ಕರ್ನಾಟಕ ಶಿಕ್ಷಣ ಇಲಾಖೆ 5, 8, 9 ತರಗತಿಗಳ ಪಬ್ಲಿಕ್ ಪರೀಕ್ಷೆ ವಿಚಾರದಲ್ಲಿ ಸೋಮವಾರ ತೆಗೆದುಕೊಂಡಿರುವ ನಿರ್ದಾರ ಸ್ವಾಗತಾರ್ಹ ಎಂದು ರೂಪ್ಸಾ ಅಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿಯಾಗಿರುವ ಲೋಕೇಶ್ ತಾಳಿಕಟ್ಟೆರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಳೆದ 8 – 9 ತಿಂಗಳಿನಿಂದ ರೂಪ್ಸಾ ಸಂಘಟನೆಯ ವತಿಯಿಂದ ಈ ಪರೀಕ್ಷೆಗಳನ್ನು ಬೋರ್ಡ್ ಪರೀಕ್ಷೆಯನ್ನಾಗಿ ಮಾಡಬೇಡಿ, ಶಾಲಾ ಪರೀಕ್ಷೆಯನ್ನಾಗಿ ಮಾಡಿ ಎಂದು ನಾವು ಸತತವಾಗಿ ಒತ್ತಾಯ ಮಾಡುತ್ತಿದ್ದೇವು, ನಮ್ಮ ಒತ್ತಾಯಕ್ಕೆ ಸಂದ ಜಯವಾಗಿದೆ, ಶಾಲಾ ಹಂತದಲ್ಲಿಯೇ ಪರೀಕ್ಷೆ ನಡೆಸುವುದು, ಮಕ್ಕಳನ್ನು ತೇರ್ಗಡೆ ಮಾಡುವಂತದ್ದು ಶಿಕ್ಷಣ ಹಕ್ಕು ಅಧಿನಿಯಮದ ಒಂದು ಭಾಗವಾಗಿದೆ ಎಂದು ನಾವು ಸರ್ಕಾರಕ್ಕೆ ಮನವರಿಕೆ ಮಾಡಿಕೊಂಡು ಬಂದಿದ್ದೆವು ಎಂದರು.
ಶಿಕ್ಷಣ ಮಂತ್ರಿಗಳು ಸೇರಿದಂತೆ ಸರ್ಕಾರ ಅವೈಜ್ಞಾನಿಕವಾಗಿ ಶಾಲಾ ಮಟ್ಟದಲ್ಲಿಯೇ ನಡೆಸುವಂತಹ ಪರೀಕ್ಷೆಗಳನ್ನು ಬೋರ್ಡ್ ಪರೀಕ್ಷೆಗಳನ್ನು ಮಾಡುವುದರ ಮೂಲಕ ಮಕ್ಕಳಿಗೆ ಹೊರೆಯನ್ನು ಹಾಕುವಂತಹ ಕೆಲಸವಾಗುತ್ತಿತ್ತು, ಜೊತೆಗೆ ಅದು ಕಾನೂನು ಬಾಹಿರ ಸಹ ಆಗಿತ್ತು, ಹಾಗಾಗಿ ನಾವು ಸಹ ಕಾನೂನು ಹೋರಾಟವನ್ನು ಮಾಡಿದ್ದೆವು, ತದನಂತರ ತಡವಾಗಿಯಾದರೂ ಶಿಕ್ಷಣ ಇಲಾಖೆಯು ಇದೀಗ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ ವಿಷಯವಾಗಿದೆ ಎಂದು ತಿಳಿಸಿದರು.
2024-25ನೇ ಶೈಕ್ಷಣಿಕ ವರ್ಷದಲ್ಲಿ ಈ ಹಿಂದೆ ಇದ್ದಂತೆಯೇ ಶಾಲಾ ಮಟ್ಟದಲ್ಲಿಯೇ 5, 8, 9ನೇ ತರಗತಿಗಳಿಗೆ ಪರೀಕ್ಷೆಗಳು ನಡೆಯಲಿವೆ, ಇದಕ್ಕೆ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳ ನಿರ್ಧಾರದಿಂದ ರೂಪ್ಸಾ ಕರ್ನಾಟಕ ಹರ್ಷವನ್ನು ಸಹ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.