ತುಮಕೂರು: ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮತ್ತು ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದ್ದ ಅಧಿಕಾರಿಗಳು ಭ್ರಷ್ಟಾಚಾರದ ಹಾದಿ ಹಿಡಿದಿದ್ದು, ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನಸಿಂಧುಸ್ವಾಮಿ ಆರೋಪಿಸಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಅಂತರ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದ ಅಂಗವಾಗಿ ತಹಸೀಲ್ದಾರ್ಗೆ ತಾಲ್ಲೂಕು ಕಛೇರಿಯನ್ನು ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಮಾಡುವಂತೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವಂತೆ ಆಗ್ರಹ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಾಲೂಕು ಕೇಂದ್ರಕ್ಕೆ ಹಲವು ಸಮಸ್ಯೆಗಳನ್ನು ಹೊತ್ತುಕೊಂಡು ಬರುವ ಜನಸಾಮಾನ್ಯರ ಕೆಲಸ ಮಾಡಿಕೊಡುತ್ತಿಲ್ಲ. ದಿನನಿತ್ಯ ಕಚೇರಿಗೆ ಅಲೆದರೂ ಬಡವರ ಕೆಲಸಗಳು ಆಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ಜನಸಾಮಾನ್ಯರಿಂದ ಹಣ ಪಡೆದು ಕೆಲಸ ಮಾಡಿ ಕೊಡುತ್ತಿದ್ದಾರೆ. ನೇರವಾಗಿ ಕಚೇರಿಗೆ ಭೇಟಿ ನೀಡಿ ಕೆಲಸ ಮಾಡಿಕೊಡಲು ಮನವಿ ಸಲ್ಲಿಸಿದರೆ ಯಾವುದೇ ಕೆಲಸಗಳು ಆಗುವುದಿಲ್ಲ. ಆದರೆ, ಮಧ್ಯವರ್ತಿಗಳು ಕೈ ಹಾಕಿದ ಕೆಲಸಗಳು ಕಚೇರಿಗಳಲ್ಲಿ ಕೆಲವೇ ನಿಮಿಷಗಳಲ್ಲಿ ಮಾಡಿಕೊಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಇತ್ತೀಚೆಗೆ ಜಮೀನಿನ ದಾಖಲೆ ಮತ್ತು ಸರ್ಕಾರದ ಯೋಜನೆಗಳಡಿ ಲಾಭ ಪಡೆಯಲು ಪಲಾನುಭವಿಯೊಬ್ಬರು ಅರ್ಜಿ ಸಲ್ಲಿಸಿದರೆ, ದಾಖಲೆ ಸರಿಯಾಗಿಲ್ಲ, ಹೊಂದಾಣಿಕೆಯಾಗುತ್ತಿಲ್ಲ ಎಂಬ ನಾನಾ ಕಾರಣ ನೀಡಿ ತಿಂಗಳಾನುಗಟ್ಟಲೆ ಕಚೇರಿಗೆ ಅಲೆಯುವಂತೆ ಮಾಡಿ ಕೊನೆಗೆ ಕೆಲಸವನ್ನೇ ಮಾಡಿ ಕೊಟ್ಟಿಲ್ಲ. ಸರ್ಕಾರ ಜನರ ಶ್ರೆಯೋಭಿವೃದ್ಧಿಗಾಗಿ ಜಾರಿಗೊಳಿಸುವ ಹಲವು ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ತಲುಪಿಸಬೇಕಾದ ಅಧಿಕಾರಿಗಳೇ ಜನರ ದಿಕ್ಕು ತಪ್ಪಿಸುತ್ತಿದ್ದು, ನಾನಾ ಸಬೂಬು ಹೇಳು ಸಾಗ ಹಾಕುತ್ತಿದ್ದಾರೆ ಎಂದರು.
ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಗುತ್ತಿದೆ, ಈ ಬಗ್ಗೆ ಕೆಆರ್ಎಸ್ ಪಕ್ಷ ಹಲವು ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆ, ಹಿರಿಯ ಅಧಿಕಾರಿಗಳಿಗೆ ಪತ್ರಗಳನ್ನು ನೀಡಿ , ಏಕಾಏಕಿ ಕಚೇರಿಗೆ ನುಗ್ಗಿ ತಪ್ಪಿತಸ್ಥರನ್ನು ಹಿಡಿದರೂ ಅಂಥವರಿಗೆ ಸೂಕ್ತ ಶಿಕ್ಷೆಯಾಗುತ್ತಿಲ್ಲ. ಸರ್ಕಾರದಿಂದ ಯೋಜನೆಯಡಿ ಪಲಾನುಭವಿಯಾಗಬೇಕಾದರೂ ಅಧಿಕಾರಿಗಳಿಗೆ ಇಂತಿಷ್ಟು ಲಂಚ ಕೊಟ್ಟೇ ಪಲಾನುಭವಿಯಾಗಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ದೂರಿದರು.
ಹೊಂದಾಣಿಕೆ ಕೊರತೆ, ಕಚೇರಿಯಲ್ಲಿ ಯಾವುದಾದರು ದಾಖಲೆ ಕುರಿತು ಮಾಹಿತಿ ಮತ್ತು ಸೌಲಭ್ಯ ಪಡೆಯಲು ಹೋದರೆ ತಹಸೀಲ್ದಾರ್ ಆದೇಶ ಮಾಡಿದ್ದರೂ ಸಹ ಕೆಳ ಹಂತದ ನೌಕರರು ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವು ಬಾರಿ ರೆಕಾರ್ಡ್ ರೂಮ್ನಲ್ಲಿ ದಾಖಲೆ ಸರಿ ಇದ್ದರೂ ಸಹ ಅದನ್ನು ಅಧಿಕಾರಿಗಳ ಮಟ್ಟಕ್ಕೆ ಕೊಟ್ಟಿರುವುದಿಲ್ಲ. ದಾಖಲೆ ಮತ್ತೀತರೆ ಅರ್ಜಿ ಇಲ್ಲೇ ಇಟ್ಟುಕೊಂಡು ಪಲಾನುಭವಿಗಳಿಗೆ ಅಧಿಕಾರಿಗಳು ಸಹಿ ಹಾಕಬೇಕು, ಓಕೆ ಮಾಡಬೇಕು ಎಂದೇಲ್ಲ ಹೇಳಿ ಜನರಿಗೆ ಸ್ವಲ್ಪ ದಿನ ಯಾಮಾರಿಸಿ ನಂತರ ಅದಕ್ಕೆ ಸಬೂಬು ಕಟ್ಟಿ ತಿರಸ್ಕಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಜ್ಞಾನಸಿಂಧುಸ್ವಾಮಿ ತಿಳಿಸಿದರು.
ಇದೇ ಸಂಧರ್ಭದಲ್ಲಿ ಕೆ ಆರ್ ಎಸ್ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳಾದ ರಘುನಂದನ್ , ಚನ್ನಯ್ಯ ,ಬೈರೇಶ್ ಮುಂತಾದವರಿದ್ದರು.