ತುಮಕೂರು : ರಾಜ್ಯದಲ್ಲಿ ಮೀಸಲಾತಿ ಉಳಿವಿಗಾಗಿ ಭಾರತ್ ಬಂದ್‌ಗೆ ಕರೆ ನೀಡಲು ಭೀಮ್ ಆರ್ಮಿ ಸಂಘಟನೆ ಮುಂದಾಗಿದ್ದು ಈ ಕುರಿತು ಮಾನ್ಯ ರಾಷ್ಟ್ರಪತಿಗಳಿಗೆ ತುಮಕೂರು ಜಿಲ್ಲಾಧಿಕಾರಿಗಳ ಮುಖೇನ ಪತ್ರವನ್ನು ರವಾನಿಸಿದ್ದು, ತಮ್ಮ ಬೇಡಿಕೆ ಹಾಗೂ ಮೀಸಲಾತಿ ಜಾರಿಯು ಸರಿಯಾಗಿ ನಡೆಯದೇ ಹೋದಲ್ಲೇ ಭಾರತ್ ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡುತ್ತೇವೆಂದು ಒತ್ತಾಯಿಸಿ ಇಂದು ಭೀಮ್ ಆರ್ಮಿ ಸಂಘಟನೆಯಿಂದ ತುಮಕೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ.
ಭೀಮ್ ಆರ್ಮಿ ಸಂಘಟನೆಯು ನೀಡಿರುವ ಮನವಿ ಪತ್ರದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರಿಂದ ರಚಿತವಾದ ಭಾರತದ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸಂವಿಧಾನದ 340ನೇ ವಿಧಿಯ ಅಧೀನದಲ್ಲಿ 15-4 ಮತ್ತು 16-4ರಲ್ಲಿ ಸ್ಪಷ್ಟವಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವ್ಯಕ್ತಿಗಳಿಗೆ ಮೀಸಲಾತಿಯ ಪ್ರಾತಿನಿಧ್ಯತೆ ನೀಡಲಾಗಿದೆ, ಮೀಸಲಾತಿ ವ್ಯವಸ್ಥೆಯಡಿ ಶೇಕಡಾ 15% ಪರಿಶಿಷ್ಟ ಜಾತಿಯವರಿಗೆ, ಶೇಕಡಾ 7.5% ಪರಿಶಿಷ್ಟ ಪಂಗಡಗಳಿಗೆ ಮತ್ತು ಶೇಕಡಾ 27% ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಮಂಜೂರು ಮಾಡಲಾಗಿದೆಯಾದರೆ ಈ ವರ್ಗಗಳ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯ ಸಮಗ್ರ ಅನುಷ್ಠಾನವನ್ನು ಇವತ್ತಿನವರೆಗೂ ಕೈಗೊಳ್ಳಲಾಗಿಲ್ಲವೆಂದು ತಿಳಿಸಿದ್ದಾರೆ.
ಈ ಕುರಿತು 1 ಆಗಸ್ಟ್ 2024ರಂದು ಮಾನ್ಯ ಸರ್ವೋಚ್ಛ ಮಹಾನ್ಯಾಯಾಲಯದಿಂದ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಲಾಗಿದೆ, ಆ ಆದೇಶವು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪರಿಶೀಲನೆ ನಡೆಸಿ, ಈ ಜಾತಿಗಳಿಗೆ ಮೀಸಲಾತಿಯನ್ನು ನೀಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ. ಈ ವಿಷಯದ ತೀವ್ರತೆಗಿಂತಲೂ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಭಾವನಾತ್ಮಕ ನಷ್ಟವಾಗುತ್ತಿದ್ದು ಇದರಿಂದಾಗಿ ಈ ಜಾತಿಗಳು ಸಮರ್ಪಕವಾಗಿ ತಮಗೆ ಸಿಗಬೇಕಾದ ಮೀಸಲಾತಿಯನ್ನು ಪಡೆಯಲಾರವು ಎಂದು ಭೀಮ್ ಆರ್ಮಿ ಸಂಘಟನೆಯ ತುಮಕೂರು ಜಿಲ್ಲಾಧ್ಯಕ್ಷ ಅಯ್ಯನಪಾಳ್ಯ ಎ.ಆರ್.ಶ್ರೀನಿವಾಸ್ ಮೂರ್ತಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮನವಿ ಪತ್ರ ಸಲ್ಲಿಸಿದ ನಂತರ ಮಾತನಾಡಿ ಜಾತಿ-ನಿರ್ದಿಷ್ಟ ಸಮೀಕ್ಷೆ ನಡೆಸುವುದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟಾ ಎಲ್ಲಾ ವಿಭಾಗಗಳಲ್ಲಿ ಪೂರೈಸುವುದು, ಖಾಸಗಿ ಸಂಸ್ಥೆಗಳಲ್ಲೂ ಸಹ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರುವುದು ಸೇರಿದಂತೆ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಸಾಮಾಜಿಕ ನ್ಯಾಯ ಕೊಡಿಸುವುದು ನಮ್ಮ ಸಂಘಟನೆಯ ಉದ್ದೇಶವಾಗಿದ್ದು ಈ ಕುರಿತು ನಮ್ಮ ರಾಷ್ಟ್ರೀಯ ನಾಯಕರು ಹಾಗೂ ಸಂಸದರಾದ ಮಾನ್ಯ ಚಂದ್ರಶೇಖರ್ ಆಜಾದ್ ಅವರ ನಿರ್ದೇಶನದಂತೆ ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದು, ನಮ್ಮ ಬೇಡಿಕೆಗಳು ಈಡೇರದೇ ಹೋದಲ್ಲಿ ಭಾರತ್ ಬಂದ್ ಮಾಡುವ ಮೂಲಕ ನಮ್ಮ ಹೋರಾಟ ಮಾಡುತ್ತೇವೆಂದು ಹೇಳಿದರು.
ಜಿಲ್ಲಾಧಿಕಾರಿಗಳ ಪರವಾಗಿ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಮನವಿ ಪತ್ರವನ್ನು ಸ್ವೀಕರಿಸಿದರು ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾದ ಅಯ್ಯನಪಾಳ್ಯ ಎ.ಆರ್.ಶ್ರೀನಿವಾಸ ಮೂರ್ತಿ, ಚೇತನ್, ರಾಜು, ಗುರುಪ್ರಸಾದ್, ವಿನಯ್, ಫಕೃದ್ಧೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.