ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ಹಿಂದುಪರ ಸಂಘಟನೆಗಳ ಒಕ್ಕೂಟದಿಂದ ಪತ್ರಿಕಾಗೋಷ್ಠಿ ನಡೆಸಿ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರ ಕಪಟ ಹಿಂದು ಮುಖವಾಡವನ್ನು ಹಾಕಿಕೊಂಡಿದ್ದಾರೆ, ತಾನೊಬ್ಬ ಕಟ್ಟಾ ಹಿಂದು ಎಂದು ಹೇಳಿಕೊಂಡು ಓಡಾಡುವ ಈ ಶಾಸಕರ ನಿಜ ಬಣ್ಣವನ್ನು ಹಿಂದುಪರ ಸಂಘಟನೆಗಳ ಮುಖಂಡರು ಬಯಲು ಮಾಡಿದ್ದಾರೆ.
ಪತ್ರಿಕಾಗೋಷ್ಠಿಯ ಸಾರಾಂಶವೆಂದರೆ ತುಮಕೂರಿನ ಹೃದಯ ಭಾಗದಲ್ಲಿರುವ ಜೆ.ಸಿ ರಸ್ತೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಮತ್ತು ಸಾರ್ವಜನಿಕ ಉದ್ಯಾನವನವು ಸುಮಾರು 1 ಎಕರೆಗಿಂತಲೂ ಅಧಿಕ ವಿಸ್ತೀರ್ಣವಿದ್ದು, ಸದರಿ ಜಾಗವು ಸಾವಿರಾರು ಕೋಟಿ ಬೆಲೆ ಬಾಳುವ ಸಾರ್ವಜನಿಕರ ಆಸ್ತಿಯಾಗಿರುತ್ತದೆ. 1950ರಲ್ಲಿ ತುಮಕೂರು ಟೌನ್ ಮುನ್ಸಿಪಲ್ ವತಿಯಿಂದ ವಿನ್ಯಾಸಗೊಳಿಸಿದ ಹೊಸಮಂಡಿ ಲೇಔಟಿನಲ್ಲಿ ಸದರಿ ಜಾಗವನ್ನು ಪಾರ್ಕ್ ಏರಿಯಾಗಾಗಿ ಮೀಸಲಿಟ್ಟಿರುತ್ತಾರೆ. ದಿನಾಂಕ: 31-3-2021 ರಂದು ಸ್ಥಳೀಯ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ನೇತೃತ್ವದಲ್ಲಿ ಮತ್ತು ಅಂದಿನ ಬಿಜೆಪಿ ಸರ್ಕಾರ ಸದರಿ ಜಾಗವನ್ನು ಮಂಗಳೂರಿನ ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್, ಉ.ಕೆ.ಮನೋ ಟಿಂಬರ್ಸ್ ಮತ್ತು ಮಹಮ್ಮದ್ ಇಬ್ರಾಹಿಂ, ಆರ್.ಎಚ್.ಕನಸ್ಟ್ರಕ್ಷನ್ಸ್ ಇವರಿಗೆ ಭ್ರಷ್ಟ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಶಾಮೀಲಾಗಿ ಕಾನೂನು ಬಾಹಿರವಾಗಿ ಮಾಲ್ ನಿರ್ಮಿಸಲು ನೀಡಿದ್ದರು ಎಂದು ಹಿಂದುಪರ ಸಂಘಟನೆಗಳ ಮುಖಂಡ ಮಂಜುಭಾರ್ಗವ್ ಹೇಳಿದರು.
ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಸೂಚನೆಯಂತೆ ಸದರಿ ಜಾಗದಲ್ಲಿರುವ ಮಂದಿರವನನ್ನು ತುಮಕೂರು ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳು ದಿನಾಂಕ: 19 ಜೂನ್ 2021 ರಂದು ರಾತ್ರೋರಾತ್ರಿ ನೆಲಸಮ ಮಾಡುತ್ತಿದ್ದ ವೇಳೆ; ತುಮಕೂರು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಪ್ರಮುಖರಾದ ಮಂಜು ಭಾರ್ಗವರವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಸದರಿ ದೇವಸ್ಥಾನ ಧ್ವಂಸಗೊಳಿಸುವುದನ್ನು ತಡೆದಿದ್ದು, ಅಂದಿನಿಂದಲೂ ಮಂದಿರ ಮತ್ತು ಉದ್ಯಾನವನದ ರಕ್ಷಣೆಗಾಗಿ ಕಾನೂನಾತ್ಮಕ ಹೋರಾಟವನ್ನು ಭಜರಂಗದಳವು ಮಾಡುತ್ತಿದೆ ಎಂದರಲ್ಲದೇ.
ಬಿಜೆಪಿ ಶಾಸಕರಾದ ಜ್ಯೋತಿ ಗಣೇಶ್‌ರವರ ಅಪ್ತರು ಹಾಗು ಅಂದಿನ ತುಮಕೂರು ಮಹಾನಗರ ಪಾಲಿಕೆಯ ಸದಸ್ಯರೊಬ್ಬರ ಮುಖಾಂತರ ಭಜರಂಗದಳದ ಪ್ರಮುಖರಾದ ಮಂಜು ಭಾರ್ಗವ್ ರವರಿಗೆ 2021ರಲ್ಲೇ ಅನೇಕ ಬಾರಿ ಕೋಟಿಗಟ್ಟಲೆ ಹಣದ ಆಮಿಷ ಒಡ್ಡಿ ಸದರಿ ಹೋರಾಟದಿಂದ ಹಿಂದೆ ಸರಿಯಲು ಒತ್ತಡ ಹೇರಿದ್ದರು. ಆದರೆ ಮಂಜು ಭಾರ್ಗವ್ ರವರು ಬಿಜೆಪಿಯವರ ಯಾವುದೇ ಆಮಿಷಗಳಿಗೆ ಒಳಗಾಗದೇ ಮಂದಿರದ ಉಳಿವಿಗಾಗಿ ಹಾಗೂ ಲ್ಯಾಂಡ್ ಜಿಹಾದಿನ ವಿರುದ್ಧದ ಹೋರಾಟವನ್ನು ತೀವ್ರವಾಗಿ ಮುಂದುವರೆಸಿದರು ಎಂದು ಶ್ರೀರಾಮಸೇನೆಯ ಮುಖಂಡರಾದ ಪ್ರಮೋದ್ ಮುತಾಲಿಕ್ ಹೇಳಿದರಲ್ಲದೇ.
ತದನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದಿನಾಂಕ: 18-07-2024 ರಂದು ಪುನಃ ಮಂಗಳೂರಿನ ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್, ಉ.ಕೆ.ಮನೋ ಟೆಂಬರ್ಸ್ ಮತ್ತು ಮಹಮ್ಮದ್ ಇಬ್ರಾಹಿಂ ಆರ್.ಎಚ್ ಕನಸ್ಟ್ರಕ್ಷನ್ ರವರಿಗೆ ಕಾನೂನು ಬಾಹಿರವಾಗಿ ಜನ ವಿರೋಧಿ ಯೋಜನೆಯನ್ನು ಅನುಷ್ಠಾನಗೊಳಿಸಲು ಅವಕಾಶ ಮಾಡಿಕೊಟ್ಟರು. ಈ ವಿಷಯ ತಿಳಿದ ತುಮಕೂರು ವಿಹೆಚ್ಪಿ ಭಜರಂಗದಳದ ಕಾರ್ಯಕರ್ತರು ಮಂದಿರ ಮತ್ತು ಉದ್ಯಾನವನದ ಜಾಗವನ್ನು ಉಳಿಸಲು ತೀವ್ರವಾದ ಹೋರಾಟವನ್ನು ಮಾಡಿದ್ದು, ಇದರ ಪರಿಣಾಮವಾಗಿ ಸದರಿ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿತು ಎಂದು ಆರೋಪಿಸಿದರು.
ತದನಂತರ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಮತ್ತು ರಾಜ್ಯ ಸರ್ಕಾರ ಸದರಿ ಹೋರಾಟದಲ್ಲಿ ಮುಂಚುಣಿಯಲಿದ್ದ ಭಜರಂಗದಳದ ಮಂಜು ಭಾರ್ಗವ ಮತ್ತು ಕಾರ್ಯಕರ್ತರ ಮೇಲೆ ದುರುದ್ದೇಶಪೂರ್ವಕವಾಗಿ ತುಮಕೂರಿನ ಬೇರೆ ಬೇರೆ ಪೋಲೀಸ್ ಠಾಣೆಗಳಲ್ಲಿ ಸುಳ್ಳು ದೂರುಗಳನ್ನು ದಾಖಲಿಸಿ, ನಮ್ಮ ಹೋರಾಟಗಳನ್ನು ಧಮನಿಸಲು ಯತ್ನಿಸುತ್ತಿದ್ದು, ಮಂಜು ಭಾರ್ಗವ್ ಮತ್ತು ಕಾರ್ಯಕರ್ತರಿಗೆ ರೌಡಿ ಶೀಟನ್ನು ತೆರೆಯುವುದಾಗಿ ಪೋಲೀಸರ ಮೂಲಕ ನೋಟೀಸುಗಳನ್ನು ಸಹ ನೀಡಿದರು. ಇಷ್ಟಕ್ಕೆ ಸುಮ್ಮನಾಗದೆ ಕಾರ್ಯಕರ್ತರಿಗೆ ಇನ್ನಿಲ್ಲದ ಕಿರುಕುಳ ನೀಡಲು ತುಮಕೂರಿನ ಕ್ಯಾತ್ಸಂದ್ರ ಪೋಲಿಸ್ ಠಾಣೆಯಲ್ಲಿ ಕಾರ್ಯಕರ್ತರ ಮೇಲೆ ದಾಖಲಿಸಿದ್ದ ಸುಳ್ಳು ಪ್ರಕರಣವೊಂದರಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ತನ್ನ ಪ್ರಭಾವ ಬಳಸಿ, ಇಬ್ಬರು ಬಿಜೆಪಿ ಕಾರ್ಯಕರ್ತರ ಹೆಸರುಗಳನ್ನು ದೋಷಾರೋಪ ಪಟ್ಟಿಯಲ್ಲಿ ತೆಗೆಸಿ, ಭಜರಂಗದಳದ ಸಕ್ರಿಯ ಕಾರ್ಯಕರ್ತರ ಹೆಸರುಗಳನ್ನು ಚಾರ್ಜ್ ಶೀಟ್‌ನಲ್ಲಿ ಸೇರಿಸಿದ್ದಾರೆ ಎಂದು ತಿಳಿಸಿದರು.
ಇಂತಹಾ ಅನೇಕ ಕಿರುಕುಳದ ನಂತರವೂ ಭಜರಂಗದಳದ ಕಾರ್ಯಕರ್ತರು ಸದರಿ ಹೋರಾಟದಿಂದ ಹಿಂದೆ ಸರಿಯದೇ ಇದ್ದಾಗ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಮತ್ತು ರಾಜ್ಯ ಸರ್ಕಾರ ಕಾರ್ಯಕರ್ತರ ಮೇಲೆ ಬಹುದೊಡ್ಡ ಷಡ್ಯಂತ್ರ್ಯ ನಡೆಸಿ ಕೊಲೆ ಯತ್ನದಂತಹ ಸುಳ್ಳು ಪ್ರಕರಣಗಳನ್ನೂ ಸಹ ದಾಖಲಿಸಿದರು.
ಈ ರೀತಿಯಾದಂತಹ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಪರೋಕ್ಷವಾಗಿ ಕಾರ್ಯಕರ್ತರ ಮೇಲೆ ಒತ್ತಡ ಹೇರಿ ಎಲ್ಲಾ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಿ ಮಂದಿರವನ್ನು ಧ್ವಂಸಗೊಳಿಸಿ ಜನ ವಿರೋಧಿ ಯೋಜನೆಯನ್ನು ಮತ್ತೆ ಕಾರ್ಯರೂಪಕ್ಕೆ ತರಲು ಸಂಚು ರೂಪಿಸಿರುವ ಬಗ್ಗೆ ಗುಪ್ತ ಮಾಹಿತಿ ಬಂದಿದ್ದು, ಈ ಮೇಲಿನ ಎಲ್ಲಾ ಹಂತಗಳಲ್ಲೂ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಹಿನ್ನೆಲೆಯಲ್ಲಿ ಇರುವುದು ಸ್ಪಷ್ಟವಾಗಿದೆ ಎಂದರು.
ಬಿಜೆಪಿ ಶಾಸಕ ಜ್ಯೋತಿ ಗಣೇಶನ ಹಿಂದೂ ವಿರೋಧಿ ನೀತಿಯನ್ನು ಹಿಂದೂಪರ ಸಂಘಟನೆಗಳ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ. ಮಂದಿರ ಮತ್ತು ಉದ್ಯಾವನದ ರಕ್ಷಣೆಗಾಗಿ ಕಾನೂನಾತ್ಮಕ ಹಾಗೂ ಸಂಘರ್ಷದ ಹೋರಾಟಗಳನ್ನು ಮಾಡಿಯೇ ತೀರುತ್ತೇವೆ. ಇದಕ್ಕಾಗಿ ನಮ್ಮ ಬಲಿದಾನವಾದರೂ ಸರಿ. ಜನಪ್ರತಿನಿಧಿಗಳು ಇಂತಹ ಹಿಂದೂ ವಿರೋಧಿ ನೀತಿಗಳನ್ನು ಈ ಕೂಡಲೇ ಕೈ ಬಿಡದಿದ್ದರೆ, ಸಮಸ್ತ ಹಿಂದೂ ಸಮಾಜ ಹಾಗೂ ಹಿಂದೂಪರ ಸಂಘಟನೆಗಳ ಒಕ್ಕೂಟವು ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು ನೀಡುತ್ತದೆ.
ತುಮಕೂರು ಜಿಲ್ಲಾಡಳಿತ ಹಾಗು ರಾಜ್ಯ ಮತ್ತು ಕೇಂದ್ರ ಸರ್ಕಾರ ಸದರಿ ಜನವಿರೋಧಿ ಯೋಜನೆಯನ್ನು ರದ್ದು ಪಡಿಸಿ, ಮಂದಿರ ಮತ್ತು ಉದ್ಯಾನವನವನ್ನು ಸಂರಕ್ಷಿಸಿ, ಸದರಿ ಯೋಜನೆಯ ಪ್ರಕ್ರಿಯೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಬೇಕಾಗಿ ಆಗ್ರಹ ಪೂರಕವಾಗಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಿಂದುಪರ ಸಂಘಟನೆಗಳ ಮುಖಂಡರಾದ ಧರ್ಮಂದ್ರ ಜೀ, ಮಾರಣ್ಣ ಪಾಳೇಗಾರ್, ಮುನೇಗೌಡ್ರು, ಹಿಮೇಶ್ ದೇಸಾಯಿ, ಗಜೇಂದ್ರ ಸಿಂಗ್, ವೆಂಕಟೇಶ್, ಸುನೀಲ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.