ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ (ದೇವರ ನಿದ್ರೆಯ) ಏಕಾದಶಿ’ (ಆಷಾಢ ಏಕಾದಶಿ) ಎನ್ನುತ್ತಾರೆ ಮತ್ತು ಕೃಷ್ಣ ಪಕ್ಷದಲ್ಲಿನ ಏಕಾದಶಿಯನ್ನು ‘ಕಾಮಿಕಾ ಏಕಾದಶಿ’ ಎನ್ನುತ್ತಾರೆ. 2024 ರಲ್ಲಿ ಆಷಾಢ ಏಕಾದಶಿಯು 17 ಜುಲೈ ಬುಧವಾರದಂದು ಇರಲಿದೆ.
ಇತಿಹಾಸ
ಹಿಂದೆ ದೇವ ಮತ್ತು ದಾನವರಲ್ಲಿ ಯುದ್ಧ ಪ್ರಾರಂಭವಾಯಿತು. ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಶಂಕರನಿಂದ ಅಮರತ್ವವನ್ನು ಪಡೆದನು. ಆದ್ದರಿಂದ ಅವನು ಬ್ರಹ್ಮದೇವ, ವಿಷ್ಣು, ಶಿವರಂತಹ ಎಲ್ಲ ದೇವತೆಗಳಿಗೆ ಅಜೇಯ ನಾದನು. ದೇವತೆಗಳು ಅವನ ಭಯದಿಂದ ತ್ರಿಕುಟ ಪರ್ವತದ ಮೇಲೆ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗೆ ಒಂದು ಗುಹೆಯಲ್ಲಿ ಅಡಗಿ ಕುಳಿತರು. ಆ ಆಷಾಢ ಏಕಾದಶಿಯಂದು ಅವರಿಗೆ ಉಪವಾಸ ಮಾಡಬೇಕಾಯಿತು. ಮಳೆಯ ನೀರಿನಲ್ಲಿ ಸ್ನಾನವಾಯಿತು. ಆಕಸ್ಮಿಕವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಉತ್ಪನ್ನವಾಯಿತು. ಆ ಶಕ್ತಿಯು ಗುಹೆಯ ಬಾಗಿಲಿನಲ್ಲಿ ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು. ಈ ಶಕ್ತಿದೇವಿಯೇ ಏಕಾದಶಿಯ ದೇವತೆಯಾಗಿದ್ದಾಳೆ.
ಮಹತ್ವ
ಅ. ಆಷಾಢ ಏಕಾದಶಿ ವ್ರತದಲ್ಲಿ ಎಲ್ಲ ದೇವತೆಗಳ ತೇಜಸ್ಸು ಒಂದಾಗಿರುತ್ತದೆ.
ಆ. ಕಾಮಿಕಾ ಏಕಾದಶಿಯು ಮನೋಕಾಮನೆಯನ್ನು ಪೂರ್ಣಗೊಳಿಸುವ ಏಕಾದಶಿಯಾಗಿದೆ. ಇದು ಪುತ್ರದಾಯೀ ಏಕಾದಶಿಯಾಗಿದೆ.
ವ್ರತವನ್ನು ಮಾಡುವ ಪದ್ಧತಿ
ಮೊದಲನೆಯ ದಿನ ದಶಮಿಗೆ ಏಕಭುಕ್ತವಿರಬೇಕು. ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ ವಿಷ್ಣುವಿನ ಪೂಜೆಯನ್ನು ಮಾಡಬೇಕು. ಪೂರ್ಣದಿವಸ ಉಪವಾಸ ಮಾಡಬೇಕು. ರಾತ್ರಿ ಹರಿಭಜನೆಯೊಂದಿಗೆ ಜಾಗರಣೆ ಮಾಡಬೇಕು. ಆಷಾಢ ಶುಕ್ಲ ದ್ವಾದಶಿಗೆ ವಾಮನನನ್ನು ಪೂಜಿಸಿ ಪಾರಣೆ ಮಾಡಬೇಕು.
ಈ ಎರಡೂ ದಿನಗಳಂದು ಶ್ರೀವಿಷ್ಣುವನ್ನು ‘ಶ್ರೀಧರ’ ಎನ್ನುವ ಹೆಸರಿನಿಂದ ಪೂಜಿಸಿ ಅಹೋರಾತ್ರಿ ತುಪ್ಪದ ದೀಪವನ್ನು ಉರಿಸುವ ವಿಧಿಯನ್ನು ಮಾಡುತ್ತಾರೆ.
ಪಂಢರಪುರದ ಯಾತ್ರೆ (ವಾರಿ)
ಈ ವ್ರತವನ್ನು ಆಷಾಢ ಶುಕ್ಲ ಏಕಾದಶಿಯಿಂದ ಪ್ರಾರಂಭಿಸುತ್ತಾರೆ. ವಾರಕರಿ (ವಿಠಲನ ಭಕ್ತರು) ಸಂಪ್ರದಾಯವು ವೈಷ್ಣವ ಸಂಪ್ರದಾಯದಲ್ಲಿನ ಪ್ರಮುಖ ಸಂಪ್ರದಾಯವಾಗಿದೆ. ಈ ಸಂಪ್ರದಾಯದಲ್ಲಿ ವಾರ್ಷಿಕ, ಅರ್ಧವಾರ್ಷಿಕ ಹೀಗೆ ಪಡೆದಿರುವ ದೀಕ್ಷೆಯ ವಿಧಕ್ಕನುಸಾರವಾಗಿ ಯಾತ್ರೆಯನ್ನು ಮಾಡುತ್ತಾರೆ. ಈ ಯಾತ್ರೆಯನ್ನು ಕಾಲ್ನಡಿಗೆಯಿಂದ ಮಾಡಿದರೆ ಶಾರೀರಿಕ ತಪಸ್ಸಾಗುತ್ತದೆ ಎಂದು ನಂಬಲಾಗುತ್ತದೆ.
ವರ್ಷದ ಇಪ್ಪತ್ನಾಲ್ಕು ಏಕಾದಶಿಗಳಲ್ಲಿ ಆಷಾಢ ಏಕಾದಶಿಯ ಮಹತ್ವವು ಮುಂದಿನಂತಿದೆ.
ಅ. ಈ ತಿಥಿಗೆ ಏಕಾದಶೀದೇವಿಯ ಉತ್ಪತ್ತಿಯಾಯಿತು.
ಆ. ಈ ತಿಥಿಯಂದು ಚಾತುರ್ಮಾಸವು ಪ್ರಾರಂಭವಾಗುತ್ತದೆ.
ಇ. ಇದೇ ದಿನ ಶ್ರೀವಿಷ್ಣು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ಲೀನನಾಗುತ್ತಾನೆ.
ಈ. ಇದೇ ತಿಥಿಗೆ ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನು ಭೇಟಿಯಾಗಲು ಪಂಢರಪುರಕ್ಕೆ ಬಂದನು.
( ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ “ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ”)
ಸಂಗ್ರಹ
ಶ್ರೀ. ವಿನೋದ ಕಾಮತ್,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 9342599299)