ತುಮಕೂರು : ದೆಹಲಿ ಸಂಸತ್ ನಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ 26 ಜನ ಬಿಜೆಪಿ ಸಂಸದರು ದೆಹಲಿಯಲ್ಲಿನ ಸೌತ್ ಬ್ಲಾಕ್ ನಲ್ಲಿರುವ ತಮ್ಮ ನಿವಾಸಗಳಲ್ಲಿ ಉಂಡು ಮಲಗಿದ್ದೇ ಸಾಧನೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ ಮಾತು ಇವರಿಗೆ ಅನ್ವಯಿಸುತ್ತದೆಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸಂಸದ ಬಸವರಾಜು ಸೇರಿ ರಾಜ್ಯದ ಇತರೆ ಸಂಸದರ ಮೇಲೆ ವಾಗ್ದಾಳಿ ನಡೆಸಿದರು.
ಹೆಗ್ಗೆರೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಮುದ್ದಹನುಮೇಗೌಡ ರವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿ ಕರ್ನಾಟಕಕ್ಕೆ ಕೀರ್ತಿ ತಂದಿದ್ದರು. ಆದರೆ ರಾಜ್ಯದಿಂದ ಚುನಾಯಿತರಾದ ಬಿಜೆಪಿ ಸಂಸದರುಗಳು ಎಂದಿಗೂ ಸಂಸತ್ ನಲ್ಲಿ ರಾಜ್ಯದ ಪರವಾಗಿ ತುಟಿ ಬಿಚ್ಚಿಲ್ಲ, ಉಂಡು ಮಲಗಿದ್ದೇ ಇವರ ಸಾಧನೆಯೆಂದು ಲೇವಡಿ ಮಾಡಿದರು.
ಬಿಜೆಪಿ ಪಕ್ಷಕ್ಕೆ ಇಡೀ ತುಮಕೂರು ಜಿಲ್ಲೆಯಲ್ಲಿ ಒಬ್ಬ ಅಭ್ಯರ್ಥಿ ಸಿಗದಷ್ಟು ಕೆಟ್ಟ ಕಾಲ ಬಂದಿದೆ. ಬಸವರಾಜುರವರು ದೇವೇಗೌಡ್ರು ಹೊರಗಿನವರು ಎಂದು ಭಾಷಣ ಮಾಡುತ್ತಾರೆ. ಹಾಗಾದರೆ ಹೊರಗಿನ ವಿ.ಸೋಮಣ್ಣ ಅವರನ್ನು ಕರೆತಂದು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಮಾಡಿದ್ದಾರೆ. ಸೋಮಣ್ಣನಿಗೂ ತುಮಕೂರಿಗೂ ಏನು ಸಂಬಂಧ, ಸಚಿವರಾಗಿದ್ದರು, ಉನ್ನತ ಹುದ್ದೆಯಲ್ಲಿದ್ದರು, ಆದರೆ ತುಮಕೂರಿಗೆ ಸೋಮಣ್ಣನವರ ಕೊಡುಗೆ ಏನು? ಚುನಾವಣೆ ಘೊಷಣೆ ಬಳಿಕ ಬಂದು ಉದ್ದುದ್ದ ಭಾಷಣ ಮಾಡುತ್ತಿದ್ದಾರೆ, ನಿಮಗೆ ತುಮಕೂರಿನ ಕಲ್ಪನೆ ಏನಿದೆ ಎಂದು ಡಾ. ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಮುದ್ದಹನುಮೇಗೌಡರವರು ಯಾರು ದೂರವಾಣಿ ಕರೆ ಮಾಡಿದರು ಸ್ವೀಕರಿಸುತ್ತಾರೆ, ಅಂತಹ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಎಂದರು. ಕಾರ್ಯಕ್ರಮದಲ್ಲಿ ಕೆ.ಎನ್.ರಾಜಣ್ಣ, ಮುರಳೀಧರ ಹಾಲಪ್ಪ, ಗೌರಿಶಂಕರ್, ಎಸ್.ಆರ್.ಶ್ರೀನಿವಾಸ್, ಹೆಚ್.ವಿ.ವೆಂಕಟೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.