ಬೀದರ್ : ಜಿಲ್ಲೆಯಲ್ಲಿರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಮೀನು ಕಳೆದುಕೊಂಡವರಿಗೂ ಆದ್ಯತೆ ನೀಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ನಗರದ ನೌಬಾದ್ ನ ಸಹಾರ್ದಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ‘ಜಿಲ್ಲೆಯ ಕೈಗಾರಿಕೆಗಳ ಪ್ರಗತಿ ಹಾಗೂ ಕುಂದುಕೊರತೆಗಳ ಸಭೆ’ ನಡೆಸಿ ಮಾತನಾಡಿದ ಅವರು, ಕೋಳಾರ ಸೇರಿದಂತೆ ಈ ಭಾಗದ ಬಹಳಷ್ಟು ಗ್ರಾಮಗಳ ಜನರು ಕಾರ್ಖಾನೆಗಳ ನಿರ್ಮಾಣಕ್ಕಾಗಿ ಅನೇಕ ವರ್ಷಗಳ ಹಿಂದೆ ಬಹಳಷ್ಟು ಕಡಿಮೆ ದರದಲ್ಲಿ ಜಮೀನು ನೀಡಿದ್ದಾರೆ. ಅಂತಹ ಸ್ಥಳೀಯರಿಗೆ ಕಾರ್ಖಾನೆಗಳಲ್ಲಿ ಹೆಚ್ಚಿನ ಹುದ್ದೆಗಳನ್ನು ನೀಡಬೇಕು.
ಯಾವ್ಯಾವ ಕಾರ್ಖಾನೆಗಳಲ್ಲಿ ಎಷ್ಟು ಜನ ಸ್ಥಳೀಯರಿಗೆ ಆದ್ಯತೆ ನೀಡಿದ್ದಿರಿ? ಜಮೀನುಗಳನ್ನು ಕಳೆದುಕೊಂಡವರಿಗೆ ಎಷ್ಟು ಜನರಿಗೆ ಕೆಲಸ ನೀಡಿದ್ದಿರಿ? ಕಾರ್ಖಾನೆಗಳನ್ನು ನಿರ್ಮಿಸಲಾದ ಈ ಭಾಗದ ನಾಲ್ಕೈದು ಗ್ರಾಮಗಳಲ್ಲಿನ ಎಷ್ಟು ಜನಕ್ಕೆ ಆದ್ಯತೆ ನೀಡಿದ್ದಿರಿ? ಕೋಳಾರ ಸೇರಿದಂತೆ ಈ ಭಾಗದ ಎಷ್ಟು ಹಳ್ಳಿಗಳಿಗೆ ಕೆಲಸ ನೀಡಿದ್ದಿರಿ? ನಿಜಾಂಪುರದ ಎಷ್ಟು ಜನ ಕೆಲಸ ಮಾಡ್ತಿದ್ದಾರೆ?
ಮಾನವೀಯತೆಯ ಆಧಾರದ ಮೇಲೆಯಾದರು ಜಮೀನು ಕಳೆದುಕೊಂಡವರಿಗೆ ಕೆಲಸ ನೀಡಿದ್ದಿರಾ? ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವ ಕೆಲಸವನ್ನು ಕಾರ್ಖಾನೆಗಳು ಮಾಡಬೇಕಲ್ಲವೇ? ನಿಜಾಂಪುರ, ಕೋಳಾರ ಸೇರಿದಂತೆ ಐದಾರು ಊರುಗಳ ಜನರು ಅಂದಿನ ದಿನಗಳಲ್ಲಿ ಬಹಳಷ್ಟು ಕಡಿಮೆ ದರದಲ್ಲಿ ಕೇವಲ ಎಂಟು ಸಾವಿರಕ್ಕೆ ಎಕರೆಯಂತೆ ಜಮೀನು ನೀಡಿದ್ದಾರೆ. ಅಂತಹ ಹಳ್ಳಿಗಳ ಜನರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆ ಮೂಲಕ ಅವರಿಗೆ ನ್ಯಾಯ ಕಲ್ಪಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹತ್ತು ದಿನಗಳಲ್ಲಿ ನೀಡಬೇಕು.
ಸೆ.13ರಿಂದ ಆರಂಭವಾಗುವ ಅಧಿವೇಶನದಲ್ಲಿ ನಮ್ಮ ಭಾಗದ ಇಂಡಸ್ಟ್ರೀಸ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡುತ್ತೇನೆ. ಇಲ್ಲಿನ ಕುಂದುಕೊರತೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ. ಸರ್ಕಾರ ಜನರ ಒಳಿತಿಗಾಗಿ ಶ್ರಮಿಸಬೇಕು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕೆಮಿಕಲ್ ಇಂಡಸ್ಟ್ರೀಸ್ ಗಳಿಗೆ ಅವಕಾಶ ಕೊಡಬಾರದು. ಈಗ ನಡೆಯುತ್ತಿರುವ ಇಂಡಸ್ಟ್ರೀಸ್ ಗಳಲ್ಲಿ ಎಲ್ಲಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಇಂಡಸ್ಟ್ರೀಸ್ ನವರು ಕೂಡ ಸಾಮಾಜಿಕ ಕಾಳಜಿಯಿಂದ ಇಂಡಸ್ಟ್ರೀಸ್ ಗಳನ್ನು ನಡೆಸಬೇಕು. ಸಮಾಜಕ್ಕೆ ಪೂರಕವಾಗುವಂತೆ ನಡೆಸಬೇಕು. ಸಮಾಜಕ್ಕೆ ಮಾರಕವಾಗುವ ಕೆಲಸಗಳನ್ನು ಮಾಡಬಾರದು. ನಿಮ್ಮ ಜವಾಬ್ದಾರಿಗಳನ್ನು ನೀವು ಸರಿಯಾಗಿ ನಿರ್ವಹಿಸಬೇಕು. ಜಿಲ್ಲೆಯಲ್ಲಿರುವ ಟೈಯರ್ ಇಂಡಸ್ಟ್ರೀಸ್ ಗಳನ್ನು ಬಂದ್ ಮಾಡಬೇಕು. ಟೈಯರ್ ಇಂಡಸ್ಟ್ರೀಸ್ ಗೆ ಯಾರು ಪರ್ಮಿಶನ್ ಕೊಟ್ಟಿಲ್ಲ. ಕೊಡುವುದು ಇಲ್ಲ. ಮೊದಲು ಅವುಗಳನ್ನು ಬಂದ್ ಮಾಡುವ ಕೆಲಸ ಮಾಡಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಸತೀಶ್ ಕುಮಾರ್, ಕೆಐಎಡಿಬಿಯ ಅಭಿವೃದ್ಧಿ ಅಧಿಕಾರಿ ಡಿ.ಹೆಚ್ ಪ್ರಕಾಶ್, ಉಪ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಕಾಂತ ಮಿತ್ರಾ, ಕೆಎಸ್ಎಫ್ಸಿಯ ಶಾಖಾ ವ್ಯವಸ್ಥಾಪಕ ಶಿವಕುಮಾರ್, ಚೆಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಬಿ.ಜಿ ಶೇಟ್ಕರ್, ಕೆಮಿಕಲ್ ಮತ್ತು ಫಾರ್ಮಾ ಅಸೋಸಿಯೇಷನ್ ಅಧ್ಯಕ್ಷ ದೇವೇಂದ್ರಪ್ಪ, ಎಸ್ಸಿ ಎಸ್ಟಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ. ವಿಜಯಕುಮಾರ್, ಉದ್ಯಮಿ ಭೋಜಪ್ಪ ಮೇಟಿಗೆ ಸಿರ್ಸಿ ಔರಾದ್, ರವಿಕಿರಣ್, ಸುಬ್ರಹ್ಮಣ್ಯ, ಅಶೋಕ್, ರಘುನಾಥ್ ಗಾಯಕವಾಡ, ಲೋಕೇಶ್, ಪ್ರದೀಪ್, ಸಿದ್ರಾಮಪ್ಪ ಕಪ್ಲಾಪೂರ್, ಮಲ್ಲಿಕಾರ್ಜುನ, ಶಿವಶರಣಪ್ಪ ಪಾಟೀಲ್ ಕೋಳಾರ, ನಾಗಪ್ಪ ರೆಡ್ಡಿ, ರಮೇಶ್ ಮಠಪತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಉದ್ಯಮಿಗಳು, ವಿವಿಧ ಗ್ರಾಮಗಳ ಮುಖಂಡರು ಸೇರಿದಂತೆ ಅನೇಕರಿದ್ದರು.