ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಕೊರಟಗೆರೆ ತಾಲೂಕು ಥರಟಿ ಗ್ರಾಮದ ಕೆರೆಯ ಏರಿಯಲ್ಲಿ ಬಿರುಕು ಕಂಡು ಬಂದು ಮಂಗೆ ಬಿದ್ದಿದ್ದು, ಅಪಾರ ಪ್ರಮಾಣದ ನೀರು ಪೋಲಾಗಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಥರಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕೆರೆಯಲ್ಲಿ ಅಧಿಕ ಪ್ರಮಾಣದ ನೀರು ಸಂಗ್ರಹವಾಗಿದ್ದು, ಕೆರೆಯ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದರ ಪರಿಣಾಮ ಏರಿಯಲ್ಲಿ ಮಂಗೆ ಬಿದ್ದಿದ್ದು, ಅಪಾರ ಪ್ರಮಾಣದ ನೀರು ಹೊರ ಹೋಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗನಾಥ್ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಸಹಕಾರದಿಂದ ಪರಿಹಾರ ಕ್ರಮವನ್ನು ಕೈಗೊಂಡಿದ್ದಾರೆ. ಮರಳು ಚೀಲಗಳನ್ನು ಕೆರೆಯ ಏರಿಗೆ ಹಾಕಿ ನೀರು ನಿಲ್ಲಿಸಲು ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗದೆ ನೀರು ಹರಿದು ಹೊರ ಹೋಗುತ್ತಿದ್ದು, ತೂಬು ಎತ್ತುವುದರ ಮೂಲಕ ನೀರನ್ನು ಹೊರಹಾಕಿ ಕೆರೆ ಏರಿಯನ್ನು ಸರಿಪಡಿಸುವಂತೆ ತಹಸಿಲ್ದಾರ್ ಸದ್ಯಕ್ಕೆ ಆದೇಶ ನೀಡಿದ್ದಾರೆ ಎಂದು ಮಾಹಿತಿ ಒದಗಿದೆ.
ಸುಮಾರು ನೂರು ವರ್ಷಕ್ಕೂ ಹಳೆಯದಾದ ಥರಟಿ ಗ್ರಾಮದ ಕೆರೆಯ ಏರಿ ಬಿರುಕು ಬಿಟ್ಟಿರುವುದು ಸಹಜವಾಗಿ ಗ್ರಾಮಸ್ಥರಲ್ಲಿ ಆತಂಕ ಮಾಡಿದ್ದು ತಾಲೂಕು ಆಡಳಿತಕ್ಕೆ ಏರಿ ಸರಿಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗ್ರಾಮಕ್ಕೆ ತಹಸಿಲ್ದಾರ್ ಮಂಜುನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪೂರ್ವ, ಎಇಇ ಕೀರ್ತಿ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ಕಾರ್ಯ ಕೈಗೊಂಡಿದ್ದಾರೆ.