ಖಾಸಗಿ ಶಾಲೆಗಳು ಸರ್ಕಾರಕ್ಕೆ ಕೇವಲ ಸೇವಾ ಶುಲ್ಕವನ್ನು ಮಾತ್ರ ಪಾವತಿಸಬೇಕು ಎಂದು ರೂಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಹಾಲನೂರು ಲೇಪಾಕ್ಷ ತಿಳಿಸಿದರು.
ಅವರು ನಗರದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ ಶಾಲೆಗಳು ಸೇವಾ ಕ್ಷೇತ್ರದ ಅಡಿಯಲ್ಲಿ ಬರುವುದರಿಂದ, ಸರ್ಕಾರ ಅಥವಾ ಶಿಕ್ಷಣ ಇಲಾಖೆ ಶಾಲೆಗಳಿಗೆ ಸೇವಾ ಶುಲ್ಕವನ್ನು ಮಾತ್ರ ವಿಧಿಸಲು ಹಕ್ಕನ್ನು ಹೊಂದಿದೆ. ಆದ್ದರಿಂದ ಶಾಲಾ ಆಡಳಿತ ಮಂಡಳಿಯವರು ಸರ್ಕಾರಕ್ಕೆ ಬೇರೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸುವ ಅವಶ್ಯಕತೆ ಇಲ್ಲ ಎಂದರು.
ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಸಗಿ ಶಾಲೆಗಳಿಗೆ ತೆರಿಗೆಯ ಹೆಸರಿನಲ್ಲಿ ಸರ್ಕಾರ ಲಕ್ಷಾಂತರ ರೂಗಳಷ್ಟು ತೆರಿಗೆ ವಿಧಿಸಿದ್ದು, ಸರ್ಕಾರ ಅಥವಾ ಶಿಕ್ಷಣ ಇಲಾಖೆ ಈ ರೀತಿ ಮನಸೋಯಿಚ್ಛೆ ತೆರಿಗೆ ವಿಧಿಸಿ ಆತಂಕ ಕಾರಿಯಾದ ಬೆಳವಣಿಗೆಯನ್ನು ಉಂಟುಮಾಡಿದೆ. ಆದ್ದರಿಂದ ಶಾಲಾ ಆಡಳಿತ ಮಂಡಳಿಯವರು ಯಾವುದೇ ಆತಂಕ ಕೊಳಗಾಗದೆ ಈ ಹಿಂದಿನ ಸರ್ಕಾರದ ನಿಯಮದಂತೆ ಕೇವಲ ಸೇವಾ ತೆರಿಗೆಯನ್ನು ಮಾತ್ರ ಪಾವತಿಸುವಂತೆ ತಿಳಿಸಿದರು.
ರೂಪ್ಸ ಕರ್ನಾಟಕದ ಪದಾಧಿಕಾರಿಗಳು ಈ ವಿಷಯದ ಕುರಿತು ತುಮಕೂರು ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದು, ಜಿಲ್ಲಾಧಿಕಾರಿಗಳು ಹಾಗೂ ಆಯುಕ್ತರು ಈ ಬಗ್ಗೆ ಕುಲಂಕುಶವಾಗಿ ವಿತರಣೆ ನಡೆಸಿ ಆದೇಶ ಮಾಡುವುದಾಗಿ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಮೊದಲುಗೊಂಡು ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದೇ ಸ್ಥಳದಲ್ಲಿ ಬಂದರೂ ಕೇವಲ ಸೇವಾ ಶುಲ್ಕವನ್ನು ಹೊರತುಪಡಿಸಿ ಮತ್ಯಾವುದೇ ತೆರಿಗೆ ಅಥವಾ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇಲ್ಲ, ಹಾಗೂ ಈ ಬಗ್ಗೆ ಯಾವುದೇ ಅಧಿಕಾರಿಗಳು ಒತ್ತಡ ಹೇರುವಂತಿಲ್ಲ ಒಂದು ವೇಳೆ ಅಂತಹ ಯಾವುದೇ ಒತ್ತಡದ ಪರಿಸ್ಥಿತಿಯನ್ನು ಅಧಿಕಾರಿಗಳು ನಿರ್ಮಾಣ ಮಾಡಿದರೆ ರೂಪ್ಸ ಸಂಘಟನೆಯ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು