ಬೆಂಗಳೂರು: ಜಾನಪದ ಕ್ಷೇತ್ರದ ಸರ್ವ ಶ್ರೇಷ್ಟ ಗಾಯಕ ಹಾಗೂ ವಿದ್ವಾಂಸ ಆಲೂರು ನಾಗಪ್ಪನವರು ಇತ್ತೀಚೆಗಷ್ಟೇ ನಿಧನರಾಗಿದ್ದು, ಅವರ ಪುತ್ರಿ ಕಲಾವಿದೆ ದಿವ್ಯ ಆಲೂರು ತಮ್ಮ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿ ದಿಟ್ಟತನ ತೋರಿದ್ದಾರೆ.
ಕನ್ನಡ ಜಾನಪದ ಲೋಕದಲ್ಲಿ ಶ್ರೇಷ್ಟ ಗಾಯಕರಾಗಿ ಗೀತ ರಚನಕಾರರಾಗಿ ಆಲೂರು ನಾಗಪ್ಪ ಬಹು ದೊಡ್ಡ ಹೆಸರನ್ನೇ ಮಾಡಿದ್ದವರು. ನೀ ಮುದುಕಿಯಂಗೆ ಮುಸಕಾಕ್ಕೊಂಡು…. ಹಾಡಿನ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ಆಲೂರು ನಾಗಪ್ಪ ಇತ್ತೀಷಲಚೆಗಷ್ಟೇ ಆನಾರೋಗ್ಯದಿಂದ ನಿಧನರಾದರು.
ಆಲೂರು ನಾಗಪ್ಪನವರಿಗೆ ಗಂಡುಮಕ್ಕಳಿಲ್ಲದ ಕಾರಣ ಅಂತ್ಯ ಸಂಸ್ಕಾರ ನಡೆಸುವವರ್ಯಾರು? ಎಂಬ ಪ್ರಶ್ನೆ ಎದುರಾದಾಗ ದಿಟ್ಟ ನಿಲುವನ್ನು ತೆಗೆದುಕೊಂಡವರೇ ಆಲೂರು ನಾಗಪ್ಪನವರ ಪುತ್ರಿ ಖ್ಯಾತ ನಿರೂಪಕಿ, ಗಾಯಕಿ ದಿವ್ಯ ಆಲೂರು.
ನನ್ನ ತಂದೆಯ ಅಂತ್ಯ ಕ್ರಿಯೆಯನ್ನು ನಾನೇ ನೆರವೇರಿಸಿ ಅವರಿಗೆ ಮುಕ್ತಿ ದೊತಕಿಸುತ್ತೇನೆ ಎಂದ ದಿವ್ಯಗೆ ಹಿರಿಯರ ವಿರೋಧ ಎದುರಾಯಿತು. ಆಗ ಕಷ್ಟಕ್ಕೆ ಸುಖಕ್ಕೆ ಹೆಣ್ಣು ಮಕ್ಕಳು ಬೇಕು ಆದ್ರೆ.. ಅಂತ್ಯಸಂಸ್ಕಾರಕ್ಕೆ ಏಕೆ ಅಡ್ಡಿ… ಪಿಂಡ ಇಡದಕ್ಕಾದ್ರೂ ಗಂಡು ಮಗು ಬೇಕು ಅಂತಾನೇ ಹೆಣ್ಣು ಭ್ರೂಣ ಹತ್ಯೆಎಷ್ಟೋ ಕಡೆ ನಡೆದಿದೆ.. ಕಾಲ ಬದಲಾಗಿದೆ ನಾವು ಒಳ್ಳೆ ಬದಲಾವಣೆಗೆ ತೆರೆದುಕೊಳ್ಳೋಣ.. ನಾನು ಯಾವ ಸಂಪ್ರದಾಯದ ವಿರೋಧಿಯಲ್ಲ ಆದರೆ ನಮ್ಮಪ್ಪನ ಅಂತ್ಯ ಸಂಸ್ಕಾರ ಮಾಡೋದು ನನ್ನ ಹಕ್ಕು ಅನ್ನೋ ಧೃಡ ಭಾವನೆ ಉಳ್ಳವಳು ನಾನು ಅದನ್ನು ಮಾಡಿಯೇ ತೀರುತ್ತೇನೆ ಎಂದ ದಿವ್ಯ ತಂದೆಯ ಶವದ ಮುಂದೆ ಕೂಳು ಮಡಿಕೆ ಹಿಡಿದು ಸ್ಮಶಾನದವರೆಗೆ ನಡೆದು ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿದರು.
ಜುಲೈ 23ರಂದು ಆಲೂರು ನಾಗಪ್ಪನವರು ನಿಧನರಾಗಿದ್ದು, ಅವರ ಹುಟ್ಟೂರಾದ ಬಿಡದಿಯ ಬಳಿಯ ಶೆಟ್ಟಿಗೌಡನ ದೊಡ್ಡಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇನ್ನೂ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ದಿವ್ಯ ಆಲೂರರ ನಡೆಯನ್ನು ಸಮಾಜದಲ್ಲಿ ಹಲವಾರು ಗಣ್ಯರು, ಚಿಂತಕರು ಸಾಹಿತಿಗಳು ಅಭಿನಂದಿಸಿದ್ದು, ಮಾದರಿ ಸಮಾಜದ ನಿರ್ಮಾಣದ ದಿಕ್ಕಿನಲ್ಲಿ ಹೊಸದಾದ ಆಲೋಚನೆಗೆ ಈ ಘಟನೆ ಮುನ್ನುಡಿ ಬರೆದಂತಿದೆ ಎಂದಿದ್ದಾರೆ.