ತುಮಕೂರು:ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರ ಅಭಿಮಾನಿಗಳು, ಹಿತೈಷಿಗಳು, ಸಹಕಾರ ಕ್ಷೇತ್ರದ ಜನರು ಕೆ.ಎನ್.ಆರ್‌ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ.13 ರಂದು ಆಯೋಜಿಸಿದ್ದ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು,ದೇಶದಲ್ಲಿ ಯುದ್ದದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ಭಾರತದ ಸೈನಿಕರಿಗೆ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ ಮುಂದೂಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯ ಪ್ರತಿಕಾರವಾಗಿ ಭಾರತ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿರುವುದು ಪಾಕಿಸ್ಥಾನ ಮತ್ತು ಭಾರತದ ನಡುವೆ ಯುದ್ದದ ವಾತಾವರಣ ನಿರ್ಮಾಣವಾಗಿದೆ.ಎರಡು ದೇಶಗಳ ನಡುವೆ ನಡೆಯುತ್ತಿರುವ ಕ್ಷಿಪಣ್ಣಿ ಮತ್ತು ಯುದ್ದ ವಿಮಾನಗಳ ಶೆಲ್ ದಾಳಿಯಿಂದ ಉಗ್ರರ ನೆಲೆಗಳು ದ್ವಂಶಗೊಂಡಿವೆ. ಇಂತಹ ಸಂದರ್ಭದಲ್ಲಿ ಭಾರತೀಯರೆಲ್ಲರೂ ಸೈನಿಕರೊಂದಿಗೆ ನಿಲ್ಲಬೇಕಾಗಿದೆ. ಹಾಗಾಗಿ ಮೇ.13ರ ಕಾರ್ಯಕ್ರಮವನ್ನು ಮುಂದೂಡಿದ್ದು,ದೇಶದಲ್ಲಿ ವಾತಾವರಣ ತಿಳಿಗೊಂಡ ನಂತರ ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಅಭಿನಂದನಾ ಸಮಿತಿ ತಿಳಿಸಲಿದೆ ಎಂದರು.
ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾಧಕರು ದಾಳಿ ನಡೆಸಿದ್ದಾರೆ.ಭಯೋತ್ಪಾಧಕರಿಗೆ ಜಾತಿ, ಧರ್ಮ ಎಂಬುದು ಇಲ್ಲ.ಹಾಗಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹೀಯಾಳಿಸುವುದು ತರವಲ್ಲ.ಈ ಹಿಂದೆ ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನು ಕೊಂದಿದ್ದು ಸಹ ಓರ್ವ ವ್ಯಕ್ತಿ, ಆದರೆ ಅಂದು ಕೊಲೆ ಮಾಡಿದ ವ್ಯಕ್ತಿಯನ್ನು ಮಾತ್ರ ಅಪರಾದಿ ಎಂದು ತೀರ್ಮಾನಿಸಲಾಯಿತೇ ಹೊರತು, ಆತನ ಧರ್ಮ ಮತ್ತು ಸಮುದಾಯವನ್ನಲ್ಲ. ಇಂದಿರಾಗಾಂಧಿ ಅವರಿಗೆ ಅವರ ಅಂಗರಕ್ಷಕರೇ ಗುಂಡಿಟ್ಟುಕೊಂದಾಗ, ಗುಂಡಿಟ್ಟ ವ್ಯಕ್ತಿಗಳ ಸಮುದಾಯವನ್ನು ಅಪರಾಧಿ ಎಂಬಂತೆ ಜನತೆ ನಡೆದುಕೊಳ್ಳಲಿಲ್ಲ. ಈ ಘಟನೆಯಲ್ಲಿಯೂ ಒಂದು ಸಮುದಾಯವನ್ನು ಗುರಿಯಾಗಿಸುವುದು ಭಾರತದಂತಹ ಬಹುಸಂಸ್ಕೃತಿಯ ನಾಡಿಗೆ ತರವಲ್ಲ ಎಂದು ಆರ್.ರಾಜೇಂದ್ರ ನುಡಿದರು.
ಮೇ.13 ರಂದು ಕೆ.ಎನ್.ಆರ್. ಅವರ 75ನೇ ವರ್ಷದ ಅಮೃತಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆಗೆ ಸಕಲ ಸಿದ್ದತೆಗಳನ್ನು ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 1.50 ಲಕ್ಷ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು.ಅದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಅಭಿನಂದನಾ ಸಮಿತಿ ಮತ್ತು ಕೆ.ಎನ್.ಆರ್.ಅಭಿಮಾನಿಗಳು, ಹಿತೈಷಿಗಳು ಮಾಡಿಕೊಂಡಿದ್ದರು.ಆದರೆ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದಾಗ,ಇಂತಹ ಅದ್ದೂರಿಯ ಕಾರ್ಯಕ್ರಮ ಮಾಡಿದರೆ ಅದು ಜನರಿಗೆ ಬೇರೆಯದೆ ಸಂದೇಶ ನೀಡಿದಂತಾಗುತ್ತದೆ. ಹಾಗಾಗಿ ಪರಿಸ್ಥಿತಿ ತಿಳಿಯಾಗುವವರೆಗೂ ಕಾಯ್ದು, ತದನಂತರ ಕಾರ್ಯಕ್ರಮ ಮಾಡುವುದಾಗಿ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಹಾಗೂ ಕರ್ನಾಟಕ ಸರಕಾರ ಸಚಿವ ಸಂಪುಟದ ಸಹೋದ್ಯಗಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೆವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರುಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಆರ್.ರಾಜೇಂದ್ರ ತಿಳಿಸಿದರು.
ಅಭಿನಂದನಾ ಸಮಿತಿ ಅಧ್ಯಕ್ಷರಾದ ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ,ಸುಮಾರು ೬೦೦ ಪುಟುಗಳ ಎರಡು ಸಂಪುಟಗಳನ್ನು ಒಳಗೊಂಡಂತೆ ಸಹಕಾರ ಸಚಿವ ಸಮಗ್ರ ಜೀವನ ಮತ್ತು ಸಾಧನೆಯನ್ನು ಒಳಗೊಂಡ ಅಭಿನಂದನಾ ಗ್ರಂಥ ಮುದ್ರಣ ಆರಂಭವಾಗಿತ್ತು. ಆದರೆ ದೇಶದಲ್ಲಿ ಪಾಕಿಸ್ಥಾನ ಮತ್ತು ಭಾರತದ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮೇ.13 ರ ಕಾರ್ಯಕ್ರಮ ಮುಂದೂಡಲಾಗಿದೆ.ಮುಂದಿನ ದಿನಗಳಲ್ಲಿಯೂ ಇಷ್ಟೇ ಆಸಕ್ತಿಯಿಂದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಮುರುಳೀ ಕೃಷ್ಣಪ್ಪ, ಎನ್.ಗೋವಿಂದರಾಜು, ಗಂಗಣ್ಣ, ಕೆ.ಎ.ದೇವರಾಜು, ಧನಿಯಕುಮಾರ್, ಲಕ್ಷ್ಮಿನಾರಾಯಣ್, ಕೊಟ್ಟ ಶಂಕರ್, ಪಿ.ಮೂರ್ತಿ, ಡ್ಯಾಗೇರಹಳ್ಳಿ ವಿರೂಪಾಕ್ಷ, ನಾರಾಯಣಗೌಡ, ಟಿ.ಪಿ.ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.