ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ, ಜನಪರ ಯೋಜನೆಗಳಿಲ್ಲ. ಭ್ರಷ್ಟಾಚಾರ, ಸುಳ್ಳುಗಳ ಮೇಲೆ ಸರ್ಕಾರ ನಡೆಸುತ್ತಿರುವ ಬಜೆಟ್ ಬ್ರಹ್ಮ ಎಂದು ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯವನ್ನು ಆರ್ಥಿಕ ದಿವಾಳಿತನದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರರಾದ ಸುರಭಿ ಹೊದಿಗೆರೆ ಟೀಕಿಸಿದರು.
ಬುಧವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು ಕಾಂಗ್ರೆಸ್ ಪಕ್ಷದವರು ಎಟಿಎಂ ಮಾಡಿಕೊಂಡಿದ್ದಾರೆ. ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆಂದು ಮೀಸಲಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ೧೮೭ ಕೋಟಿ ರೂ. ಲೂಟಿ ಮಾಡಿ ಆ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಸುಮಾರು ೫ ಸಾವಿರ ಕೋಟಿ ರೂ.ಗಳ ಹಗರಣ ವಿರುದ್ಧ ಬಿಜೆಪಿ ಗಂಭೀರ ಹೋರಾಟ ಆರಂಭಿಸಿದೆ. ಮೂಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿನಲ್ಲಿ ನಿಯಮ ಬಾಹಿರವಾಗಿ ಬೆಲೆ ಬಾಳುವ ನಿವೇಶನ ಪಡೆದಿದ್ದಾರೆ. ಸರ್ಕಾರದಲ್ಲಿ ನಡೆದಿರುವ ದೊಡ್ಡ ಪ್ರಮಾಣದ ಹಗರಣಗಳಲ್ಲಿ ಕಾಂಗ್ರೆಸ್ನ ದೊಡ್ಡ ನಾಯಕರು ಭಾಗಿಯಾಗಿರುವ ಸಾಧ್ಯತೆಗಳಿವೆ. ಎಸ್ಐಟಿ ತನಿಖೆ ಸಾಕಾಗುವುದಲ್ಲ, ಸಿಬಿಐ ತನಿಖೆ ನಡೆಸಬೇಕು. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದರು.
ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಗುದ್ದಲಿ ಪೂಜೆ ನಡೆದಿಲ್ಲ, ಕನಿಷ್ಟ ರಸ್ತೆಗಳ ಗುಂಡಿ ಮುಚ್ಚುವ ಕೆಲಸಗಳೂ ಆಗಿಲ್ಲ. ಜನರಿಗೆ ಅನುಕೂಲ ಆಗುವಂತಹ ಯಾವುದೇ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿಲ್ಲ. ಚುನಾವಣೆ ಗೆಲ್ಲುವ, ಅಧಿಕಾರ ಉಳಿಸಿಕೊಳ್ಳುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದೆ. ತಮ್ಮ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪದಾರ್ಥಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆ ಹೇರಿದೆ ಎಂದರು.
ಕಟಾ ಕಟ್ ಎಂದು ಜುಲೈ ಒಂದರಿಂದ ಮಹಿಳೆಯರ ಬ್ಯಾಂಕ್ ಅಕೌಂಟಿಗೆ ಹಣ ಹಾಕುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ರಾಜ್ಯದಲ್ಲಿ ಕಟಾ ಕಟ್ ಚಾಲನೆಯಲ್ಲಿದೆಯೆ? ಎಂದು ಪ್ರಶ್ನಿಸಿದ ಸುರಭಿ ಹೊದಿಗೆರೆ, ಕಾಂಗ್ರೆಸ್ ಸರ್ಕಾರ ಜನರಿಗೆ ಪ್ರಯೋಜನ ಆಗುವಂತಹ ಯೋಜನೆಗಳನ್ನು ತಂದಿಲ್ಲ, ಪ್ರಯೋಜನವಾಗುತ್ತಿದ್ದ ಬಿಜೆಪಿ ಸರ್ಕಾರದ ಯೋಜನೆಗಳನ್ನೂ ನಿಲ್ಲಿಸಿದೆ. ಇದು ಈ ಸರ್ಕಾರದ ಸಾಧನೆ ಎಂದು ಟೀಕಿಸಿದರು.
ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ, ಜಿಲ್ಲಾ ಮಾಧ್ಯಮ ಪ್ರಮುಖ್ ಜೆ.ಜಗದೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಮ್ಮ, ಜಿ.ಎಸ್.ನಂದಿನಾಥ್ ಹಾಜರಿದ್ದರು.