ಶಾಲಾ ಮಕ್ಕಳಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ

ತುಮಕೂರು : ಬೆಳಧರ ಸರ್ಕಾರಿ ಶಾಲಾ ಮಕ್ಕಳು ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಶಾಲೆಗೆ  ಕಾಂಪೌಂಡ್ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಿದರು.

 

ಕಳೆದ ಹಲವಾರು ತಿಂಗಳುಗಳಿಂದ ಶಾಲಾ ಕಾಂಪೌಂಡ್ ವಿವಾದ ನಡೆಯುತ್ತಿದ್ದು, ಶಿಕ್ಷಣ ಇಲಾಖೆ ದಿಟ್ಟ ನಿರ್ಧಾರ ಕೈಗೊಳ್ಳಲು ವಿಫಲವಾಗಿರುವ ಹಿನ್ನಲೆ ಶಾಲಾ ಮಕ್ಕಳು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ಗಮನ ಸೆಳೆದರು.

 

ಬೆಳೆಧರ ಸರ್ಕಾರಿ ಶಾಲೆಯ ಸಮೀಪ ಕಲ್ಯಾಣ ಮಂಟಪವಿದ್ದು, ಮದುವೆ ಮುಂತಾದ ಸಮಾರಂಭಗಳು / ಕಾರ್ಯಕ್ರಮಗಳು ನಡೆಯುತ್ತಿರುತ್ತವೆ, ಇಂತಹ ಸಂದರ್ಭಗಳಲ್ಲಿ ನಮ್ಮ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ, ಶಾಲಾ ಕಾಂಪೌಂಡ್ ನಲ್ಲಿ ಕುಡಿದ ಮದ್ಯದ ಬಾಟಲ್ ಗಳನ್ನು ಬಿಸಾಕುತ್ತಾರೆ, ಊಟವನ್ನು ಚೆಲ್ಲಾಡುತ್ತಾರೆ, ವಾಹನಗಳನ್ನು ಎಲ್ಲೆಂದರಲ್ಲೇ ನಿಲ್ಲಿಸುವುದರಿಂದ ಆಟ ಆಡಲು ನಮಗೆ ಮೈದಾನವೇ ಇಲ್ಲದ್ದಂತಾಗಿದೆ. ಇದರಿಂದ ನಮ್ಮ ವ್ಯಾಸಂಗಕ್ಕೆ ಬಹಳಷ್ಟು ತೊಂದರೆಯಾಗಿದೆಂದು ಮನಃನೊಂದ ಮಕ್ಕಳು ಜಿಲ್ಲಾಧಿಕಾರಿಗಳಿಗೆ ತಮ್ಮ ಅಹ್ವಾಲನ್ನು ನೀಡಿರುತ್ತಾರೆ.

 

ಘಟನೆಯ ವಿಚಾರ ಅರಿತ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಕ್ಕಳ ಮನಃವೊಲಿಸಲು ಮುಂದಾದರೂ ಸಹ ಸ್ಥಳದಲ್ಲಿದ್ದ ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು, ನಿಮ್ಮಗಳ ಬೇಜವಾಬ್ದಾರಿಯಿಂದ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತವಾಗುವ ಸ್ಥಿತಿ ನಿರ್ಮಾಣವಾಗಿದೆ, ನಮ್ಮ ಮಕ್ಕಳಿಗೆ ಟಿಸಿ ಕೊಡಿ ನಿಮ್ಮ ಸಹವಾಸವೇ ಬೇಡ, ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದ ಸರ್ಕಾರಿ ಶಾಲೆ ಅವನತಿಯ ಹಾದಿ ಹಿಡಿದಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಜೂನ್ ಮಾಹೆಯ 22 ರೊಳಗಾಗಿ ಕಾಂಪೌಂಡ್ ಕಾಮಗಾರಿ ಆರಂಭಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೂರ್ಯಕಲಾ ಭರವಸೆಯನ್ನು ನೀಡಿದ ಬಳಿಕ ಮಕ್ಕಳು ಸ್ಥಳದಿಂದ ತೆರಳಿದರು. ಈ ವೇಳೆ ಹೋರಾಟಗಾರ ರಫೀಕ್, ಕಾಳಜಿ ತಂಡದ ಸದಸ್ಯರು, ಹಲವು ವಕೀಲರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!