ಕನ್ನಡ ನಾಡಿನ ವೀರ ವನಿತೆ ಒನಕೆ ಒಬವ್ವ

 

 

 

 

 

ಅಕ್ಕಿಯೊಳಗನ್ನವ ಮೊದಲಾರು ಕಂಡವರು ಅಕ್ಷರದ ಬರಹಕ್ಕೆ ಮೊದಲಿಗನಾರು
ಲೆಕ್ಕವಿರಿಸಿಲ್ಲ ಜಗ ತನ್ನಾಧಿ ಬಂಧುಗಳ
ದಕ್ಕುವುದೆ ಜಸ ನಿನಗೆ ಮಂಕುತಿಮ್ಮ
ಎಂದರು ನಮ್ಮ ಡಿವಿಜಿ.

 

 

 

 

ಅಕ್ಕಿಯಿಂದ ಅನ್ನವನ್ನು ಮಾಡಿ ಉಂಡರೆ ಚಂದವೆಂದು ಕಂಡವರು ಮೊದಲಿಗರು ಯಾರೋ ಗೊತ್ತಿಲ್ಲ, ಅಕ್ಷರ ಹೀಗೆ ಬರೆಯಬೇಕು ಎಂದು ಗೊತ್ತು ಪಡಿಸಿದವರು ಯಾರು ತಿಳಿದಿಲ್ಲ, ಮೊದಲ ಬಾರಿಗೆ ಲೋಕೋಪಾಕಾರ ಮಾಡಿದ ವ್ಯಕ್ತಿಗಳನ್ನೇ ಜನರು ಪರಿಗಣನೆಗೆ ತೆಗೆದುಕೊಂಡಿಲ್ಲದಿರುವಾಗ ನಿನಗೆ ಕೀರ್ತಿ ದೊರಕುವುದೆಂದು ಹೇಗೆ ಭಾವಿಸುತ್ತೀಯಾ ಎಂದು ಕೇಳಿದ್ದಾರೆ ನಮ್ಮ ಡಿವಿಜಿ ಗುಂಡಪ್ಪನವರು. ಅನಾದಿಕಾಲದಿಂದ ನಮ್ಮ ನಾಡು ನುಡಿ ಸಂಸ್ಕೃತಿ ಪರಂಪರೆಯನ್ನು ಕಟ್ಟಿ ಬೆಳೆಸಿದ ಮತ್ತು ಮುಂದಿನ ಪೀಳಿಗೆಗೆ ತಮ್ಮದೆಲ್ಲವನ್ನು ನೀಡಿದ ಮಹಾಚೇತನಗಳ ಹಾಗೂ ನಮ್ಮ ದೇಶದ ಹಿರಿಮೆ ಗರಿಮೆಗಳನ್ನು ಜಗತ್ತಿನ ಉತ್ತುಂಗದ ಶಿಖರದಲ್ಲಿ ನಿಲ್ಲಿಸಿ, ಮೌಲ್ಯಾದರ್ಶಗಳ ಪ್ರತಿಕವಾಗಿ ಜೀವನ ಸವೆಸಿದ ಮಹನೀಯರಲ್ಲಿ ಒಬ್ಬರು ನಮ್ಮ ಮಾತೆ ಒನಕೆ ಓಬವ್ವ.

 

 

 

 

 

ಸತ್ತರು ಬದುಕಿಹ ಒಬವ್ವ
ಚಿತ್ರದುರ್ಗದ ಓಬವ್ವ
ಎಂದೆಂದಿಗೂ ನೀ ಬಾಳವ್ವ
ನಮ್ಮ ಮನ ಮನೆಗಳಲ್ಲಿ

 

 

 

 

 

ಏಕೆಂದರೆ ದೇಶದ ನವ ಪೀಳಿಗೆಗೆ ಇಂಥ ಅನೇಕ ಮಹಾನ್ ಚೇತನಗಳ ಆದರ್ಶಗಳು ಪ್ರೇರಣೆಯಾಗುತ್ತಿವೆ, ಇವರುಗಳು ತೋರಿಸಿದ ಸನ್ಮಾರ್ಗದಲ್ಲಿ ಮುನ್ನಡೆಯುವಂತಾದರೆ ದೇಶದ ಸರ್ವತೋಮುಖ ಬೆಳವಣಿಗೆ ಸಾಧ್ಯ ಎನ್ನಬಹುದು. ಸೈನ್ಯದಲ್ಲಿ ಸಣ್ಣ ಕೆಲಸಕ್ಕೆ ಸೇರಿ ಕಡೆಗೆ ರಾಜನನ್ನೇ ಮೂಲೆಯಲ್ಲಿ ಕೂಡಿಸಿ ಸರ್ವಾಧಿಕಾರಿಯಾಗಿ ರಾಜ್ಯವನ್ನಾಳಿದ ಬುದ್ಧಿವಂತ, ಸೈನ್ಯದ ಬಲದಿಂದ, ಬುದ್ಧಿಯ ಬಲದಿಂದ ಹಲವಾರು ರಾಜರನ್ನು ಸೋಲಿಸಿ ಮೆರೆದವ ಸುಲ್ತಾನ ಹೈದರಾಲಿ. ಇಂತಹ ಮಹಾನ್ ಬುದ್ಧಿವಂತ ವ್ಯಕ್ತಿ ಒಬ್ಬ ಸಾಧ್ವಿ ಹೆಣ್ಣಿನ ಮುಂದೆ ಸೋಲನ್ನ ಒಪ್ಪಬೇಕಾಯಿತು ಆ ಸಾದ್ವಿ ಹೆಣ್ಣು ಮಗಳೇ ನಮ್ಮ ಒನಕೆ ಓಬವ್ವ. ಈ ಕಥೆ ಸುಮಾರು 200 ವರ್ಷಗಳ ಹಿಂದಿನದ್ದು ವೀರಮದಕರಿ ನಾಯಕ ಚಿತ್ರದುರ್ಗದ ಪಾಳೇಗಾರನಾಗಿದ್ದಾಗ ಅದು ಸರಿ ಸುಮಾರು (1753 ರಿಂದ 1778) ಇರಬಹುದು.

 

 

 

 

 

 

 

ಚಿತ್ರದುರ್ಗದ ಹೆಸರನ್ನು ಕೇಳಿದ ಕೂಡಲೇ ನೆನಪಿಗೆ ಬರುವುದು ನಮ್ಮ ಏಳು ಸುತ್ತಿನ ಕೋಟೆ ಎಷ್ಟೇ ವರ್ಷಗಳು ಕಳೆದರೂ ಕೂಡ ಕೋಟೆ ಕೊತ್ತಲುಗಳನ್ನು ಕಂಡರೆ ಅಲ್ಲಿ ರಾಜ್ಯವಾಳಿದ ಪಾಳೆಗಾರರ ಪರಾಕ್ರಮ, ಪ್ರತಾಪಗಳು, ಸುರುಳಿ ಸುರುಳಿಯಾಗಿ ಮನಸ್ಸಿಗೆ ಸುಳಿಯುತ್ತವೆ. ಅಬೇದ್ಯವಾದ ಈ ಏಳು ಸುತ್ತಿನ ಕೋಟೆಗೆ ಕಂಡು ಕಾಣದಂತೆ ಇರುವ ಒಂದು ಕಳ್ಳ ದಾರಿ ಆ ಇಕಟ್ಟಾದ ಕಳ್ಳದಾರಿಯೇ ಸುಪ್ರಸಿದ್ಧವಾದ ‘ಒನಕೆಯ ಕಿಂಡಿ’ ಚಿತ್ರದುರ್ಗದ ಕೋಟೆಯ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನೇ ಅರ್ಪಿಸಿದ ಸಾವಿರಾರು ಗಂಡುಗಲಿಗಳ ಮಧ್ಯೆ ತನ್ನ ಹೆಸರನ್ನು ಉಳಿಸಿ ಹೋಗಿರುವ ಹೆಣ್ಣುಗಲಿ ಮಾತೆ ಒನಕೆ ಓಬವ್ವ.

 

 

 

 

 

ಹೈದರಾಲಿಗೂ ಮತ್ತು ಚಿತ್ರದುರ್ಗದ ಪಾಳೇಗಾರರಿಗೂ ಹಾಗಾಗ ವೈಮನಸುಗಳು ಉಂಟಾಗುತ್ತಲೆ ಇದ್ದವು,ಹೀಗಿರುವಾಗ ಒಮ್ಮೆ ಯೋಚಿಸಿದ ಕೋಟೆಯನ್ನು ಯಾರ ಸಂಪರ್ಕವಿಲ್ಲದಂತೆ ನೋಡಿಕೊಂಡರೆ, ಸೋಲನ್ನು ಒಪ್ಪಿಕೊಂಡು ಮದಕರಿ ನಾಯಕ ಶರಣಾಗಬಹುದೆಂದು ತಿಳಿದ,ಮರಾಠರು ಹಾಗೂ ಇತರೆ ಯಾವ ರಾಜರ ಸಹಾಯವು ಮದಕರಿ ನಾಯಕನಿಗೆ ದೊರೆಯದಂತೆ ಭೇದೋಪಾಯ ಮಾಡಿ ಯಶಸ್ಸು ಕಂಡ. ಆಗ ನಿರ್ಧರಿಸಿದ ಈ ರೀತಿಯ ಮೋಸದಿಂದಲೇ ಈ ಕೋಟೆಯನ್ನು ಭೇದಿಸಬೇಕೆಂದು, ಹೀಗೆ ಅನೇಕ ಉಪಾಯಗಳನ್ನು ಮಾಡಿ ದ್ರೋಹಿಗಳು ಯಾರಾದರೂ ಬಂದು ಸುಳಿವು ಕೊಡಬಹುದೆಂದು ನೋಡಿದ ಆದರೆ ಯಾರು ಸಹ ಬರಲಿಲ್ಲ, ಕೊನೆಗೆ ಒಂದು ಯೋಚನೆ ಮಾಡಿದ ಕಾವಲಿನಲ್ಲಿ ಕೋಟೆ ಹೊರಗಿನ ಸಂಪರ್ಕವಿಲ್ಲದೆ ಹೇಗೆ ಬದುಕಲು ಸಾಧ್ಯ, ಇಲ್ಲ ಹೆದ್ದಾರಿಯ ಹೊರತಾಗಿ ಕಳ್ಳ ದಾರಿ ಇರಬಹುದು ಎಂದು ತಿಳಿದ ಗುಪ್ತಚಾರರನ್ನು ಕರೆದು ಆ ಕಳ್ಳ ದಾರಿಯನ್ನು ಪತ್ತೆ ಮಾಡುವಂತೆ ಕಟ್ಟಪ್ಪಣೆ ಮಾಡಿದ.

 

 

 

 

ಒಂದು ಸಂಜೆ ಅಭೇದ್ಯವಾದ ದುರ್ಗದ ಕೋಟೆಯನ್ನು ನೋಡಿ ಹೈದರನ ದಳಪತಿಯೊಬ್ಬನು ಮುಳುಗುತ್ತಿದ್ದ ಸೂರ್ಯನನ್ನು ಕಂಡು ಹೀಗೆ ಹೇಳಿದ, ಈ ಏಳು ಸುತ್ತಿನ ಕೋಟೆಯನ್ನು ವಶಪಡಿಸಿಕೊಳ್ಳಬೇಕಾದರೆ ಮತ್ತೆ ಏಳು ಬಾರಿ ಜನ್ಮವೆತ್ತಿ ಬರಬೇಕೆನೋ ಎಂದು.

 

 

 

 

 

ತಟ್ಟನೆ ಹತ್ತಿರ ಬಂದ ಕುದುರೆ ಸವಾರನೊಬ್ಬ ಸಂತಸದ ಸುದ್ದಿಯನ್ನು ತಂದಿದ್ದೇನೆ ಎಂದ
ದಳಪತಿ ಪಟ್ಟನೆ ಎದ್ದು ನಿಂತು ತುಂಬಾ ಕುತೂಹಲದಿಂದ ಕೇಳಿದ ಏನದು…?
ಆಗ ಕುದುರೆ ಸವಾರ ಹೇಳಿದ ಮೊಸರು ಮಾರುವ ಒಬ್ಬ ಹೆಂಗಸು ಹೊರಗಡೆಯಿಂದ ಆ ಮೂಲೆಯ ಕಡೆಗೆ ಮೆಲ್ಲ ಮೆಲ್ಲನೆ ಬಂದಳು ಹತ್ತ ಹಿತ್ತ ತಿರುಗಿ ನೋಡಿ ಯಾರ ಸುಳಿವು ಇಲ್ಲವೆಂದು ದೃಢವಾದ ಮೇಲೆ ಅಲ್ಲಿಂದ ಬಂಡೆಗಳ ಮಧ್ಯೆ ನಸುಳಿ ಕಣ್ಮರೆಯಾದಳು ಎಂದ, ಆಗ ಹೈದರನ ದಳಪತಿಗೆ ಖುಷಿಯಾಗಿ ಬಹುಮಾನವಿತ್ತು ಕಳುಹಿಸಿದ.
ಇನ್ನೂ ಈ ಕೋಟೆಗೆ ಉಳಿಗಾಲವಿಲ್ಲ ಎಂದು ತಡ ಮಾಡದೆ ಹೈದರನ ಸಹಜರರು ಎಚ್ಚೆತ್ತು ಮುಂದಿನ ನಡೆಯಿಟ್ಟರು ನವಾಬರ ಅಪ್ಪಣೆಯ ಮೇರೆಗೆ ಕಳ್ಳ ಕಿಂಡಿಯ ಬಗ್ಗೆ ಖಚಿತಪಡಿಸಿಕೊಂಡರು.

 

 

 

 

ಆ ಕಳ್ಳ ಕಿಂಡಿಯ ಪಕ್ಕದಲ್ಲಿ ನೀರಿನ ದೋಣಿ ಇತ್ತು ಅದಕ್ಕೆ ಸಮೀಪದಲ್ಲಿಯೇ ಕಹಳೆಯ ಬತೇಲಿಯ ಕಾವಲುಗಾರನ ಹಟ್ಟಿ, ಹಗಲು ಇರುಳು ಕಹಳೆ ಬತೇರಿಯ ಮೇಲೆ ಬಲವಾದ ಕಾವಲು ಇರುತ್ತಿತ್ತು, ಮತ್ತು ಬ್ರಹ್ಮ ಶ್ರದ್ಧೆಯಿಂದ ಆ ಕೆಲಸವನ್ನು ನಡೆಸಿಕೊಂಡು ಬಂದಿದ್ದ ಆ ಕಾವಲುಗಾರ
ಆ ಕಾವಲುಗಾರನ ಹೆಂಡತಿ ನಮ್ಮ ವೀರ ಒನಿತೆ ಓಬವ್ವ.

 

 

 

 

ಒಂದು ಸಂಜೆ ಕೃಷ್ಣ ಪಕ್ಷವಾದದರಿಂದ ಚಂದ್ರನ ಬೆಳಕೆ ಇಲ್ಲ , ಗಳಿಗೆ ಗಳಿಗೆ ಕತ್ತಲೆ ಏರತೊಡಗಿದೆ ಕಹಳೆಯ ಬತೇರಿ ಕಾವಲುಗಾರನಾದ ಮುದ್ದಹನುಮಪ್ಪ ಕತ್ತಲಾಗುವ ಮುನ್ನ ಊಟ ಮಾಡಿ ಬರಲು ಹಟ್ಟಿಗೆ ಬಂದ, ಗಂಡನು ಬಳಲಿ ಊಟಕ್ಕೆ ಬರಲು, ಓಬವ್ವ ಕೂಡಲೇ ಊಟಕ್ಕೆ ಬಡಿಸಿ ನೀರು ಕೊಡಲು ನೋಡಿದಳು, ಮನೆಯಲ್ಲಿ ನೀರಿಲ್ಲ, ನೀರು ತರಲು ದೋಣಿಗೆ ಬಂದಳು ಸುತ್ತಲೂ ನಿಶಬ್ದ ನೀರು ತುಂಬಿಕೊಂಡು ಒರಟಾಗ ಪಿಸು ಪಿಸು ಶಬ್ದ ಕೇಳಿತು , ಓಬವ್ವ ಆಶ್ಚರ್ಯವಾಗಿ ನೋಡಿದಳು ಮರು ಕ್ಷಣದಲ್ಲಿಯೇ ತಿಳಿದಳು ಶತ್ರುವಿನ ಒಳ ಸಂಚು ಎಂದು. ಕೆಲಸ ಕೆಟ್ಟಿದೆ ಎಂದು ಕೂಡಲೇ ಓಡೋಡಿ ಬಂದು ನೋಡಿದಳು ಬಹುತೃಪ್ತಿಯಿಂದ ಗಂಡ ಊಟ ಮಾಡುತ್ತಿದ್ದ, ಪತಿವ್ರತೆಯಾದ ಆಕೆಗೆ ಮನಸ್ಸು ಬರಲಿಲ್ಲ ಅರ್ಧಕ್ಕೆ ಊಟದಿಂದ ಎಬ್ಬಿಸಲು ಆದರೂ ಕಾಡಿಸಿತು ಕರ್ತವ್ಯಕ್ಕೆ ಲೋಪ ಬಂದಿದೆ ಎಂಬ ಶಂಕೆ, ಒಂದು ನಿಮಿಷ ಏನನ್ನೋ ಯೋಚಿಸಿದಳು ಮುಖದಲ್ಲಿ ಏನೋ ಗೆಲುವು ಮೂಡಿತು, ಕೂಡಲೇ ಮೂಲೆಯಲ್ಲಿದ್ದ ಒನಕೆಯನ್ನು ಹಿಡಿದು ವೀರಗಜ್ಜೆಯನ್ನು ಹಾಕಿ, ಓಬವ್ವ ಕಾಳಿಯಾಗಿ ನಿಂತಳು.

 

 

 

 

 

 

 

ನುಸುಳಿ ಬರುತ್ತಿದ್ದ ಶತ್ರುಗಳ ಸೈನ್ಯವನ್ನು ಸದೆ ಬಡಿದು ಹೆಣದ ರಾಶಿಯನ್ನು ಹಾಕಿದಳು, ಹೆಣಗಳ ರಾಶಿ ಬಣವೆಯಂತಿತ್ತು ನೆತ್ತರಿನ ಹೋಕುಳಿನಲ್ಲಿ ಓಬವ್ವ ಮೈಮರೆತಳು ಆಕೆಯ ಒನಕೆಗೆ ಬಿಡುವೆ ಇರಲಿಲ್ಲ,
ಊಟ ಮುಗಿಸಿ ಬಂದ ಕಾವಲುಗಾರ ಇದನ್ನು ಕಂಡು ಕೂಡಲೇ ಕಹಳೆಯನ್ನು ಊದಿದ, ಸೈನಿಕರೆಲ್ಲರೂ ಅಪಾಯವಾಗಿದೆ ಎಂದು ತಿಳಿದುಕೊಂಡು, ದಾವಿಸಿ ಓಡೋಡಿ ಬಂದರು, ಓಬವ್ವನ ದುರ್ಗಾವತಾರವನ್ನು ಕಂಡು ಎಲ್ಲರೂ ನಡುಗಿದರು ಸುತ್ತಲಿನಿಂದಲೂ ಹೈದರಾಲಿಯ ಸೈನಿಕರು ಸಂಹಾರಕ್ಕಾಗಿ ಮುನ್ನುಗ್ಗಲು ಆರಂಭಿಸಿದರು ಹಿಂದಿನಿಂದ ಹಾದು ಬಂದ ಶತ್ರು ಸೈನಿಕನೊಬ್ಬ ಸಂಚಿನಿಂದ ಓಬವ್ವ ನೆಲಕ್ಕೆ ಉರುಳಿದಳು.

 

 

 

 

ಆದರೂ ಹೈದರಾಲಿ ಸೈನ್ಯವನ್ನು ಮದಕರಿ ನಾಯಕ ಸದೆ ಬಡಿದು ಹಿಮ್ಮಟ್ಟಿಸಿದ ನಂತರ ಅಲ್ಲಿನ ರುತ್ತಾಂತವನ್ನು ಎಲ್ಲ ಕೇಳಿ ತಿಳಿದು ಓಬವ್ವನಂಥ ಹೆಣ್ಣು ಗಲಿಯನ್ನು ಪಡೆದ ನಾವು ಪುಣ್ಯ ಶಾಲಿಗಳೆ ಸರಿ ಎಂದು ಮುಕ್ತ ಕಂಠದಿಂದ ಕೊಂಡಾಡಿದರು. ಸಮಯೋಚಿತ ಸಾಹಸಕ್ಕೆ ಮೆಚ್ಚಿ ಆ ಕಳ್ಳ ದಾರಿಗೆ ಒನಕೆ ಓಬವ್ವನ ಕಿಂಡಿ ಎಂದು ಹೆಸರಿಟ್ಟರು ಆ ಚಿತ್ರದುರ್ಗದ ಪಾಳೇಗಾರರು.

 

 

 

ಸಂಗ್ರಹ

Leave a Reply

Your email address will not be published. Required fields are marked *

error: Content is protected !!