ತುಮಕೂರು : ತುಮಕೂರು ತಾಲ್ಲೂಕು, ಕಸಬಾ ಹೋಬಳಿ, ಕೊತ್ತಿಹಳ್ಳಿ ಗ್ರಾಮದಲ್ಲಿ ಚರಂಡಿ ನೀರು ಸರಾಗವಾಗಿ ಹೋಗದೇ ದಲಿತರ ಮನೆಗಳಿಗೆ ನುಗ್ಗುತ್ತಿರುವ ಪರಿಣಾಮ ಮಾರಣಾಂತಿಕ ಕಾಯಿಲೆಗಳಿಗೆ ಆಸ್ಪದ ನೀಡುತ್ತಿದೆ ಹಾಗೂ ಈ ಕುರಿತು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು ಮೊದಲ್ಗೊಂಡು ಚುನಾಯಿತ ಪ್ರತಿನಿಧಿಗಳು ಸಹ ಗಮನಹರಿಸದೇ ದಲಿತರು ಎಂಬ ಕಾರಣಕ್ಕೆ ನಿರ್ಲಕ್ಷ್ಯವಹಿಸಿರುವುದನ್ನು ಗಮನಿಸಿ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ತಾಲ್ಲೂಕು, ಕಸಬಾ ಹೋಬಳಿ, ಕೊತ್ತಿಹಳ್ಳಿ ಗ್ರಾಮದ ನಿವಾಸಿಗಳಾಗಿರುವ ಅದರಲ್ಲಿಯೂ ಪರಿಶಿಷ್ಟ ಜಾತಿಗೆ ಸೇರಿರುವ ಹಲವಾರು ಮನೆಗಳು ಇದ್ದು ಪ್ರಸ್ತುತ ಮಳೆಗಾಲ ಆಗಿದ್ದು ಜೊತೆಗೆ ಈ ಮನೆಗಳ ಪಕ್ಕದಲ್ಲಿ ಹಾದು ಹೋಗಿರುವ ಚರಂಡಿ ನೀರು ಪರಿಶಿಷ್ಠ ಜಾತಿಯವರು ವಾಸಿಸುವ ಕಾಲೋನಿಯ ಒಳಗೆ ನುಗ್ಗುತ್ತಿರುವುದಲ್ಲದೇ ಮನೆಗಳಿಗೂ ಸಹ ನುಗ್ಗಿ ಹಲವಾರು ಜನರು ಕಾಯಿಲೆಗಳಿಗೆ ತುತ್ತಾಗಿದ್ದಾರೆ ಜೊತೆಗೆ ಈ ಪ್ರದೇಶದಲ್ಲಿ ಕಲುಷಿತ ನೀರು ನಿಂತು ದುರ್ನಾತ ಬೀರುತ್ತಿರುವುದಲ್ಲದೇ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಡೆಂಗ್ಯೂನಂತಹ ಮಾರಕ ರೋಗಗಳ ಬೀತಿಯಿಂದ ಜೀವನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ರವರು ತಮ್ಮ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉಳಿದಂತೆ ಈ ಭಾಗದಲ್ಲಿ ಸಮರ್ಪಕ ರಸ್ತೆ ಸೌಲಭ್ಯವಿಲ್ಲದೇ ತೊಂದರೆಯಾಗಿದ್ದು ಈ ಭಾಗದಲ್ಲಿ ವಾಸಿಸುವ ಬಹುತೇಕ ಪರಿಶಿಷ್ಠ ಜಾತಿಗೆ ಸೇರಿದ ಮನೆಗಳು ಇವೆ ಎಂಬ ಕಾರಣಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳಾದ ಸರಿಯಾದ ರಸ್ತೆ, ಸಮರ್ಪಕ ಚರಂಡಿ ವ್ಯವಸ್ಥೆ, ದಾರಿದೀಪ ಒಳಗೊಂಡಂತೆ ಯಾವುದನ್ನೂ ಸಹ ಸರಿಪಡಿಸದೇ ನಮ್ಮಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರ ವರ್ಗದವರಿಗೆ ವಿಷಯ ತಿಳಿಸಿದ್ದಲ್ಲದೇ ಮನವಿ ಪತ್ರಗಳನ್ನು ನೀಡಿದರೂ ಸಹ ಯಾರೂ ತಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲವೆಂದು ಸ್ಥಳೀಯರಿಂದ ದೂರು ಬಂದ ಹಿನ್ನಲೆಯನ್ನು ಇಂದು ತುಮಕೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ತಮ್ಮ ಸಮಿತಿಯಿಂದ ಸಲ್ಲಿಸುತ್ತಿರುವುದಾಗಿ ಎನ್.ಕೆ.ನಿಧಿಕುಮಾರ್ ತಿಳಿಸಿದರು.
ತಮ್ಮ ಮನವಿ ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ತುರ್ತಾಗಿ ಸ್ಥಳ ಪರಿಶೀಲನೆ ಮಾಡಿ ದಲಿತರ ಕಾಲೋನಿಯಲ್ಲಿ ಉಂಟಾಗಿರುವ ತೊಂದರೆಯ ಬಗ್ಗೆ ಕ್ರಮ ಜರುಗಿಸಿ ಸಾರ್ವಜನಿಕರಿಗೆ ಹಾಗೂ ದಲಿತರುಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿಯನ್ನು ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಸಹ ಶೀಘ್ರದಲ್ಲಿಯೇ ಸ್ಥಳ ಪರಿಶೀಲನೆ ನಡೆಸುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ತಿಳಿಸಿದ್ದಾರೆ.
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ, ಮುಖಂಡರುಗಳಾದ ದರ್ಶನ್ ಬಿ.ಆರ್, ರಂಗಸ್ವಾಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.