ನೆಲಹಾಳ್ ನ ಸರ್ಕಾರಿ ಶಾಲೆಯನ್ನು ದೇಶದಲ್ಲೇ ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಪಡಿಸುವೆ – ಶಾಸಕ ಬಿ. ಸುರೇಶಗೌಡ

ಸಿಎಸ್‌ಆರ್‌ ಫಂಡ್ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ನೆಲಹಾಳ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಎಲ್‌ಕೆಜಿಯಿಂದ ಪಿಯುಸಿವರೆಗೆ  ಅಭಿವೃದ್ಧಿಪಡಿಸಿ ದೇಶದಲ್ಲೇ ಮಾದರಿ ಶಾಲೆಯನ್ನಾಗಿ ಮಾಡಿ ತೋರಿಸುವೆ ಎಂದು ಶಾಸಕ ಬಿ. ಸುರೇಶ್ ಗೌಡ ಹೇಳಿದರು.
ಇಂದು ತುಮಕೂರು ಗ್ರಾಮಾಂತರ ಕ್ಷೇತ್ರದ ನೆಲಹಾಳ್ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ವಿಶ್ವದಲ್ಲೇ ಅತೀ ಹೆಚ್ಚು ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಅಂಡ್ ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ  ತಮ್ಮದೇ ಆಗಿರುವಂತ ಚಾಪನ್ನು ಮೂಡಿಸಿರುವ ಟಿ-ಮೇಕ್ ಕಂಪನಿಯು ವಸಂತನರಸಾಪುರದಲ್ಲಿ  ಒಂದು ಸಾವಿರ ಜನಕ್ಕೆ ಉದ್ಯೋಗ ನೀಡುವುದರ ಮೂಲಕ ಜಿಲ್ಲೆಯಲ್ಲಿ ತನ್ನ ಚಾಪನ್ನು ಮೂಡಿಸಿದೆ.  ಈ ಕಂಪನಿಯು  ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ರೂ 85 ಲಕ್ಷ ರೂ ಅನುದಾನ ನೀಡಿದ್ದು ಈ ಅನುದಾನದ ಜೊತೆಗೆ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ರೂ 50.00 ಲಕ್ಷ  ಅನುದಾನವನ್ನು ಜೋಡಿಸಿಕೊಂಡು ದೇಶದಲ್ಲೇ ಒಂದು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಬಿ ಸುರೇಶ್ ಗೌಡ ತಿಳಿಸಿದರು.
 ಸಿಎಸ್ಆರ್ ನ ಹೆಚ್ಚಿನ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಖರ್ಚು ಮಾಡಿ ಸಮಾಜದ ಪ್ರಗತಿಯ ವೇಗ ಹೆಚ್ಚಿಸಲು ಕಾರ್ಪೊರೇಟ್‌ ಸಂಸ್ಥೆಗಳು, ಉದ್ಯಮಿಗಳು ಕೈಜೋಡಿಸಬೇಕು ಎಂದು ಸುರೇಶಗೌಡ ಮನವಿ ಮಾಡಿದರು. ಕಂಪನಿಯಲ್ಲಿ ಕೆಲಸ ಮಾಡುವ ಅನೇಕರಿಗೆ  ಗುಣಮಟ್ಟ ಶಿಕ್ಷಣ ಸಿಕ್ಕಿದ್ದರಿಂದಲೇ ನೀವು ಇಂದು ಉದ್ಯಮಿಗಳಾಗಿ, ಆರ್ಥಿಕವಾಗಿ ದೇಶಕ್ಕೆ ಕೊಡುಗೆ ಕೊಡಲು ಸಾಧ್ಯವಾಗಿದೆ ಎಂದರು.
ಸ್ವಾಭಿಮಾನದಿಂದ ಬದುಕಲು ಆರ್ಥಿಕ, ಸಾಮಾಜಿಕ ಅವಕಾಶಗಳು ಬಹಳ ಮುಖ್ಯ ಎಂದರು. ಗ್ರಾಮೀಣ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಾಡಲು ನಾನು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದೇನೆ. ಇದು ನನ್ನ ಶಾಸಕರ ಅವಧಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಹದಿನಾರನೇ ಸರ್ಕಾರಿ ಶಾಲೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇನೆ ಎಂದರು.
ಈಗಾಗಲೇ ಮೆಗಾ ಗ್ಯಾಸ್,  ಕಾಫ್ರಾಡ್, ಟಿವಿಎಸ್ ಅಂತಹ ಪ್ರಮುಖ ಸಂಸ್ಥೆಗಳು ಹಿರೇಹಳ್ಳಿ ಮಸ್ಕಲ್ಲು ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದು  ಶಾಲೆಗಳ ಅಭಿವೃದ್ಧಿಯನ್ನು ನೋಡಿದ ಕಂಪನಿಯವರು ಇನ್ನೂ ಹತ್ತಾರು ಕೋಟಿ ರೂ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಮೂಲಭೂತ ಸೌಕರ್ಯ ಮತ್ತು ಒಳ್ಳೆಯ ಶಿಕ್ಷಣದಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿ ರೂಪುಗೊಳ್ಳುತ್ತದೆ. ಸರಕಾರ ಸಮರ್ಪಕವಾದ ಸೌಕರ್ಯ ನೀಡಿದರೆ ಮಕ್ಕಳು ಶಾಲೆಗಳಿಗೆ ಬರುತ್ತಾರೆ ಎನ್ನುವುದು ಅಭಿವೃದ್ಧಿಪಡಿಸಿರುವ ಸರ್ಕಾರಿ ಶಾಲೆಗಳಿಂದ ರುಜುವಾತಾಗಿದೆ   ಅದಕ್ಕಾಗಿ ನಿಮ್ಮೆಲರ ಸಹಕಾರ ನಮಗೆ ಅಗತ್ಯ ಎಂದರು.
ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವುದೇ ಹೆಚ್ಚು. ಇಂಗ್ಲಿಷ್‌ ಬೋದಿಸುವುದಿಲ್ಲ, ಕಟ್ಟಡ ಸೇರಿದಂತೆ ನಾನಾ ಕೊರತೆಗಳಿಂದ ಸರಕಾರಿ ಶಾಲೆಗಳತ್ತ ಜನ ಬೆನ್ನು ತೋರಿಸುತ್ತಿದ್ದಾರೆ ಎಂದು ಅನೇಕ ಕಡೆ ನಾವು ಕೇಳಿ ತಿಳಿದುಕೊಂಡಿದ್ದೇವೆ ಆದರೆ ತುಮಕೂರು ಗ್ರಾಮಾಂತರ ಕ್ಷೇತ್ರ  ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ವಾತಾವರಣ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಅತಿ ಹೆಚ್ಚು ದಾಖಲಾತಿ ಆಗಿರುವಂಥದ್ದು ಉದಾಹರಣೆಯಾಗಿದೆ.
ನಾಗವಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೀಟಿಗಾಗಿ ಕ್ಯೂ ನಿಲ್ಲುವಂತ ಪರಿಸ್ಥಿತಿ ಇದೆ ಕಾರಣ ಮೂಲಭೂತ ಸೌಕರ್ಯಗಳು ಚೆನ್ನಾಗಿದ್ದು ಪಾಠ ಪ್ರವಚನಗಳು ಚೆನ್ನಾಗಿವೆ. ಉತ್ತಮ ಬೋಧಕ ಸಿಬ್ಬಂದಿ ಇದ್ದು ಫಲಿತಾಂಶವೂ ಕೂಡ ಅತ್ಯುತ್ತಮವಾಗಿದೆ. ಎಂದರು.  ನೆಲಹಾಳ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು ಈ ಭಾಗದಲ್ಲಿ ಅತಿ ಹೆಚ್ಚಿನದಾಗಿ ದಲಿತರು ಹಿಂದುಳಿದ ವರ್ಗ ಮತ್ತು ನಾಯಕ ಸಮುದಾಯ ಹೆಚ್ಚಾಗಿದ್ದು ಇಲ್ಲಿ ಕೂಲಿ ಕಾರ್ಮಿಕರು ಬಡವರು ಹಾಗೂ ರೈತಾಪಿ ವರ್ಗ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚು ಜನ ಸರ್ಕಾರಿ ಶಾಲೆಯನ್ನು ಅವಲಂಬಿಸಿರುವುದರಿಂದ ಈ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದರು. ಈ ಅನುದಾನದಲ್ಲಿ ಸುಸಜ್ಜಿತ ಕಟ್ಟಡ, ಆಟದ ಮೈದಾನ, ಇ ಲೈಬ್ರರಿ,ಕಾಂಪೌಂಡ್, ಹೆಣ್ಣು ಮಕ್ಕಳಿಗೆ, ಗಂಡು ಮಕ್ಕಳಿಗೆ ಹಾಗೂ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ ಹಾಗೂ ಆಡಿಟೋರಿಯಂ ಅನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
 ಟಿ- ಮೇಕ್ ಕಂಪನಿಯ  ಮುಖ್ಯ ವ್ಯವಸ್ಥಾಪಕ ಶಿವಕುಮಾರ್ ಮಾತನಾಡಿ  ಮೊದಲ ಹಂತದಲ್ಲಿ ರೂ 85 ಲಕ್ಷ ಅನುದಾನವನ್ನು ನೀಡಿದ್ದು ಇನ್ನೂ ಅವಶ್ಯಕತೆ ಇರುವ ಅನುದಾನವನ್ನು ನಮ್ಮ ಕಂಪನಿಯ ಮುಖ್ಯಸ್ಥರೊಂದಿಗೆ ಮಾತನಾಡಿ ಬಿಡುಗಡೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
 ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರತ್ನಮ್ಮ, ಸದಸ್ಯರಾದ ವೇದಶ್ರೀ,ಮುದ್ದಮ್ಮ,ಪಿ.ಬಿ. ಶಿವಣ್ಣ, ಮಂಜುನಾಥ್, ಗೌಡನಹಳ್ಳಿ ಶಿವಣ್ಣ , ಮುಖಂಡ ನಟರಾಜ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಬಿಜೆಪಿ ಘಟಕದ ಅಧ್ಯಕ್ಷ ಶಂಕರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!