ಇತ್ತೀಚೆಗಷ್ಟೇ ನಡೆದ ಸಿ.ಇ.ಟಿ. ಪರೀಕ್ಷೆಯಲ್ಲಿ ಸುಮಾರು 46 ಅಂಕದ ಪ್ರಶ್ನೆಗಳು ಹೊರ ಪಠ್ಯದಿಂದ ಕೇಳಲಾಗಿದ್ದು, ಇದರಿಂದ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದು, ಕೂಡಲೇ ಸರ್ಕಾರ ಮರು ಪರೀಕ್ಷೆ ನಡೆಸುವಂತೆ ರೂಪ್ಸ ಕರ್ನಾಟಕ ಆಗ್ರಹಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೂಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಈ ಬಾರಿಯ ಸಿ.ಇ.ಟಿ. ಪರೀಕ್ಷೆಯಲ್ಲಿ ಪಿ.ಸಿ.ಎಂ.ಬಿ. ಸೇರಿದಂತೆ ನಾಲ್ಕು ವಿಷಯಗಳಲ್ಲಿ ಒಟ್ಟು 46 ಪ್ರಶ್ನೆಗಳು ಹೊರ ಪಠ್ಯ ವಿಷಯದಿಂದ ಕೇಳಲಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿದಂತಾಗಿದೆ. ಸುಮಾರು ಎರಡು ವರ್ಷಗಳಿಂದ ಶ್ರಮಪಟ್ಟು ಸಿಇಟಿ ಪರೀಕ್ಷೆಗೆ ತಯಾರಾಗಿ ಉತ್ತಮ ಭವಿಷ್ಯದ ಕನಸು ಹೊತ್ತಿದ ವಿದ್ಯಾರ್ಥಿಗಳಿಗೆ ಈ ರೀತಿಯಾಗಿ ಪ್ರಶ್ನೆಗಳನ್ನು ಕೇಳಿರುವುದು ಅವರ ಶೈಕ್ಷಣಿಕ ಭವಿಷ್ಯವನ್ನೇ ಬುಡಮೇಲು ಮಾಡಿದಂತಾಗಿದೆ.
ಉತ್ತಮವಾಗಿ ಅಧ್ಯಯನ ಮಾಡಿ ಪರೀಕ್ಷೆಗೆ ಸಿದ್ಧರಾದ ವಿದ್ಯಾರ್ಥಿಗಳು ಸಹ ನಿರೀಕ್ಷಿತ ಅಂಕಗಳಿಸುವಲ್ಲಿ ವಿಫಲರಾಗಿ ದಿಕ್ಕು ತೋಚದಂತೆ ಪರೀಕ್ಷಾ ಕೇಂದ್ರಗಳಲ್ಲಿ ಅಸಹಾಯಕರಾಗಿ ಕುಳಿತುಕೊಳ್ಳುವಂತೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮಾಡಿದೆ ಎಂದರು .
ಶಿಕ್ಷಣ ಇಲಾಖೆ ನಿರಂತರವಾಗಿ ಎಡವಟ್ಟುಗಳನ್ನು ಮಾಡುತ್ತಾ ಬಂದಿದ್ದು ಇಡೀ ಶಿಕ್ಷಣ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ಕೆಟ್ಟ ಸ್ವರೂಪವನ್ನು ಪಡೆದುಕೊಳ್ಳುವ ನಿದರ್ಶನಗಳು ನಮ್ಮ ಮುಂದಿವೆ. ಬೋರ್ಡ್ ಪರೀಕ್ಷೆ ವಿಚಾರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಿಸಿ ಕ್ಯಾಮೆರಾ ಅಳವಡಿಸುವುದು ಹಾಗೂ ಇನ್ನಿತರೆ ಅವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಶಿಕ್ಷಣ ಇಲಾಖೆಯ ಗೌರವವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತಿದೆ. ಇದಕ್ಕೆ ಇಂಬು ಕೊಡುವಂತೆ ಸಿಇಟಿ ಪರೀಕ್ಷೆಯಲ್ಲಿ ಹೊರಪಟ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದರ ಮೂಲಕ ರಾಜ್ಯದ ಸುಮಾರು ಮೂರುವರೆ ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ಕ್ರಮವನ್ನು ಅನುಸರಿಸಿದ್ದು ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಹಾಗೂ ಯಾವುದೇ ಗ್ರೇಸ್ ಅಂಕಗಳನ್ನು ನೀಡದೇ ಮತ್ತೊಮ್ಮೆ ನಿಯಮಾನುಸರ ಸಿಇಟಿ ಪರೀಕ್ಷೆಯನ್ನು ನಡೆಸುವುದರ ಮೂಲಕ ರಾಜ್ಯದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.