ಹೆಗ್ಗೆರೆ ಪಿಡಿಒ ರಾಘವೇಂದ್ರ ಹಾಗೂ ಕರ ವಸೂಲಿಗಾರ ರಂಗನಾಥ್ ಅವರನ್ನು ಅಧಿಕಾರದಿಂದ ವಜಾ ಮಾಡಲು ಪ್ರತಿಭಟನೆ

 

ತುಮಕೂರು: ಹೆಗ್ಗೆರೆ ಗ್ರಾಮ ಪಂಚಾಯಿತಿಯಲ್ಲಿ ಸಂಗ್ರಹವಾದ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡು ಸರಕಾರದ ಬೊಕ್ಕಸಕ್ಕೆ ವಂಚನೆ ಮಾಡಿ ಅಮಾನತ್ತಾಗಿರುವ ಪಿಡಿಒ ರಾಘವೇಂದ್ರ ಹಾಗೂ ಕರ ವಸೂಲಿಗಾರ ರಂಗನಾಥ್ ಅವರನ್ನು ಅಧಿಕಾರದಿಂದ ವಜಾ ಮಾಡಿ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ಎಂದು ಬಿಜೆಪಿ ಮುಖಂಡ ಜಯಂತ್‌ಗೌಡ ಒತ್ತಾಯಿಸಿದರು.

 

 

 

ತುಮಕೂರು ಗ್ರಾಮಾಂತರದ ಹೆಗ್ಗೆರೆ ಗ್ರಾಮ ಪಂಚಾಯಿತಿ ಮುಂದೆ ಬಿಜೆಪಿ ಮುಖಂಡ ಜಯಂತ್‌ಗೌಡ ಅವರ ನೇತೃತ್ವದಲ್ಲಿ,ಗ್ರಾಮ ಪಂಚಾಯಿತಿಯಲ್ಲಿ ನೆಡೆದಿರುವ ಅವ್ಯವಹಾರ ಹಾಗೂ ಸಾರ್ವಜನಿಕರ ತೆರಿಗೆಹಣ ದುರುಪಯೋಗ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತುಮಕೂರು ನಗರಕ್ಕೆ ಹೊಂದಿಕೊಂಡಿರುವ ಹೆಗ್ಗೆರೆ ಗ್ರಾಮ ಪಂಚಾಯಿತಿ ವೇಗವಾಗಿ ಬೆಳೆಯುತ್ತಿದ್ದು, ಇಲ್ಲಿ ತಿಂಗಳಿಗೆ ಲಕ್ಷಾಂತರ ರೂಗಳ ಸಾರ್ವಜನಿಕರಿಂದ ತೆರಿಗೆ ಹಣ ವಸೂಲಾಗುತ್ತಿದೆ. ಆದರೆ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಕೆ.ಆರ್ ಹಾಗೂ ಕಮಿಷನ್ ಆಧಾರದ ಮೇಲೆ ಕರ ವಸೂಲಿಗಾರನಾಗಿ ನೇಮಕವಾಗಿರುವ ರಂಗನಾಥ್ ಅವರು ಇಬ್ಬರು ಸೇರಿಕೊಂಡು ಸುಮಾರು ೧.೫೦ ಕೋಟಿಗಿಂತ ಹೆಚ್ಚಿನ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇವರ ಮೇಲೆ ಕೂಡಲೇ ಮೇಲಾಧಿಕಾರಿಗಳು ತನಿಖೆ ನೆಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

 

 

 

2023 ಮೇ 1 ರಿಂದ 2024 ಮೇ 29 ರವರೆವಿಗೆ 6329 ಕರ ವಸೂಲಿ ಮಾಡಿರುವ ರಸೀದಿಯನ್ನು ಆನ್‌ಲೈನ್ ಮೂಲಕ ಹಾಕಿರುತ್ತಾರೆ. ಇದರಲ್ಲಿ 842 ತೆರಿಗೆದಾರರ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಡಿಲೀಟ್ ಮಾಡಿರುತ್ತಾರೆ. ಓರ್ವ ತೆರಿಗೆದಾರರಿಂದ ಸುಮಾರು 10-20 ಸಾವಿರದ ವರೆವಿಗೂ ತೆರಿಗೆ ಹಣವನ್ನು ಕಟ್ಟಿಸಿಕೊಂಡು ಸರಕಾರಕ್ಕೆ ಸೂಕ್ತ ಲೆಕ್ಕ ಕೊಡದೇ ಸುಮಾರು ರೂ. 1.50 ಕೋಟಿ ರೂಗಳಷ್ಟು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

 

 

 

ಕರವಸೂಲಿಗಾರ ರಂಗನಾಥ್ ಅವರು ಪ್ರಮುಖವಾಗಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಸಾಕ್ಷಿ ಸಮತೇತ ಸಿಕ್ಕಿಬಿದ್ದಿದ್ದಾರೆ.ಕರ ವಸೂಲಿ ಮಾಡುವಾಗ ಗ್ರಾಮ ಪಂಚಾಯಿತಿಯ ಖಾತೆಗೆ ಹಣ ವರ್ಗಾಹಿಸಿಕೊಳ್ಳಬೇಕು ಆದರೆ ಇಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಬ್ಯಾಂಕ್ ಖಾತೆಗಳಿಗೆ ತೆರಿಗೆ ಹಣವನ್ನು ಪೋನ್ ಪೇ ಹಾಗೂ ಗೂಗಲ್ ಪೇ ಮೂಲಕ ವರ್ಗಾಹಿಸಿಕೊಂಡಿದ್ದು, ಇದಲ್ಲದೇ ಸಾರ್ವಜನಿಕರಿಂದ ಹತ್ತು-ಹದಿನೈದು ಸಾವಿರ ರೂಗಳ ಹಣವನ್ನು ತೆರೆಗೆ ರೂಪವಾಗಿ ಪಡೆದು ಕೇವಲ ಒಂದು, ಎರಡು ಸಾವರಿರ ರೂಗಳ ಲೆಕ್ಕವನ್ನು ತೋರಿಸಿ ಗ್ರಾಮ ಪಂಚಾಯಿತಿಯ ಬೊಕ್ಕಸಕ್ಕೆ ಸುಳ್ಳು ಲೆಕ್ಕ ತೋರಿಸುವ ಮೂಲಕ ಭಾರಿ ನಷ್ಟ ಉಂಟು ಮಾಡಿದ್ದಾರೆ. ಕಮೀಷನ್ ಆಧಾರದ ಮೇಲೆ ನೇಮಕವಾಗಿರುವ ರಂಗನಾಥ್ ಅವರ ಬ್ಯಾಂಕ್ ಖಾತೆಗೆ ಸುಮಾರು ರೂ. 2 ಕೋಟಿಯಷ್ಟು ಸಾರ್ವಜನಿಕರಿಂದ ತೆರಿಗೆ ಹಣ ಬಂದಿದೆ. ಸಾರ್ವಜನಿಕರ ತೆರಿಗೆ ಹಣದ ದುರುಪಯೋಗದ ಹಿಂದೆ ಯಾರ್‍ಯಾರು ಇದ್ದಾರೆ ಅವರನ್ನು ಕಂಡು ಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಪಿಡಿಓ ರಾಘವೇಂದ್ರ ಅವರ ಮೇಲೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಕೂಡಲೇ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ದೇವರಾಜು ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ವ್ಯಾಪಕವಾಗಿ ಭ್ರಷ್ಟಚಾರ ನೆಡೆದಿದೆ. ಸಾರ್ವಜನಿಕರ ತೆರಿಗೆ ಹಣ, ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ನಖಲಿ ಬಿಲ್ ಸೃಷ್ಠಿ ಮಾಡಿ ಏಜನ್ಸಿಗಳ ಹೆಸರಲ್ಲಿ ಗ್ರಾಪಂ ಸದಸ್ಯರ ಅನುಮತಿಯಿಲ್ಲದೇ ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಲಕ್ಷಾಂತರ ಹಣವನ್ನು ಪಂಚಾಯಿತಿ ಸಿಬ್ಬಂಧಿಗಳ ಹೆಸರಲ್ಲಿ ಚೆಕ್ ಹಾಕುವ ಮೂಲಕ ಲಕ್ಷಾಂತರ ರೂಗಳನ್ನು ಗುಳುಂ ಮಾಡಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ಸಾಮಾನ್ಯ ಸಭೆ ನಡೆಸದೇ ಸರ್ವ ಸದಸ್ಯರ ಒಮ್ಮತವಿಲ್ಲದೇ ಡಿಸಿ ಬಿಲ್‌ಗಳನ್ನು ಮಾಡಿಕೊಂಡು ಗ್ರಾಮ ಪಂಚಾಯಿತಿಯ ಬೊಕ್ಕಸಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಹೇಳಿದರು.

 

 

 

 

2023-24 ನೇ ಮಾರ್ಚ್ ಅಂತ್ಯಕ್ಕೆ ಸುಮಾರು ರೂ. 19,85,102  ರೂಗಳ ಸಾರ್ವಜನಿಕರ ತೆರಿಗೆ ಹಣವನ್ನು ಗ್ರಾಮ ಪಂಚಾಯಿತಿ ನಿಧಿಗೆ ಕಟ್ಟಬೇಕಾಗಿರುತ್ತದೆ. ನಿಯಮಾನುಸಾರ ಕಟ್ಟಿರುವುದಿಲ್ಲ. ಅಂದರೆ ಏಪ್ರಿಲ್ ತಿಂಗಳಲ್ಲಿ ರೂ. 19,152 ಮೇ ತಿಂಗಳಲ್ಲಿ ರೂ. 3,34,684  ಜೂನ್ ತಿಂಗಳಲ್ಲಿ ರೂ.9,82,454 ರೂಗಳು ಸೇರಿದಂತೆ ಒಟ್ಟು ರೂ. 13, 36,290 ರೂಗಳನ್ನು ಕಟ್ಟಿರುತ್ತಾರೆ. ಇದರಲ್ಲಿ ಜಮೆ ಮಾಡಬೇಕಾದ ಬಾಕಿ ಮೊತ್ತ 6,48,812 ರೂಗಳನ್ನು ಕಟ್ಟಿರುವುದಿಲ್ಲ. ಈ ಮೊತ್ತವನ್ನು ದುರುಪಯೋಗಪಡಿಸಿಕೊಂಡಿರುತ್ತಾರೆ ಮತ್ತು ಕಂದಾಯ ಮೊತ್ತವನ್ನು ಪ್ರತಿದಿನ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕೆಂಬ ಸರಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿತ್ತಾರೆ. ಒಟ್ಟು 6329 ತೆರಿಗೆದಾರರ ರಸೀದಿಗಳಲ್ಲಿ 5487 ಆನ್ ಲೈನ್‌ನಲ್ಲಿ ಇದ್ದು, ಇನ್ನು ಉಳಿದ 842 ರಸೀದಿಗಳನ್ನು ಡಿಲೀಟ್ ಮಾಡಿದ್ದು, ಡಿಲೀಟ್ ಮಾಡಿರುವ ರಸೀದಿಗಳ ಮೌಲ್ಯ ರೂ. 1.50 ಕೋಟಿಯಷ್ಟಾಗಿದೆ. ಈ ಕೂಡಲೇ ಮೇಲಾಧಿಕಾರಿಗಳು ಪಿಡಿಓ ಹಾಗೂ ಕರವಸೂಲಿಗಾರ ರ ಮೇಲೆ ತನಿಖೆ ನಡೆಸಿ ದುರುಪಯೋಗಪಡಿಸಿಕೊಂಡಿರುವ ಸಾರ್ವಜನಿಕರ ಹಣವನ್ನು ವಸೂಲಿ ಮಾಡಿ ಗ್ರಾಮ ಪಂಚಾಯಿತಿಗೆ ಕಟ್ಟುವುದರೊಂದಿಗೆ,ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

 

 

 

 

ಸಾಮಾಜಿಕ ಹೋರಾಟಗಾರ ಬೆಳಗುಂಬ ವೆಂಕಟೇಶ್ ಮಾತನಾಡಿ, ಹೆಗ್ಗೆರೆ ಗ್ರಾಮ ಪಂಚಾಯಿತಿ ಅಲ್ಲದೇ ತುಮಕೂರು ಗ್ರಾಮಾಂತರದ ಗ್ರಾಮ ಪಂಚಾಯಿತಿಗಳಲ್ಲಿ ನಿತ್ಯ ಭ್ರಷ್ಟಾಚಾರ ನೆಡೆಯುತ್ತಿದೆ. ಗ್ರಾಮಗಳು,ಬಡಾವಣೆಗಳು ಗುಂಡಿ ಬಿದ್ದು, ಸಾರ್ವಜನಿಕರು ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಸೂಕ್ತ ಚರಂಡಿ,ವಿದ್ಯುತ್ ದೀಪಗಳಿಲ್ಲದೇ ಸಾರ್ವಜನಿಕರು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಹೆಗ್ಗೆರೆ ಗ್ರಾಮ ಪಂಚಾಯಿತಿ ಎ1 ಪಂಚಾಯಿತಿಯಾಗಿದ್ದು, ದುಪ್ಪಟ್ಟ ತೆರಿಗೆ ವಸೂಲಿಯಾಗುತ್ತಿದೆ. ಇಲ್ಲಿ ಕೋಟ್ಯಾಂತರ ರೂಗಳು ಸಾರ್ವಜನಿಕರಿಂದ ತೆರಿಗೆ ಹಣ ವಸೂಲಿಯಾಗುತ್ತಿದ್ದರು, ಅಭಿವೃದ್ಧಿ ಕಂಡಿಲ್ಲ. ಇಲ್ಲಿ ಕೋಟಿಗಟ್ಟಲೇ ದುರುಪಯೋಗವಾಗಿದೆ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಶಾಸಕ ಬಿ.ಸುರೇಶ್‌ಗೌಡ ಅವರ ನೇತೃತ್ವದಲ್ಲಿ ಬೃಹತ್ ಹೋರಾಟ ನೆಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

 

 

 

ಪ್ರತಿಭಟನೆ ನಂತರ ಪಿಡಿಓ ಹಾಗೂ ಕರವಸೂಲಿಗಾರನ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಸೋಮಶೇಖರ್ ಹಳಿಯಾಳ್, ಗ್ರಾಪಂ ಸದಸ್ಯರಾದ ಶಿವಣ್ಣ,ಭೋಜರಾಜಯ್ಯ, ವೀರಭದ್ರಸ್ವಾಮಿ,ನಟರಾಜು,ಮುಖಂಡರುಗಳಾದ ಜಗದಾಂಭ,ಮುಬಾರಕ್,ಸರಸ್ವತಿ,ಶೈಲಾಜ,ಪ್ರತಿಭಾ,ರೇಖಾ,ಕಾಂತರಾ, ಬಿಜೆಪಿ,ಜೆಡಿಎಸ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!