ತುಮಕೂರು : ನಗರದ ಡಾ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಹಿರೇಮಠದ ಡಾ. ಶ್ರೀ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಜನ್ಮವರ್ಧಂತಿ ಪ್ರಯುಕ್ತ ಸತ್ಯಕೀರ್ತಿ ಕಲಾ ಸಂಘದ ಉದ್ಘಾಟನೆ ಮತ್ತು ರಂಗಗೀತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನೂತನ ಸಂಘವನ್ನು ಉದ್ಘಾಟಿಸಿ ವಿಶೇಷ ಆಶೀರ್ವಾಚನ ಮಾಡಿದ ಶ್ರೀಗಳು ತನ್ನ ಹುಟ್ಟಿದ ಹಬ್ಬದಂದು ಸತ್ಯಕೀರ್ತಿ ಕಲಾ ಸಂಘದ ರಂಗಭೂಮಿ ಕಲಾವಿದರು ತಮ್ಮ ಸಂಘವನ್ನು ಲೋಕಾರ್ಪಣೆ ಮಾಡಿಕೊಳ್ಳುತ್ತಿರುವುದಲ್ಲದೇ ಬೆಳಿಗ್ಗೆಯಿಂದಲೇ ಸಾವಿರಾರು ಜನರಿಗೆ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆಯನ್ನು ಮಾಡಿಸಿದ್ದಾರಾಲ್ಲದೇ ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ನನಗೆ ತುಂಬಾ ಸಂತೋಷ ತಂದಿದೆ, ಇಷ್ಟೂ ಸಾಲದು ಎಂಬಂತೆ ವಿಶೇಷಚೇತನರಿಗೆ ವ್ಹೀಲ್ ಚೇರ್ ವಿತರಣೆ, ಬಡ ಅನಾಥ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಪಠ್ಯದ ಸಲಕರಣೆಗಳನ್ನು ನೀಡಿ ಅವರ ವಿದ್ಯಾರ್ಜನೆಗೆ ಸಹಕಾರಿಗಳಾಗಿದ್ದಾರೆ.
ಈ ಸಂಘದವರು ಇನ್ನೂ ಮುಂದುವರೆದು ತೆರೆಯ ಹಿಂದೆ ಶ್ರಮಿಸುವ ಮೇಕಪ್ ಆರ್ಟಿಸ್ಟ್, ವಸ್ತ್ರಾಲಂಕಾರ ಕಲಾವಿದರು, ರಂಗಸಜ್ಜಿಕೆ ಕಲಾವಿದರು, ವಾದ್ಯಗಾರರು ಸೇರಿದಂತೆ ರಂಗಕಲಾವಿದೆ ವಿಶೇಷವಾಗಿ ಮಂಗಳಮುಖಿಯನ್ನು ಗುರ್ತಿಸಿ ಅಭಿನಂದನೆ ಸಲ್ಲಿಸಿರುವುದು ಗಮರ್ನಾಹ ಸಂಗತಿ, ಇದಲ್ಲದೇ ಹಿರಿಯ ಪತ್ರಕರ್ತರನ್ನು ಸಹ ಗುರುತಿಸಿ ಸನ್ಮಾನಿಸಿದ್ದಾರೆ ಇದೊಂದು ವಿಶೇಷ ರೀತಿಯಾದ ಉದ್ಘಾಟನಾ ಸಮಾರಂಭ ನಾನು ಇದುವರೆವಿಗೂ ಈ ರೀತಿಯಾದ ವಿಭಿನ್ನವಾಗಿ ಆಲೋಚನೆ ಮಾಡಿ ಉದ್ಘಾಟನೆ ಮಾಡಿರುವುದು ಕಂಡಿಲ್ಲ, ಜೊತೆಗೆ ತಮ್ಮ ಸಂಘಕ್ಕೆ ಮತ್ತು ತಮ್ಮಗಳಿಗೆ ಇವರೆಲ್ಲರ ಶ್ರೀರಕ್ಷೆಯಿಂದ ತಮ್ಮ ಸಂಘವು ಮತ್ತಷ್ಟು ಅಭಿವೃದ್ಧಿ ಹೊಂದೆ ನೂರಾರು ಜನರಿಗೆ ಆಶ್ರಯಧಾತರಾಗುವಂತೆ ಆಗಲಿ ಎಂದು ಶುಭ ಹಾರೈಸಿದರು.
ಸತ್ಯಕೀರ್ತ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿರವರು ಮಾತನಾಡಿ ನಮ್ಮ ಸಂಘವನ್ನು ಶ್ರೀಗಳ ಹುಟ್ಟಿದಹಬ್ಬದ ದಿನದಂದೇ ಉದ್ಘಾಟನೆ ಮಾಡುತ್ತಿರುವುದು ನಮ್ಮ ಸುದೈವ ಏಕೆಂದರೆ ಅವರಂತೆಯೇ ನಮ್ಮ ಸಂಘವು ಸಹ ಹತ್ತಾರು ಜನರಿಗೆ ಆಶ್ರಯ ಮತ್ತು ನಮ್ಮ ಸಂಘದಿಂದ ಹಲವಾರು ಕಲಾವಿದರು ಈ ನಾಡಿಗೆ ಕೊಡುಗೆ ನೀಡುವಂತಾಗಲೀ ಎಂದು ಶ್ರೀಗಳ ಶುಭಹಾರೈಸಿರುವುದೇ ನಮ್ಮ ಸೌಭಾಗ್ಯ, ಅವರ ಆಶಯದಂತೆಯೇ ನಾವು ನಡೆಯುತ್ತೇವೆ, ಡಾ. ಗುಬ್ಬಿ ವೀರಣ್ಣರವರ ತವರು ಜಿಲ್ಲೆ ಅದರಲ್ಲಿಯೂ ಅವರ ನೆರಳಿನಲ್ಲಿಯೇ ನಾವು ನಮ್ಮ ಸಂಘವನ್ನು ಉದ್ಘಾಟನೆ ಮಾಡುತ್ತಿರುವುದು ನಮ್ಮ ಆಜನ್ಮ ಪುಣ್ಯವಾಗಿದ್ದು ಸಕಲ ಕಲಾವೃಂದದವರ ಶುಭಾಶೀರ್ವಾದ, ಸಲಹೆ ಹಾಗೂ ಸಹಕಾರದೊಂದಿಗೆ ನಾವು ಮುನ್ನಡೆಯುತ್ತೇವೆಂದು ಹೇಳಿದರು.
ಕೇಂದ್ರ ಸಂಗೀತ & ಸಾಹಿತ್ಯ ಅಕಾಡಮಿ ಪುರಸ್ಕೃತರು ಡಾ.ಲಕ್ಷ್ಮಣ್‌ದಾಸ್‌ರವರು ಮಾತನಾಡಿ ತಾವುಗಳು ತಮ್ಮ ಸಂಘವನ್ನಷ್ಟೇ ಉದ್ಘಾಟನೆ ಮಾಡುತ್ತಿಲ್ಲ, ನೀವುಗಳು ಜಿಲ್ಲೆಯಲ್ಲಿನ ಎಲ್ಲಾ ರಂಗಭೂಮಿ ಕಲಾವಿದರುಗಳನ್ನು ಆಹ್ವಾನಿಸಿ, ಆದರಿಸಿ, ಗೌರವಿಸಿ, ಅವರುಗಳಿಂದ ಶುಭಾಶೀರ್ವಾದ ಪಡೆದು ತಮ್ಮ ಸಂಘವನ್ನು ಮುನ್ನಡೆಸಿಕೊಂಡು ಹೋಗಲು ಅನುವಾಗಿರುವುದು ತುಂಬಾ ಸಂತೋಷಕರ ಸಂಗತಿ, ಕಲೆಯು ತಮ್ಮಗಳಿಗೆ ಸದಾ ಲಭಿಸಿ, ತಮ್ಮ ಕೈಯನ್ನು ಬಿಡದೇ ತಮ್ಮೊಟ್ಟಿಗೆ ಹತ್ತಾರು ಕಲಾವಿದರನ್ನು ಸೃಷ್ಠಿಸುವ ಕೆಲಸ ನಿಮ್ಮ ಸಂಘದಿಂದ ಆಗಲಿ ಎಂದು ಶುಭಾಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಸತ್ಯಕೀರ್ತಿ ಕಲಾ ಸಂಘದ ಸೋಮಶೇಖರ್, ಯೋಗೀಶ್ ಎಂ.ಹೆಚ್. ಕೃಷ್ಣಪ್ಪ, ಲಕ್ಷ್ಮೀಕಾಂತ್, ಮುತ್ತುರಾಜ್, ಕಾಳಿಂಗರಾವ್, ಶ್ರೀನಿವಾಸ ಬಾಬು, ಶಾಂತಕುಮಾರ್, ಮಂಜುನಾಥ್, ಮಾರುತಿ ಹೆಚ್.ಎನ್, ನಂಜುಂಡಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.