ತುಮಕೂರು: ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಲು ಖಾಸಗಿ ಶಾಲೆ ಶಿಕ್ಷಕರು ತೀರ್ಮಾನಿಸಿದ್ದಾರೆ ಎಂದು ರುಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದರು.
ಅವರು ನಗರದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಶಿಕ್ಷಣ ಇಲಾಖೆ ಖಾಸಗೀ ಪ್ರೌಢಶಾಲಾ ಶಿಕ್ಷಕರನ್ನು ಎಸ್.ಎಸ್.ಎಲ್.ಸಿ. ಪರೀಕ್ಷಾ ಮೇಲ್ವಿಚಾರಣಾ ಕಾರ್ಯಕ್ಕೆ ನಿಯೋಜಿಸದೇ ಅವರನ್ನು ಅನುಮಾನಾಸ್ಪದ ರೀತಿಯಲ್ಲಿ ಕಂಡು ಅವಮಾನ ಮಾಡುವುದರ ಮೂಲಕ ಕಡೆಗಣಿಸಿ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸಿದೆ. ಶಿಕ್ಷಣ ನೀತಿಯ ಪ್ರಕಾರ ಸರ್ಕಾರಿ, ಅನುದಾನಿತ, ಹಾಗೂ ಅನುದಾನರಹಿತ ಶಾಲಾ ಶಿಕ್ಷಕರ ನಡುವೆ ಯಾವುದೇ ಸ್ಥಾನಮಾನದ ತಾರತಮ್ಯ ಇಲ್ಲ. ಆದರೂ ಸರ್ಕಾರ, ಶಿಕ್ಷಣ ಇಲಾಖೆ ಖಾಸಗೀ ಶಾಲಾ ಶಿಕ್ಷಕರನ್ನು ಕಡೆಗಣಿಸಿರುವುದು ಬೇಸರ ಮೂಡಿಸಿದೆ ಎಂದರು.
ಖಾಸಗೀ ಶಾಲೆಗಳು ರಾಜ್ಯದಲ್ಲಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮೊದಲ ಸ್ಥಾನದಲ್ಲಿದ್ದು, ಶಿಕ್ಷಕರು ನಿಷ್ಠೆಯಿಂದ ತಮ್ಮ ವೃತ್ತಿಯಲ್ಲಿ ತೊಡಗಿದ್ದಾರೆ. ಅವರನ್ನು ಪರೀಕ್ಷಾ ಕಾರ್ಯಕ್ಕೆ ಪರಿಗಣಿಸದೇ ನಿರ್ಲಕ್ಷಿಸಿರುವುದರಿಂದ ಖಾಸಗೀ ಶಾಲಾ ಶಿಕ್ಷಕರು, ಶಿಕ್ಷಕರ ಸಂಘ ರುಪ್ಸ ಕರ್ನಾಟಕ ಸಂಘಟನೆಯೊಂದಿಗೆ ಚರ್ಚಿಸಿ ಅಂತಿಮವಾಗಿ ಪರೀಕ್ಷಾ ಮೇಲ್ವಿಚಾರಣಾ ಕಾರ್ಯಕ್ಕೆ ತೆಗೆದುಕೊಳ್ಳದ ನಮ್ಮನ್ನು ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೂ ಕರೆಯಬೇಡಿ ಎಂಬ ತೀರ್ಮಾನಕ್ಕೆ ಬಂದು ಎಸ್.ಎಸ್.ಎಲ್.ಸಿ. ಉತ್ತರಪತ್ರಿಕೆ ಮೌಲ್ಯಮಾಪನ ಕಾರ್ಯವನ್ನು ಬಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.