ಪತ್ರಕರ್ತರನ್ನೇ ಮಾತನಾಡಿಸಲು ಬಿಡುವಿಲ್ಲದ ಸೋಮಣ್ಣನವರು ಸಾಮಾನ್ಯ ಜನರ ಕಷ್ಟ ನಷ್ಟಗಳಿಗೆ ಮುಂದಿನ ದಿನಗಳಲ್ಲಿ ಸ್ಪಂದಿಸುವರೇ?

ತುಮಕೂರು : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ವಿ. ಸೋಮಣ್ಣ ಅವರು ಆಯ್ಕೆಯಾದ ದಿನದಿಂದಲೂ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು ತಮ್ಮ ಪಕ್ಷದ ಕೆಲ ಮುಖಂಡರೊಟ್ಟಿಗೆ ಮಾತ್ರವೇ ಅವರು ಮಾತುಕತೆ ಮಾಡುವುದು, ಸುತ್ತಾಡುವುದು ಮಾಡುತ್ತಿರುವುದು ಎಲ್ಲೋ ಒಂದು ಕಡೆ ಅಸಂಖ್ಯಾತ ಕಾರ್ಯಕರ್ತರಲ್ಲಿ ಬೇಸರವನ್ನುಂಟು ಮಾಡಿದೆ. ಅದೂ ಅಲ್ಲದೇ ತುಮಕೂರು ಲೋಕಸಭಾ ಕ್ಷೇತ್ರವು ಬಿಜೆಪಿ ಮತ್ತು ಜೆಡಿಎಸ್ ಒಂದಾಣಿಕೆಯ ಕ್ಷೇತ್ರವಾಗಿದೆ.

 

 

 

ಆದರೆ ಸೋಮಣ್ಣನವರು ಬರೀ ಬಿಜೆಪಿ ಪಕ್ಷದ ಬೆರಳಣಿಕೆ ಮತ್ತು ಪ್ರಭಾವಿ ಮುಖಂಡರೊಟ್ಟಿಗೆ ಅಷ್ಟೇ ಕಾಣಿಸಿಕೊಳ್ಳುತ್ತಿರುವುದು ಬಿಟ್ಟರೇ ಬಿಜೆಪಿ ಪಕ್ಷದ ತಳ ಹಂತದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆಂಬ ಕೂಗು ಬಿಜೆಪಿ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದೆ, ಇದರ ಬೆನ್ನಲ್ಲೇ ಜೆಡಿಎಸ್ ಪಕ್ಷದ ಕೆಲವೇ ಕೆಲವು ಮುಖಂಡರೊಂದಿಗೆ ಭೇಟಿ ಮಾಡಿರುವುದು ಬಿಟ್ಟರೇ ಯಾವೊಂದು ಘಟಕದ ಪದಾಧಿಕಾರಿಗಳನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ದುರಂತ ಎಂದು ಹೇಳಲಾಗಿದೆ.

 

 

 

 

ಇವುಗಳ ಬೆನ್ನ ಹಿನ್ನಲೆಯಲ್ಲಿಯೇ ಪತ್ರಕರ್ತರ ಕೆಂಗಣ್ಣಿಗೂ ಸಹ ಸೋಮಣ್ಣ ಗುರಿಯಾಗಿದ್ದು ಸ್ಥಳೀಯ ಪತ್ರಕರ್ತರು ಸಾಕಷ್ಟು ಭಾರಿ ಅವರನ್ನು ಮಾತನಾಡಿಸಲು ಪ್ರಯತ್ನಿಸಿದಾಗಿ ನಾಳೆ ಸಿಗುವೆ, ಆಮೇಲೆ ಸಿಗುವೆ ಎಂಬ ನಾಜೂಕು ಉತ್ತರವನ್ನು ಹೇಳಿ ಹೊರಟು ಹೋಗುತ್ತಿದ್ದಾರೆ. ಕಳೆದ 2 ದಿನಗಳ ಹಿಂದೆ ಸ್ಪೂರ್ತಿ ಡೆವಲಪರ್ಸ್ ಮಾಲೀಕರಾದ ಎಸ್.ಪಿ.ಚಿದಾನಂದ್ ಅವರ ಮನಃವೊಲಿಸಲು ಬೆಳ್ಳಂಬೆಳಿಗ್ಗೆ ಆಗಮಿಸಿದ್ದ  ವಿ.ಸೋಮಣ್ಣ, ಪತ್ರಕರ್ತರೊಬ್ಬರು ಪ್ರಶ್ನೆ ಕೇಳಲು ಮುಂದಾದರೆ ನಾನು ಹೇಳುವುದನ್ನು ಕೇಳ್ರೀ ಆಮೇಲೆ ನಿಮ್ಮ ಮಾತು ಕೇಳುತ್ತೇನೆ ಎಂದು ಸ್ವಲ್ಪ ಏರು ಧ್ವನಿಯಲ್ಲಿಯೇ ಹೇಳಿದ್ದು ಉಂಟು. ಜೊತೆಗೆ ಅಂದು ಚಿದಾನಂದ್ ಒಟ್ಟಿಗೆ ಅವರು ಏನು ಮಾತನಾಡಬೇಕು ಎಂದು ಸಿದ್ಧವಾಗಿದ್ದರೋ ಅದನ್ನಷ್ಟೇ ಹೇಳಿ ಹೊರಟರು, ಪತ್ರಕರ್ತರು ಕೆಲ ಪ್ರಶ್ನೆಗಳನ್ನು ಕೇಳಲು ಹೊರಟಾಗ ಸಭೆಯಿಂದ ಎದ್ದು ಹೊರಡಲು ಮುಂದಾಗಿದ್ದು ಸತ್ಯ, ಜೊತೆಗೆ ಮೀಡಿಯಾ ಬೈಟ್ ಸಹ ನೀಡದೇ ಹೊರಟು ಹೋದರು.

 

 

 

ಮಾಜಿ ಸಚಿವರಾದ ಸೊಗಡು ಶಿವಣ್ಣ ರವರ ಮನೆಗೆ ಅಂದು ಸಂಜೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಸಹ ಕೆಲ ಪತ್ರಕರ್ತರಿಗೆ ಮಾತ್ರ ಆಹ್ವಾನ ಮಾಡಿ, ಅಸಂಖ್ಯಾತ ಪತ್ರಕರ್ತರನ್ನು ಕಡೆಗಣಿಸಿದ್ದಾರೆ, ಜೊತೆಗೆ ಅಂದು ಸಹ ಮೀಡಿಯಾ ಬೈಟ್ ನೀಡದೇ ಸೌಜನ್ಯ ಭೇಟಿ ಎಂದು ಹೇಳಿ ಹೊರಟು ಹೋಗಿದ್ದಾರೆ.

 

 

 

 

ಇದರ ಬೆನ್ನಲ್ಲಿಯೇ ಇಂದು ತಿಪಟೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಂತಹ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸುದ್ದಿಗೋಷ್ಠಿಯಿಂದ ಹೊರನಡೆದ ಘಟನೆ ನಡೆದಿದೆ. ಈ ವೇಳೆ, ಕೇಂದ್ರ ಸರ್ಕಾರದಿಂದ ಬರುತ್ತಿರುವ ವಿದ್ಯಾರ್ಥಿ ವೇತನ ವಿತರಣೆ ತಡವಾಗಲು ಕಾರಣವೇನು? ಕೊಬ್ಬರಿ ಬೆಲೆ ನಿರಂತರ ಕುಸಿಯಲು ಕಾರಣವೇನು? ತಿಪಟೂರಿನ ಮೂಲಕ ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿದ್ದವು. ಈಗ ಸ್ಥಗಿತಗೊಳಿಸಲು ಕಾರಣವೇನು ಎಂಬ ಪರ್ತಕರ್ತರ ಪ್ರಶ್ನೆಗಳಿಗೆ ಬಿಜೆಪಿ ಅಭ್ಯರ್ಥಿ ಉತ್ತರಿಸಲು ತಡಬಡಾಯಿಸಿದರು. ಕೊನೆಗೆ ಉತ್ತರಿಸಲಾಗದೆ ಸುದ್ದಿಗೋಷ್ಠಿಯಿಂದ ಹೊರ ನಡೆದರು.

 

 

ಇದಾದ ನಂತರ ತುಮಕೂರು ನಗರದ ಭದ್ರಮ್ಮ ವೃತ್ತದಲ್ಲಿರುವ ಬಿಜೆಪಿ ಕಛೇರಿಯಲ್ಲಿ ನಗರ ಶಾಸಕ ಜ್ಯೋತಿಗಣೇಶ್, ವಿಧಾನಪರಿಷತ್ ಶಾಸಕ ವೈ.ಎ.ನಾರಾಯಣ ಸ್ವಾಮಿ, ಚಿದಾನಂದ್ ಗೌಡ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯನ್ನು ನಡೆಸಿದರು, ಪತ್ರಿಕಾಗೋಷ್ಠಿಯ ನಂತರ ಕಛೇರಿಗೆ ಆಗಮಿಸಿದ್ದ ವಿ.ಸೋಮಣ್ಣರವರನ್ನು ಮಾತನಾಡಿಸಲು ಕೆಲ ಪತ್ರಕರ್ತರು ತೆರಳಿದ್ದ ವೇಳೆ ಯಾರನ್ನೂ ಮಾತನಾಡಿಸದೇ ಬಹು ಬೇಜವಾಬ್ದಾರಿಯಿಂದ ಹೊರ ಹೋದ ಘಟನೆ ಸಂಭವಿಸಿದೆ.

 

 

ಹಾಗಾದರೆ ಪತ್ರಕರ್ತರೊಟ್ಟಿಗೆ ಮಾತನಾಡುವ ಸಮಯವಕಾಶ ಇವರಿಗೆ ಇಲ್ಲವೇ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಹೆದರಿಕೆಯೇ, ಪತ್ರಕರ್ತರೆಂದರೆ ಇವರಿಗೆ ಭಯವೇ? ಹೀಗೇ ನಾನಾ ರೀತಿಯ ಪ್ರಶ್ನೆಗಳು ಪತ್ರಕರ್ತರಿಗೆ ಮೂಡಿದೆ.

 

ಪತ್ರಕರ್ತರನ್ನೇ ಮಾತನಾಡಿಸಲು ಬಿಡುವಿಲ್ಲದ ಸೋಮಣ್ಣನವರು ಸಾಮಾನ್ಯ ಜನರ ಕಷ್ಟ ನಷ್ಟಗಳಿಗೆ ಮುಂದಿನ ದಿನಗಳಲ್ಲಿ ಸ್ಪಂದಿಸುವರೇ?

Leave a Reply

Your email address will not be published. Required fields are marked *

error: Content is protected !!