಲಾಂತರಿ ಹತ್ತಿ ಬೆಳೆಯುತ್ತಿರುವ ರೈತರ ಪರಿಸ್ಥಿತಿಯು ಯಾವುದೇ ರೀತಿಯಲ್ಲೂ ಸುಧಾರಣೆಯಾಗದೆ ಅವರು ಇನ್ನೂ ಹೆಚ್ಚು ಕಷ್ಟಕ್ಕೆ ಸಿಲುಕಿದ್ದಾರೆ ಎಂಬುದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಅರಿವಿಗೆ ಬಂದಿದೆ. ಪ್ರಕೃತಿಯ ಸುಸ್ಥಿರತೆ ವೈವಿಧ್ಯತೆಯ ಮೇಲೆ ನಿಂತಿದೆ. ವೈವಿಧ್ಯತೆ ಕಡಿಮೆಯಾದಷ್ಟೂ ಅಪಾಯ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಘದ ಸದಸ್ಯರಾದ ಯಶೋಧ ಸಿ.ಜೆ ರವರು ಮಾತನಾಡಿ, ಕುಲಾಂತರಿ ತಳಿಯು ಕಂಪನಿಗಳ ಜಾಹಿರಾತು ನೀಡುವ ಶಕ್ತಿಯಿಂದಾಗಿ ಶರವೇಗದಲ್ಲಿ ಕೃಷಿ ಭೂಮಿಗಳಿಗೆ ನುಗ್ಗಿ ವೈವಿಧ್ಯತೆಯನ್ನು ನಾಶ ಮಾಡುತ್ತದೆ. ಇತರ ದೇಶಗಳಲ್ಲಿ ಕುಲಾಂತರಿ ತಳಿ ಮುಸುಕಿನ ಜೋಳ ಬೆಳೆದ ರೈತರು ಕಷ್ಟ ಅನುಭವಿಸಿ ಅದರ ಮೂಲೋತ್ಪಾಟನೆಯಲ್ಲಿ ತೊಡಗಿರುವುದು ಮತ್ತು ಸ್ಥಳೀಯ ತಳಿಗಳ ಮಾರು ಹೋಗುತ್ತಿರುವ ವರದಿಗಳು ಬರುತ್ತಲೇ ಇವೆ. ಪ್ರಮುಖವಾಗಿ ಕುಲಾಂತರಿ ಬೀಜಗಳಿಂದ ಮಹಿಳೆ ಮತ್ತು ಹುಟ್ಟುವ ಮಕ್ಕಳ ಶಾರೀರಿಕ ಬೆಳವಣಿಗೆಯ ಮೇಲೆ ಪರೋಕ್ಷವಾಗಿ ನಕಾರಾತ್ಮ ಪರಿಣಾಮ ಬೀರಬಹುದು. ಪ್ರಕೃತಿಯು ಮನುಷ್ಯನ ಕಿಡಿಗೇಡಿ ಬುದ್ಧಿಯಿಂದಾಗಿ ಅನುಭವಿಸುತ್ತಿರುವ ಕಷ್ಟವೇ ಬಹಳ ಹೆಚ್ಚಾಗಿದೆ. ಇಂದು ವಾತಾವರಣ ಬದಲಾವಣೆ ಮತ್ತು ಹೆಚ್ಚುತ್ತಿರುವ ಭೂಮಿ ಶಾಖವನ್ನು ನಿಯಂತ್ರಣಕ್ಕೆ ತರುವ ಕೆಲಸ ನಮ್ಮದಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ಪತ್ರ ಚಳುವಳಿಯಲ್ಲಿ ಚಿಗುರು ಯುವಜನ ಸಂಘದ ಸದಸ್ಯರಾದ ಹರೀಶ್, ದರ್ಶನ್‌ರವರು ಪಾಲ್ಗೊಂಡಿದ್ದರು.