5, 8, 9 ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು ಇದನ್ನು ರೂಪ್ಸಾ ಕರ್ನಾಟಕ ಸ್ವಾಗತಿಸುತ್ತದೆಂದು ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದರು. ಕರ್ನಾಟಕ ಸರ್ಕಾರ ನಡೆಸಿದ್ದ ಬೋರ್ಡ್ ಪರೀಕ್ಷೆ ಫಲಿತಾಂಶವನ್ನು ತಡೆ ಹಿಡಿಯುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದ ಹಿನ್ನಲೆಯಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿ ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆ ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಿರಂಕುಶಾಧಿಕಾರಿಗಳಂತೆ ವರ್ತಿಸಿ, ಹಠಕ್ಕೆ ಬಿದ್ದು 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಿದ್ದು, ಇದರ ಪ್ರಸ್ತುತತೆ ಪ್ರಶ್ನಿಸಿ ರೂಪ್ಸಾ ಕರ್ನಾಟಕ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿತ್ತು, ಅಂತಿಮವಾಗಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು ಇಂದು ರಾಜ್ಯ ಸರ್ಕಾರ ಪ್ರಕಟಿಸಬೇಕಾಗಿದ್ದ 5, 8 ಮತ್ತು 9ನೇ ತರಗತಿಗಳ ಫಲಿತಾಂಶ ತಡೆ ಹಿಡಿದಿದ್ದು, ಈ ಪರೀಕ್ಷೆಗಳು ಅಸಿಂಧು ಎಂದು ಆದೇಶ ನೀಡಿದೆ.
ಈ ಬೋರ್ಡ್ ಪರೀಕ್ಷೆ ಶಿಕ್ಷಣ ಹಕ್ಕು ಅಧಿನಿಯಮಕ್ಕೆ ವಿರುದ್ಧವಾಗಿದ್ದು ಹಾಗೂ ಆರ್.ಟಿ.ಇ. ನಿಯಮಗಳಿಗೆ ಮಾರಕವಾಗಿದೆಂದು ಇದನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂಬ ವಾದಕ್ಕೆ ಮನ್ನಣೆ ದೊರೆತಿದೆ. ಆದುದರಿಂದ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮುಂದೆ ಈ ರೀತಿಯಾದ ತಪ್ಪುಗಳು ಆಗದಂತೆ ನೋಡಿಕೊಂಡು ಮಕ್ಕಳ ಶೈಕ್ಷಣಿಕ ಹಕ್ಕನ್ನು ರಕ್ಷಿಸಬೇಕು, ಮುಂದೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಈ ಹಿಂದೆ ನಡೆಸಿರುವ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶವನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.
ಸಣ್ಣ ವಯಸ್ಸಿನ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯನ್ನು ಸರ್ಕಾರ ನಡೆಸಿ ಸಾಧಿಸುವುದಾದರೂ ಏನು? ಎಷ್ಟೋ ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ತಮ್ಮ ಶೈಕ್ಷಣಿಕ ಭವಿಷ್ಯವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ದೇಶದಲ್ಲಿ ಸಂವಿಧಾನ ಬದ್ಧವಾಗಿ ಶಿಕ್ಷಣ ನೀಡುವ ಕರ್ತವ್ಯ ಹೊಂದಿರುವ ಸರ್ಕಾರ ತಾನೇ ರೂಪಿಸಿದ ನಿಯಮಗಳ ನಡೆದರೇ ಯಾರು ಇದಕ್ಕೆ ಹೊಣೆ ಆದ ಕಾರಣ ಯಾವುದೇ ರೀತಿಯಾದ ಎಡವಟ್ಟುಗಳಿಗೆ ಅವಕಾಶ ಮಾಡಿಕೊಡದೇ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಏನೆಲ್ಲಾ ಕ್ರಮವಹಿಸಬೇಕೋ ಅದನ್ನು ತೆಗೆದುಕೊಂಡು ಖಾಲಿಯಿರುವ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಿ ಮೂಲಭೂತ ಸೌಕರ್ಯ ಒದಗಿಸಿದಾಗ ಮಾತ್ರ ಶಿಕ್ಷಣಕ್ಕೆ ಅರ್ಥ ಬರುತ್ತದೆ ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮವಹಿಸಬೇಕೆಂದು ಆಗ್ರಹಿಸಿದರು.